ಉತ್ತರ ಕನ್ನಡ

ನಾಳೆಯಿಂದ ಸಿಐಟಿಯು ಸಮ್ಮೇಳನ

Published On :

ಕನ್ನಡಪ್ರಭ ವಾರ್ತೆ, ಶಿರಸಿ, ಜ. 25
ನಗರದಲ್ಲಿ ಜ. 27ರಿಂದ 29ರ ವರೆಗೆ ಸಿಐಟಿಯುನ 12ನೇ ರಾಜ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನವು ಜ. 27ರಂದು ಸಾವಿರಾರು ದುಡಿಯುವ ಜನರ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ ಮೂಲಕ ಉದ್ಘಾಟನೆಗೊಳ್ಳಲಿದೆ ಎಂದು ಸಿಐಟಿಯುನ ಸಿ.ಆರ್. ಶಾನಭಾಗ ಹೇಳಿದರು.
ನಗರದ ಸಿಐಟಿಯು ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಿಐಟಿಯು ರಾಜ್ಯ ಸಮ್ಮೇಳನವನ್ನು ಸಂಘಟಿಸಲಾಗುತ್ತಿದೆ. ಜ. 27ರ ಬೆಳಗ್ಗೆ ಶಿರಸಿಯ ವಿವಿಧ ಕಡೆಗಳಿಂದ ಮೆರವಣಿಗೆ ಮೂಲಕ ಬಿಡಿಕಿಬೈಲ್ ತಲುಪುವ ಸಾವಿರಾರು ಕಾರ್ಮಿಕರು ಅಲ್ಲಿಂದ ಬಹಿರಂಗ ಸಭೆ ನಡೆಯುವ ವಿಕಾಸಾಶ್ರಮ ಮೈದಾನದವರೆಗೂ ಆಕರ್ಷಕ ಮೆರವಣಿಗೆ ನಡೆಸಲಿದ್ದಾರೆ ಎಂದರು.
ಮಧ್ಯಾಹ್ನ 1ಕ್ಕೆ ನಡೆಯಲಿರುವ ಬಹಿರಂಗ ಸಭೆ ಅಧ್ಯಕ್ಷತೆಯನ್ನು ಸಿಐಟಿಯು ರಾಜ್ಯ ಅಧ್ಯಕ್ಷ ವಿಜೆಕೆ ನಾಯರ್ ವಹಿಸಲಿದ್ದು, ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ತಪನ್ ಸೇನ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್, ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಎಸ್. ವರಲಕ್ಷ್ಮೀ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಸ್. ಶಂಕರ್ ಹಾಗೂ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ನಾಯಕರಿಗೆ ಆಹ್ವಾನ: ಸಮ್ಮೇಳನದ ಪ್ರತಿನಿಧಿ ಅಧಿವೇಶನದ ಉದ್ಘಾಟನೆ ಜ. 27ರ ಸಂಜೆ 5ಕ್ಕೆ ಕುಮಟಾ ರಸ್ತೆಯಲ್ಲಿರುವ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ನೇರವೇರಲಿದೆ. ನಂತರದ ಎರಡೂ ದಿನಗಳ ಅಧಿವೇಶನವು ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಸಿಐಟಿಯುವಿನ 2.5 ಲಕ್ಷ ಸದಸ್ಯರನ್ನು ಪ್ರತಿನಿಧಿಸಿ 300 ಮಹಿಳಾ ಮಹಿಳೆಯರು ಸೇರಿ ಒಟ್ಟು 750 ಪ್ರತಿನಿಧಿ, ವೀಕ್ಷಕರು ಹಾಗೂ ವಿವಿಧ ಸಂಘಟನೆಗಳ ಸೌಹಾರ್ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕೇಂದ್ರ ಕಾರ್ಮಿಕ ಸಂಘಟನೆಗಳಾದ ಬಿಎಂಎಸ್, ಐಎನಿಟಿಯುಸಿ, ಹೆಚ್‌ಎಂಎಸ್, ಎಐಯುಟಿಯುಸಿ, ಟಿಯುಸಿಸಿ ಹಾಗೂ ಎಐಟಿಯುಸಿ ಸಂಘಟನೆಗಳ ನಾಯಕರುಗಳನ್ನು ಆಹ್ವಾನಿಸಲಾಗಿದೆ. ಅವರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಫೆ. 20, 21ರಂದು ನಡೆಸಬೇಕಾದ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸುವ ಬಗ್ಗೆ ತೀರ್ಮಾನಿಸಲಾಗುವುದು.
ಸಮ್ಮೇಳನದ ಕೊನೆಯಲ್ಲಿ ಸಿಐಟಿಯುನ ಸಂವಿಧಾನದ ಪ್ರಕಾರವಾಗಿ ನೂತನ ಪದಾಧಿಕಾರಿಗಳನ್ನು ಒಳಗೊಂಡ ನಾಯಕತ್ವವನ್ನು ಆಯ್ಕೆ ಮಾಡಲಾಗುತ್ತದೆ. ಏಪ್ರಿಲ್ 4ರಿಂದ 8ರ ವರೆಗೆ ಕೇರಳದ ಕಣ್ಣೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಸಮ್ಮೇಳನಕ್ಕೆ ಭಾಗವಹಿಸಬೇಕಾದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದೆ. ಕೊನೆ ಎರಡು ದಿನಗಳ ಕಾಲ ಸಮ್ಮೇಳನದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಲಿರುವ ಸಿಐಟಿಯು ಅಖಿಲ ಭಾರತ ಅಧ್ಯಕ್ಷ ಎ.ಕೆ. ಪದ್ಮನಾಭನ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಶಾಂತಾರಾಮ ನಾಯಕ, ಅಧ್ಯಕ್ಷ ಸಿ.ಆರ್. ಶಾನಭಾಗ, ಕಾರ್ಯಾಧ್ಯಕ್ಷ ಹರೀಶ ನಾಯ್ಕ, ಖಜಾಂಜಿ ನಾಗಪ್ಪ ನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.