ಉತ್ತರ ಕನ್ನಡ

ಸ್ತ್ರೋತ್ರ ಪಾರಾಯಣದಿಂದ ಸಂಕಷ್ಟ ದೂರ

Published On :

ಕನ್ನಡಪ್ರಭ ವಾರ್ತೆ ಯಲ್ಲಾಪುರ, ಜ. 25
ಆದಿಶಂಕರಾಚಾರ್ಯರು ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. ಆ ಸ್ತ್ರೋತ್ರಗಳನ್ನು ಸರಿಯಾಗಿ ವಿದ್ವಾಂಸರಿಂದ ತಿಳಿದು, ನಿತ್ಯವೂ ಪಾರಾಯಣ ರೂಪದಲ್ಲಿ ಶುದ್ಧ ಮನಸ್ಸಿನಿಂದ ಮಾಡಿದರೆ ಜೀವನದಲ್ಲಿ ಬರುವ ಅನೇಕ ಸಂಕಷ್ಟಗಳು ಪರಿಹಾರವಾಗುತ್ತವೆ. ಮನೆಯಲ್ಲಿರುವ ಎಲ್ಲ ಸದಸ್ಯರು ಮತ್ತು ಮಕ್ಕಳು ಕಡ್ಡಾಯವಾಗಿ ಈ ಸ್ತ್ರೋತ್ರಗಳನ್ನು ಪಠಿಸುವುದರಿಂದ ಸಮಸ್ಯೆಗೆ ದಿವ್ಯೌಷಧಿ ದೊರೆತಂತಾಗುತ್ತದೆ. ಶ್ರೇಷ್ಠ ಜೀವನವೂ ನಿಮ್ಮದಾಗುತ್ತದೆ ಎಂದು ಮೈಸೂರಿನ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳು ನುಡಿದರು.
ಅವರು ಬುಧವಾರ ಸಂಜೆ ನಾಯಕನಕೆರೆಯ ಶಾರದಾಂಬಾ ಮಂದಿರದಲ್ಲಿ ವೇದಾಂತ ಭಾರತೀಯ ಕುರಿತಾಗಿ ಮತ್ತು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಇಂದು ವಿಜ್ಞಾನ ಎಷ್ಟೇ ಮುಂದುವರೆದರೂ ಕ್ಯಾನ್ಸರ್, ಪೀಡ್ಸ್, ಡಯಾಬಿಟಿಸ್, ಮೂಲವ್ಯಾಧಿ, ಚರ್ಮರೋಗದಂತಹ ಅನೇಕ ಕಾಯಿಲೆಗಳು ವಾಸಿಯಾಗುತ್ತಿಲ್ಲ. ಎಂತಹ ರೋಗಗಳೂ ಕೂಡ ಶಂಕರಾಚಾರ್ಯರು ನಮಗೆ ನೀಡಿದ ಸ್ತ್ರೋತ್ರದ ನಿರಂತರ ಪಾರಾಯಣದಿಂದ ವಾಸಿಯಾಗಿರುವುದನ್ನು ನಾವು ಪ್ರತ್ಯಕ್ಷ ಕಂಡಿದ್ದೇವೆ. ಚರ್ಮರೋಗಕ್ಕೆ ನರಸಿಂಹ ಪಂಚಾಕ್ಷರಿ ಸ್ತ್ರೋತ್ರವನ್ನು ನಿತ್ಯ ಪಾರಾಯಣ ಮಾಡಿದರೆ ಚರ್ಮರೋಗ ವಾಸಿಯಾಗುತ್ತದೆ. ಸುಬ್ರಹ್ಮಣ್ಯ ಭುಜಂಗ, ಗೌರಿದಶಕಂ, ಹರಿಸ್ತುತಿ, ರಾಮ ಭುಜಂಗ, ಪ್ರಯಾತ ಅಲ್ಲದೇ ಸೌಂದರ್ಯ ಲಹರಿಯ ಅನೇಕ ಸ್ತ್ರೋತ್ರಗಳನ್ನು ಪಠಿಸುವುದರಿಂದ ನಮ್ಮ ಎಲ್ಲ ಸಮಸ್ಯೆಗಳು ಮಾಯವಾಗುತ್ತವೆ. ಇದನ್ನು ಕಾಟಾಚಾರಕ್ಕೆ ಮಾಡಿದರೆ ಆಗದು. ಪರಿಪೂರ್ಣ ಮನಸ್ಸು, ಶ್ರದ್ಧೆ-ಭಕ್ತಿಯಿಂದ ಮಾಡಿದರೆ ಖಂಡಿತ ಶ್ರೇಯಸ್ಸು ದೊರೆಯುತ್ತದೆ. ಅನೇಕರಿಗೆ ಇದರಿಂದ ಪ್ರಯೋಜನವಾಗಿರುವುದನ್ನು ಅನೇಕ ವೈದ್ಯರಿಂದಲೂ ಬಗೆಹರಿಯದ ಕಾಯಿಲೆಗಳು ಕಡಿಮೆಯಾಗಿರುವುದನ್ನು ಅನೇಕರು ನಮ್ಮ ಬಳಿ ಹೇಳಿದ್ದಾರೆ ಎಂದರು.
ವೇದಾಂತ ಭಾರತಿ ಸಂಸ್ಥೆಯಡಿ 'ಆನಂದ ಸಿಂಧು' ಎಂಬ ಅಭಿಯಾನವನ್ನು ರಾಜ್ಯಾದಂತ ಹಮ್ಮಿಕೊಂಡಿದ್ದೇವೆ. ಮೇ. 4ರಂದು 3 ಲಕ್ಷ ಜನ ಸೇರಿ, ಈ ಆನಂದ ಸಿಂಧು ಅಭಿಯಾನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ಅದಕ್ಕೂ ಮುಂಚೆ ಅನೇಕ ಜಿಲ್ಲೆ, ವಿಭಾಗಗಳಲ್ಲಿ ಸಮರ್ಪಣೆ ಕಾರ್ಯಕ್ರಮವನ್ನು ನಡೆಸಲು ಕಾರ್ಯೋನ್ಮುಖರಾಗಿದ್ದೇವೆ ಎಂದು ನುಡಿದರು. ವೇದಾಂತ ಭಾರತೀಯ ನಿರ್ದೇಶಕ ಡಾ. ಶ್ರೀಧರ ಭಟ್ಟ ಐನಕೈ ಮಾತನಾಡಿ, ಎಡತೊರೆ ಮಠದ ಮೂಲಕ ಈವರೆಗೆ ನಾಡಿನಾದ್ಯಂತ ಯಾವ ಯಾವ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಪ್ರಸಕ್ತ ಈ ವರ್ಷ ಹಮ್ಮಿಕೊಂಡ ಆನಂದ ಸಿಂಧು ಕಾರ್ಯಕ್ರಮದ ರೂಪುರೇಷೆಗಳ ಕುರಿತಾಗಿ ವಿವರಿಸಿದರು.
ಸ್ವರ್ಣವಲ್ಲೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ವಿ. ಶಂಕರ ಭಟ್ಟ ಬಾಲೀಗದ್ದೆ ಪ್ರಾಸ್ತಾವಿಕ ಮಾತನಾಡಿದರು. ಶಾರಾದಾಂಬಾ ದೇವಸ್ಥಾನದ ಅಧ್ಯಕ್ಷ ಡಿ. ಶಂಕರ ಭಟ್ಟ ಸ್ವಾಗತಿಸಿದರು. ಗೌ. ಕಾರ್ಯದರ್ಶಿ ಶಂಕರ ಭಟ್ಟ ತಾರೀಮಕ್ಕಿ ವಂದಿಸಿದರು. ಮುಕ್ತಾ ಶಂಕರ ಮತ್ತು ಕಾವೇರಿ ನಾಗೇಶ ಮಳಲಗಾಂವ, ಶಂಕರಾಚಾರ್ಯರ ಮೀನಾಕ್ಷಿ ಪಂಚರತ್ನ ಕವನ ಪಠಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.