ಹೆಂಜಾ ನಾಯಕ ಧೀಮಂತ ಹೋರಾಟಗಾರ: ಲಕ್ಷ್ಮೀಶ
ಶಿರಸಿ: ಹೆಂಜಾ ನಾಯಕ ಜಿಲ್ಲೆಯ ಧೀಮಂತ ಹೋರಾಟಗಾರ. ಅವರ ಮರಣದ ಕುರಿತು ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ವಾದ-ವಿವಾದ, ಚರ್ಚೆ ಮಾಡುವುದಕ್ಕಿಂತಲೂ ಸತ್ಯಸಂಗತಿ ಏನಿದೆಯೋ ಅದರ ಕುರಿತು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ ಹೇಳಿದರು.
ನಗರದ ದುಂಡಸೀನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೆಂಜಾ ನಾಯಕ ಜಿಲ್ಲೆಯ ಎಲ್ಲ ವರ್ಗದವರ ಅಭಿಮಾನದ ರೂಪವಾಗಬೇಕು. ಅವರ ವಿಷಯದಲ್ಲಿ ರಾಜಕೀಯ ಮಾಡಿ ವಿವಾದ ಎಬ್ಬಿಸುವುದು ಸರಿಯಲ್ಲ ಎಂದರು.
ಸತ್ಯ ದಾಖಲೆ ಬೆಳಕಿಗೆ ಬರಬೇಕು: ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಜಿಲ್ಲೆಯ ಕೆಚ್ಚೆದೆಯ ಕಲಿಗಳಲ್ಲಿ ಒಬ್ಬರಾಗಿದ್ದ ಹೆಂಜಾ ನಾಯಕರ ಮೂರ್ತಿಯನ್ನು ಕಾರವಾರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಮರಣದ ಕುರಿತು ಗೊಂದಲ ಉಂಟಾಗಿದೆ. ಹೆಂಜಾ ನಾಯಕರ ಕುರಿತು ನಾನು ಮಾಹಿತಿ ಸಂಗ್ರಹಿಸಿದ್ದು ಅವರ ಕಾಲ 1736ರಿಂದ 1801 ಎಂಬ ದಾಖಲೆಗಳು ಸಿಗುತ್ತವೆ. ಆದರೆ 1799ರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಕೆಲವು ಕಡೆಗಳಲ್ಲಿ ಉಲ್ಲೇಖಿಸಲಾಗಿದೆ. 1801 ಅವರು ಮೃತಪಟ್ಟ ವರ್ಷ. ಈ ಸತ್ಯದಾಖಲೆ ಬೆಳಕಿಗೆ ಬರಬೇಕಾದ ಅಗತ್ಯವಿದೆ ಎಂದರು. ಕೋಮಾರಪಂಥಕ್ಕೆ ಸೇರಿದ ಹೆಂಜಾ ನಾಯಕರ ತಂದೆ ಲಿಂಗಪ್ಪ ನಾಯಕ. ಆತ ಸೋದೆಯ ರಾಜರ ಕಾಲದಲ್ಲಿ ಸೈನಿಕನಾಗಿದ್ದ. ತಂದೆಯಂತೆಯೇ ಸೋದೆಯ ಅರಸರಲ್ಲಿ ಸೈನಿಕನಾಗಬೇಕು ಎಂಬ ಆತನ ಹಂಬಲಕ್ಕೆ ಸೋದೆಯ ಸಾಮ್ರಾಜ್ಯ ಪತನವಾಗಿದ್ದು ತಣ್ಣೀರೆರಚಿತ್ತು. ಕೊನೆಗೆ ಅವಸಾನದ ಅಂಚಿನಲ್ಲಿದ್ದ ಸೋದೆಯನ್ನು ಮತ್ತೆ ಉನ್ನತ ಸ್ಥಾನಕ್ಕೆ ತರಲು ಯತ್ನಿಸಿದ್ದ ಎಂದು ಲಕ್ಷ್ಮೀಶ ಹೆಗಡೆ ಮಾಹಿತಿ ನೀಡಿದರು.
ಮೋಸದಿಂದ ಕೊಂದರು: ಹೆಂಜಾ ನಾಯಕ ರೈತರ ಕಷ್ಟಕ್ಕೆ ನೆರವಾಗುವ ಮನೋಭಾವದವನು. ದಾಖಲೆಗಳ ಪ್ರಕಾರ ಜಿಲ್ಲೆಯ ಹಳಿಯಾಳ ತಾಲೂಕಿನ ಸಾಮ್ರಾಣಿಯಿಂದ ಕರಾವಳಿ ತೀರವಾದ ಕಾರವಾರದ ವರೆಗೆ ಬ್ರಿಟಿಷರು ಹಾಗೂ ಟಿಪ್ಪು ಸುಲ್ತಾನ ಆಳ್ವಿಕೆ ನಡೆಸುತ್ತಿದ್ದರು. ಈ ಇಬ್ಬರ ಆಳ್ವಿಕೆಯಲ್ಲಿ ಅತಿಯಾದ ಕಂದಾಯ ಹೇರಿದ್ದರಿಂದ ರೈತರು ಕಂಗಾಲಾಗಿದ್ದರು. ಇದರಿಂದಾಗಿ ಹೆಂಜಾ ನಾಯಕ ರೈತಪರ ಹೋರಾಟ ನಡೆಸಿದ್ದ ಎಂದು ಲಕ್ಷ್ಮೀಶ ಹೆಗಡೆ ವಿವರಿಸಿದರು. ವೀರ ಹೆಂಜಾ ನಾಯಕನನ್ನು ಚೆನ್ನಬಸವನ ಸನ್ನಿಧಿ ಉಳುವಿಗೆ ಹೋಗುವಾಗ ಬ್ರಿಟಿಷರು ಮೋಸದಿಂದ ಕೊಂದು ಹಾಕಿದರು. 1801ರಲ್ಲಿ ಕಾಳಿ ನದಿ ತೀರದಲ್ಲಿ ಕಾರವಾರದ ಬಳಿ ಹೆಂಜಾ ನಾಯಕನನ್ನು ಹತ್ಯೆ ಮಾಡಲಾಯಿತು ಎಂಬ ದಾಖಲೆಗಳು ಲಭ್ಯವಾಗಿವೆ. ಹೆಂಜಾ ನಾಯಕನ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ. ವೀರ ಹೆಂಜಾ ನಾಯಕರ ಬಗ್ಗೆ ಹೆಚ್ಚಿನ ಇತಿಹಾಸಕಾರರು ಉಲ್ಲೇಖ ಮಾಡದೇ ಇರುವುದು ದುರಂತದ ಸಂಗತಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ 9482212166 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

