ಇಂದು ಉದ್ಘಾಟನೆ (ಸುದ್ದಿ ಸಂಕ್ಷೇಪ)
ಶಿರಸಿ: ಎಸ್ಎಫ್ಸಿ ಅನುದಾನದಡಿ ನಿರ್ಮಿಸಲಾದ ಶಿರಸಿಯ ಬಿಡಕಿಬೈಲಿನ ಮಹಾತ್ಮಾಗಾಂಧಿ ಪುತ್ಥಳಿಯ ನೂತನ ಕಟ್ಟಡ, ಸಿದ್ದಾಪುರ ರಸ್ತೆಯಲ್ಲಿ ಹಾಗೂ ಹುಬ್ಬಳ್ಳಿ ರಸ್ತೆಯಲ್ಲಿ ನಿರ್ಮಿಸಿರುವ ಸ್ವಾಗತ ಕಮಾನುಗಳ ಉದ್ಘಾಟನಾ ಸಮಾರಂಭ ಜ. 25ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ರು. 15.55 ಲಕ್ಷ ಅಂದಾಜು ವೆಚ್ಚದ ಈ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ನಗರಸಭಾಧ್ಯಕ್ಷ ಚಂದ್ರಶೇಖರ ಚಂದಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಸದ ಅನಂತಕುಮಾರ ಹೆಗಡೆ, ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ಕುರ್ಡೇಕರ, ನಗರಸಭೆ ಸ್ಥಾಯಿಸಮಿತಿ ಚೇರಮನ್ ಗಣಪತಿ ಎಲ್. ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಕೋರಲಾಗಿದೆ.
ಸಚಿವರಿಂದ ಧ್ವಜಾರೋಹಣ
ಕಾರವಾರ: ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಜ. 26ರ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಚಿವ ಆನಂದ ಅಸ್ನೋಟಿಕರ್, ಸಂಸದ ಅನಂತ ಕುಮಾರ ಹೆಗಡೆ, ಜಿಪಂ ಅಧ್ಯಕ್ಷ ಕೃಷ್ಣಾ ಗೌಡಾ, ಶಾಸಕರಾದ ಸುನೀಲ್ ಹೆಗಡೆ, ದಿನಕರ ಶೆಟ್ಟಿ, ವಿ.ಎಸ್. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಮೋಹನ್ ಲಿಂಬಿಕಾಯಿ, ಎಸ್.ಎಲ್. ಘೋಟ್ನೇಕರ್, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ವಿನೋದ ಪ್ರಭು, ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್, ತಾಪಂ ಅಧ್ಯಕ್ಷೆ ಆರತಿ ಬಾನಾವಳಿ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಇಂಕಾಂಗ್ಲೋ ಜಮೀರ್, ಜಿಲ್ಲಾ ಪೊಲೀಸ್ ವರಿಷ್ಠ ಕೆ.ಟಿ. ಬಾಲಕೃಷ್ಣ, ಜಿಪಂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಕೆ. ಸುಬ್ರಾಯ ಕಾಮತ್ ಇರುವರು.
ಇಂದು ಮತದಾರರ ದಿನ
ಹಳಿಯಾಳ: ಪಟ್ಟಣದಲ್ಲಿ ಜ. 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮತದಾರರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ವಿತರಿಸಲಾಗುವುದು.
ರೋಟರಿ ಕ್ಲಬ್ನಿಂದ ಚೆಸ್ ಪಂದ್ಯಾವಳಿ
ಹೊನ್ನಾವರ: ಹೊನ್ನಾವರ ರೋಟರಿ ಕ್ಲಬ್ ಆಶ್ರಯದಲ್ಲಿ ರೊ. ವಿಷ್ಣು ಬಾಳೇರಿಯವರ ಸ್ಮರಣಾರ್ಥ ಚದುರಂಗ ಸ್ಪರ್ಧೆಯನ್ನು ತಾಲೂಕಿನ ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಸ್ಡಿಎಂ ಕಾಲೇಜಿನಲ್ಲಿ ಆಯೋಜಿಸಲಾಯಿತು. ವಿ.ಆರ್. ಶಾಸ್ತ್ರೀ ಕಾರ್ಯಕ್ರಮ ಉದ್ಘಾಟಿಸಿದರು. ನಿರ್ಣಾಯಕರಾಗಿ ಪ್ರಭಾಕರ ಗೌಡ ಆಗಮಿಸಿದರು. ನ್ಯೂ ಇಂಗ್ಲಿಷ್ ಕನ್ನಡ ಮಾಧ್ಯಮ ಶಾಲೆಯ ಪ್ರಸಾದ ನಾಯ್ಕ, ಕಡತೋಕಾ ಜನತಾ ವಿದ್ಯಾಲಯದ ನರಸಿಂಹ ಹೆಗಡೆಕರ, ನ್ಯೂ ಇಂಗ್ಲಿಷ್ ಕನ್ನಡ ಮಾಧ್ಯಮ ಶಾಲೆಯ ಮನೋಜ ನಾಯ್ಕ ಮೊದಲ ಮೂರು ಸ್ಥಾನ ಗಳಿಸಿದರು. 4ರಿಂದ 7ನೇ ಸ್ಥಾನ ಗಳಿಸಿದವರಿಗೂ ಬಹುಮಾನ ನೀಡಲಾಯಿತು. ರೋಟರಿ ಅಧ್ಯಕ್ಷ ಜೆ.ಜೆ. ಡಿಸೋಜಾ, ಕಾರ್ಯದರ್ಶಿ ರಾಜೇಶ ನಾಯಕ, ವಿ.ಜಿ. ನಾಯ್ಕ, ಗಿರೀಶ್ ರಾವ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗೆ ಗಾಯ
ಭಟ್ಕಳ: ಶಿರಾಲಿಯಿಂದ ಭಟ್ಕಳದ ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಏರುತ್ತಿದ್ದ ವಿದ್ಯಾರ್ಥಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಶಿರಾಲಿ ಚೆಕ್ ಪೋಸ್ಟ್ ಬಳಿ ನಡೆದಿದೆ. ನಗರದ ಗುರುಸುಧೀಂದ್ರ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ಸಚ್ಚಿರಾಜ ಸುಬ್ರಹ್ಮಣ್ಯ ಶೇಟ್ (16) ಗಾಯಗೊಂಡ ವಿದ್ಯಾರ್ಥಿ. ಈತ ಬಸ್ ಹತ್ತುವಾಗಲೇ ಅದು ಚಲಿಸಿದ್ದರಿಂದ ಬಸ್ಸಿನಿಂದ ಕೆಳಗೆ ಬಿದ್ದು ತಲೆ, ಕೈ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯಗೊಂಡಿದ್ದಾನೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣಾ ಪಿಎಸ್ಐ ನವೀನಚಂದ್ರ ಜೋಗಿ ಬಸ್ ಚಾಲಕ ಮೋಹನ ನಾಯ್ಕ ಹಾಗೂ ನಿರ್ವಾಹಕ ಉಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಹೊನ್ನಾವರ: ಪಟ್ಟಣದ ಸೇಂಟ್ ಥೋಮಸ್ ಪ್ರೌಢಶಾಲೆಯ ಮೈದಾನದಲ್ಲಿ ಗುರುವಾರ ಏರ್ಪಡಿಸಿದ ಎರಡು ದಿನಗಳ ಗಣರಾಜ್ಯೋತ್ಸವ ಕ್ರಿಕೆಟ್ ಪಂದ್ಯಾವಳಿಗೆ ತಾಲೂಕು ದಂಡಾಧಿಕಾರಿ ಗಾಯತ್ರಿ ನಾಯಕ ಚಾಲನೆ ನೀಡಿದರು. ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ್ ನಾಯ್ಕ, ಪ್ರಾಯೋಜಕರಾದ ಸೇಪ್ಸ್ಟಾರ್ ಸ್ಪೋರ್ಟ್ಸ್ ಕ್ಲಬ್ನ ಸತ್ಯಾಜಾವಗಲ್ ಪಂದ್ಯಾವಳಿಗೆ ಶುಭ ಹಾರೈಸಿದರು. ಕಂದಾಯ ಇಲಾಖೆ ಹಾಗೂ ಪತ್ರಕರ್ತರ ತಂಡ, ಶಿಕ್ಷಣ ಇಲಾಖೆ ತಂಡ, ಆರೋಗ್ಯ ಇಲಾಖೆ ತಂಡ, ಪೊಲೀಸ್ ಇಲಾಖೆ ತಂಡ, ಹೆಸ್ಕಾಂ ಇಲಾಖೆ ತಂಡಗಳು ಈ ಪಂದ್ಯಾವಳಿಯಲ್ಲಿ ಸೆಣಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

