ಹಲಸು, ಜೇನು ಅಭಿವೃದ್ಧಿಗೆ ಅಭಿಯಾನ
ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 7
ಹಲಸು ಮತ್ತು ಜೇನು ಅಭಿವೃದ್ಧಿ ಕುರಿತು ವಿಶೇಷ ಅಭಿಯಾನ ನಡೆಸಲು ಬೆಂಗಳೂರಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.
ಅವರು ಪತ್ರಿಕೆಗೆ ಮಾಹಿತಿ ನೀಡಿ, ಪಶ್ಚಿಮಘಟ್ಟ ಕಾರ್ಯಪಡೆ ಫೆ. 6, 2013ರಂದು ವಿಧಾನ ಸೌಧದಲ್ಲಿ ಹಲಸು, ಜೇನು ಸಂರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಉನ್ನತ ಮಟ್ಟದ ಸಭೆ ಏರ್ಪಡಿಸಿತ್ತು. ಸಭೆಯಲ್ಲಿ ನಾರಾಯಣಗೌಡ, ಕುಲಪತಿಗಳು ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹಿತ್ತಲಮನಿ ಮತ್ತು ಮಹೇಶ್ವರಪ್ಪ, ಕೇಂದ್ರ ಸರ್ಕಾರದ ಎನ್ಐಎಎನ್ಪಿ ನಿರ್ದೇಶಕ ಡಾ. ಸಿ.ಎಸ್. ಪ್ರಸಾದ, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ. ಶ್ಯಾಮಲಮ್ಮ, ಡಾ. ಎನ್.ಎಸ್. ಭಟ್., ಲೈಫ್ ಸಂಸ್ಥೆ, ಅರಣ್ಯ ಸಂಶೋಧಕ ಜಗದೀಶ್, ಗೋಪಾಲಕೃಷ್ಣ, ಶಿರಸಿ ತೋಟಗಾರಿಕಾ ಕಾಲೇಜಿನ ಡೀನ್ ಡಾ. ಲಕ್ಷ್ಮೀನಾರಾಯಣ, ಕದಂಬ ಮಾರ್ಕೆಟಿಂಗ್ ಸಹಕಾರಿ ಸಂಸ್ಥೆಯ ವಿಶ್ವೇಶ್ವರ ಭಟ್ ಮತ್ತು ಅರಣ್ಯ ಸಂಶೋಧನೆ ಅಧಿಕಾರಿಗಳು, ತಳಿ ವಿಜ್ಞಾನಿಗಳು ಭಾಗವಹಿಸಿದ್ದರು.
ಪ್ರಮುಖ ಬೆಳೆಯಾಗಿ ಹಲಸು: ತೋಟಗಾರಿಕಾ-ಅರಣ್ಯ ಇಲಾಖೆಗಳು ಸಂಘ-ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಹಲಸು ವೃಕ್ಷ ವರ್ಧನೆಗೆ ವಿಶೇಷ ಅಭಿಯಾನವನ್ನು ಜೂನ್, ಜುಲೈ, ಆಗಸ್ಟ್ನಲ್ಲಿ ನಡೆಸಬೇಕು ಎಂದು ತೀರ್ಮಾನಿಸಲಾಯಿತು. ಹಲಸನ್ನು ಪ್ರಮುಖ ಹಣ್ಣಿನ ಬೆಳೆ ಎಂದು ತೋಟಗಾರಿಕಾ ಇಲಾಖೆ ಘೋಷಿಸಬೇಕು. ಈ ರೀತಿ ಘೋಷಣೆ ಮಾಡಲು ಅಗತ್ಯ ಪ್ರಸ್ತಾವನೆ ತಯಾರಿ ನಡೆಸಲು ನಿರ್ಧರಿಸಲಾಯಿತು.
ಜನಪ್ರಿಯವಾಗುತ್ತಿರುವ ಹಲಸಿನ ಮೇಳಗಳ ಮೂಲಕ ಇನ್ನಷ್ಟು ಜಾಗೃತಿ, ಮಾಹಿತಿ ಸಂಗ್ರಹ, ಮೌಲ್ಯ ವರ್ಧನೆ, ಮಾರುಕಟ್ಟೆ ಇತ್ಯಾದಿ ಕಾರ್ಯ ಚಟುವಟಿಕೆ ನಡೆಸಲು ನಿರ್ಧರಿಸಲಾಯಿತು. ಸಸಿ ಸಂತೆ ಕಾರ್ಯಕ್ರಮ ಯಶಸ್ವಿಯಾದಂತೆ ಇನ್ನಷ್ಟು ಕಸಿ ಗಿಡಗಳನ್ನು ರೈತರ ಮೂಲಕ ತಯಾರಿಸಿ ವಿತರಿಸಬೇಕು. ಹಲಸು ತಳಿ ಸಂರಕ್ಷಣಾ ಕೇಂದ್ರ ಸ್ಥಾಪಿಸಬೇಕು. ರೈತರ ಸೊಪ್ಪಿನ ಬೆಟ್ಟ, ಹಾಡಿಗಳಲ್ಲಿ ಹಲಸಿನ ಗಿಡ ನೆಟ್ಟು ಬೆಳೆಸುವ ಯೋಜನೆ ಕೈಗೆತ್ತಿಕೊಳ್ಳಲು ನಿಶ್ಚಯಿಸಲಾಯಿತು. ಪಶು ಆಹಾರವಾಗಿ ಹಲಸಿನ ಕಾಯಿ-ಹಣ್ಣು ಉಪಯೋಗಿಸಲು ಅಗತ್ಯ ಸಂಶೋಧನೆ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು. ರಾಷ್ಟ್ರಮಟ್ಟದಲ್ಲಿ ಹಲಸು ಬೆಳೆಗಾರರ ಸಮ್ಮೇಳನ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಜೇನು ಅಭಿವೃದ್ಧಿ ಚಟುವಟಿಕೆ: ಕಾಡಿನ ಜೇನುಮರಗಳನ್ನು ಗುರುತಿಸಿ ರಕ್ಷಿಸಬೇಕು. ಜೇನು ಪಡೆ ಮರಗಳ ಪ್ರಭೇದ ಗುರುತಿಸಿ ಆ ಗಿಡಗಳನ್ನು ನರ್ಸರಿಗಳಲ್ಲಿ ಬೆಳೆಸಬೇಕು. ಯಲ್ಲಾಪುರದಲ್ಲಿ ಅಡವಿ ಜೇನು ಸಂರಕ್ಷಣೆಗೆ ಕೈಗೊಂಡ ಮಾದರಿ ಯೋಜನೆ, ತೋಟಗಾರಿಕಾ ಇಲಾಖೆಯ ವಿಶೇಷ ಜೇನು ಅಭಿವೃದ್ಧಿ ಯೋಜನೆಗಳ ಜೊತೆ ರಾಜ್ಯವ್ಯಾಪಿ ಜೇನು ಅಭಿವೃದ್ಧಿ ಚಟುವಟಿಕೆ ನಡೆಸಬೇಕು. ಅರಣ್ಯ ಇಲಾಖೆಯ ಜೇನು ಹರಾಜು ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು. ಜೇನು ಹರಾಜು ನಿಲ್ಲಿಸಿ ವನವಾಸಿಗಳು, ಅರಣ್ಯ ಸಮಿತಿಗಳಿಗೆ ಸಂಗ್ರಹ ಜವಾಬ್ದಾರಿ ನೀಡಬೇಕು. ಈ ಕುರಿತು ತೋಟಗಾರಿಕಾ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಬೇಕು ಎಂದು ತಜ್ಞರು ಸೂಚಿಸಿದರು.
ರಾಜ್ಯದಲ್ಲಿ ಇರುವ ಮಧುವನ, ಜೇನು ಸಹಕಾರಿ ಸಂಘಗಳು, ವನವಾಸಿ ಸಂಸ್ಥೆಗಳು ಹಾಗೂ ರೈತರ ಸಹಕಾರ ಪಡೆದು ಜೇನು ಸಂರಕ್ಷಣೆ ಅಭಿವೃದ್ಧಿಗೆ ಮುಂದಾಗಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಕೃಷಿ ವಿಶ್ವವಿದ್ಯಾಲಯ, ಸಹಕಾರಿ ಸಂಸ್ಥೆಗಳು ಅಭಿಪ್ರಾಯ ನೀಡಿದ್ದಾರೆ.
ಫೆಬ್ರವರಿ 28ರಂದು ಯಲ್ಲಾಪುರದಲ್ಲಿ ಜೇನು ಕೃಷಿ ವಿಶ್ವವಿದ್ಯಾಲಯದ ಅಧ್ಯಯನ ವರದಿ ಬಿಡುಗಡೆ ಆಗಲಿದೆ. ಜೇನು ಸಂಸ್ಕರಣಾ ಘಟಕ ಉದ್ಘಾಟನೆ ಆಗಲಿದೆ. ಹಲಸಿನ ಮೇಳ ಮೇನಲ್ಲಿ ಶಿರಸಿಯಲ್ಲಿ ನಡೆಯಲಿದೆ. ಪುತ್ತೂರಿನಲ್ಲಿ ಫೆಬ್ರವರಿಯಲ್ಲಿ ಜೇನು ಕಾರ್ಯಾಗಾರ ನಡೆಯಲಿದೆ ಎಂದು ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಮಾಹಿತಿಯನ್ನು ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

