ಉತ್ತರ ಕನ್ನಡ

ಮಾಳಸಾ ಇಲೆವೆನ್ ತಂಡಕ್ಕೆ ಟ್ರೋಫಿ

Published On :

ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 12
ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಗಿಂಡಿದೇವಿ ಗೆಳೆಯರ ಬಳಗ ಈಚೆಗೆ ಆಯೋಜಿಸಿದ್ದ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಜುಬಾಗ ಮಾಳಸಾ ಇಲೆವೆನ್ ತಂಡ ವಿಜೇತ ತಂಡವಾಗಿ ಹೊರಹೊಮ್ಮಿತು.
ಅಂತಿಮ ಪಂದ್ಯದಲ್ಲಿ ಕಾಜುಬಾಗದ ಮಾಳಸಾ ಇಲೆವೆನ್ ಮತ್ತು ಹಣಕೋಣ ಸಾತೇರಿ ಮಾಂಡವಿ ಇಲೆವೆನ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಮಾಳಸಾ ಇಲೆವೆನ್ ತಂಡವು ಸಾತೇರಿ ಮಾಂಡವಿ ತಂಡಕ್ಕೆ 88 ರನ್ ಗಳಿಸಲು ಅವಕಾಶ ನೀಡಿತು. ನಂತರ ಬ್ಯಾಟಿಂಗ್ ಇಳಿದ ಮಾಳಸಾ ತಂಡದ ಆರಂಭಿಕ ಆಟಗಾರರು 50 ರನ್‌ಗಳ ಉತ್ತಮ ಜತೆಯಾಟ ನೀಡಿದರು. ತಂಡ ಕೇವಲ ಎರಡು ವಿಕೆಟ್ ಕಳೆದುಕೊಂಡು ಇನ್ನೂ ನಾಲ್ಕು ಎಸೆತ ಬಾಕಿ ಇರುವಾಗಲೇ ಗೆಲುವಿನ ಗುರಿ ತಲುಪಿತು. ಪಂದ್ಯಾವಳಿಯಲ್ಲಿ ಒಟ್ಟು 48 ತಂಡಗಳು ಭಾಗವಹಿಸಿದ್ದವು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಸದಸ್ಯ ಸತೀಶ ಸೈಲ್, ಕಾರವಾರದಲ್ಲಿ ಕ್ರೀಡಾಂಗಣದ ಆವಶ್ಯಕತೆಯಿದೆ. ಯುವ ಜನತೆ ಆಗ್ರಹಿಸಿದರೆ ಭವ್ಯ ಕ್ರೀಡಾಂಗಣ ಕಾರವಾರದಲ್ಲಿ ಆಗಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿ ಕ್ರೀಡಾಂಗಣ ನಿರ್ಮಿಸುವ ಪ್ರಯತ್ನ ಮಾಡುವುದಾಗಿ ಸೈಲ್ ತಿಳಿಸಿದರು.
ಬಹುಮಾನ ವಿತರಣೆ: ನ್ಯಾಯವಾದಿ ನಾಗರಾಜ ನಾಯಕ, ಅಖಿಲ ಕೋಮಾರಪಂಥ ಸಮಾಜದ ಅಧ್ಯಕ್ಷ ಪ್ರಭಾಕರ ಮಾಳ್ಸೇಕರ, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಚೇರ್‌ಮೆನ್ ನಜೀರ್ ಅಹಮದ್ ಶೇಖ್, ಭಂಡಾರಿ ಸಮಾಜದ ಮಾಜಿ ಅಧ್ಯಕ್ಷ ಕೆ.ಡಿ. ಪೆಡ್ನೇಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ ವೈಂಗಣಕರ, ಕೆ. ಶಂಭು ಶೆಟ್ಟಿ, ಶ್ಯಾಮಸೈಲ್, ವಿಜಯ ದೇಸಾಯಿ, ನಂದಕಿಶೋರ ನಾಯ್ಕ, ಗಿರೀಶ ನಾಯ್ಕ, ರಘುವೀರ ನಾಯ್ಕ, ಮದನ ಗುನಗಿ, ಶ್ಯಾಮ ನಾಯ್ಕ, ಶ್ರೀಕಾಂತ ನಾಯ್ಕ, ಪ್ರಭಾಕರ ಗುನಗಿ, ದೇವಿದಾಸ ಗುನಗಿ ಮತ್ತಿತರರು ಇದ್ದರು.
ಪ್ರಥಮ ಹಾಗೂ ದ್ವಿತೀಯ ನಗದು ಬಹುಮಾನ ರು. 22,222 ಮತ್ತು ರು. 11,111ಗಳನ್ನು ಸತೀಶ ಸೈಲ್ ನೀಡಿದರೆ, ಪಾರಿತೋಷಕವನ್ನು ಪ್ರಭಾಕರ ಗುನಗಿ ಮತ್ತು ದ್ವಿತೀಯ ಬಹುಮಾನದ ಪಾರಿತೋಷಕ ಗೋಕುಲ ಹೊಟೇಲ್ ಮಾಲೀಕ ಈಶ್ವರ ನಾಯ್ಕ ನೀಡಿದರು.
ಪಂದ್ಯ ಪುರುಷ ಬಹುಮಾನ ಸಾತೇರಿ ಮಾಂಡವಿ ಹಣಕೋಣ ತಂಡದ ಲಲ್ಲಾ ಪಡೆದುಕೊಂಡರೆ, ಸರಣಿ ಶ್ರೇಷ್ಠ ಪುರಸ್ಕಾರ ಮಾಳಸಾ ತಂಡದ ವಿನೋದ, ಬೆಸ್ಟ್ ಬೌಲರ್ ಪ್ರಶಸ್ತಿ ರಮಾಕಾಂತ ನಾಯ್ಕ ಪಡೆದುಕೊಂಡರು.  ಈ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿರುವ ಗಿಂಡಿದೇವಿ ಗೆಳೆಯರ ಬಳಗ ಮತ್ತು ನೇತೃತ್ವ ವಹಿಸಿದ ಅರವಿಂದ ಗುನಗಿ, ಆತ್ಮಾರಾಮ, ಮಹೇಶ ಆಚಾರಿ, ಮನೋಜ ಗುನಗಿ, ಅರುಣ ಗುನಗಿ, ಶಿವಕುಮಾರ ಬಂಟ ಅವರನ್ನು ಅಭಿನಂದಿಸಲಾಯಿತು. ಪಂದ್ಯಾವಳಿಯಲ್ಲಿ ನಿರ್ಣಾಯಕರಾಗಿ ಅಶೋಕ ಗುನಗಿ, ನಾವೇದ್, ವೀಕ್ಷಕ ವಿವರಣೆಗಾರ ಸುರೇಶ ಬಾಡಕರ ಅವರಿಗೆ ಗೌರವಧನ ನೀಡಲಾಯಿತು. ಕ್ರಿಕೆಟ್ ಪಂದ್ಯಾವಳಿಗೆ ಪಿಚ್ ನಿರ್ವಹಣೆಯನ್ನು ರತ್ನಾಕರ ನಾಯ್ಕ ವಹಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.