ಕೌಟುಂಬಿಕ ವ್ಯವಸ್ಥೆ ನಿರಂತರ ಸಾಗಲಿ
ಕನ್ನಡಪ್ರಭ ವಾರ್ತೆ, ಯಲ್ಲಾಪುರ, ಫೆ. 4
ಭಾರತೀಯ ಪರಂಪರೆಯ ಸೃಷ್ಟಿಗೆ ನಮ್ಮ ವಿಶಿಷ್ಟ ಬಗೆಯ ಕೌಟುಂಬಿಕ ವ್ಯವಸ್ಥೆಯೇ ಮೂಲವೂ, ಮಹತ್ವದ್ದೂ ಆಗಿದ್ದು, ನಾವು ಪ್ರಜ್ಞಾಪೂರ್ವಕವಾಗಿ ಜತನದಿಂದ ರಕ್ಷಿಸಿಕೊಂಡು ಬಂದ ಈ ವ್ಯವಸ್ಥೆ ನಿರಂತರ ಸಾಗಬೇಕೆಂದು ಟಿಎಂಎಸ್ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಹೇಳಿದರು.
ಅವರು ಭಾನುವಾರ ಬೆಳಗ್ಗೆ ಪಟ್ಟಣದ ಎಪಿಎಂಸಿ ಆವಾರದ ರೈತ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ದಂಪತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಘಟಿಸುತ್ತಿರುವ ಅನೇಕಾನೇಕ ಪಲ್ಲಟಗಳ ನಡುವೆಯೂ ನಮ್ಮ ದೇಶದ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳು ಶ್ರೇಷ್ಠತೆಯನ್ನು ಹೊಂದಿರುವ ಕಾರಣಕ್ಕಾಗಿ ಸದೃಢವಾಗಿ ಉಳಿದು ಪರಕೀಯರಿಗೆ ಆದರ್ಶ ತೋರುತ್ತಿವೆ. ಇಂತಹ ಸಂದರ್ಭದಲ್ಲಿ ದೇಶದ ಶ್ರೇಷ್ಠತೆಗೆ ಧಕ್ಕೆ ಉಂಟಾಗದಂತೆ ಸದಾ ಜಾಗೃತರಾಗಿರಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಸಮರ್ಪಕ ಮಾಹಿತಿ: ಅತಿಥಿಗಳಾಗಿದ್ದ ಶಿರಸಿ ವಿಭಾಗದ ಧ.ಗ್ರಾ.ಯೋ ನಿರ್ದೇಶಕ ಕೆ. ಚಂದ್ರಶೇಖರ ಮಾತನಾಡಿ, ಸಮಾಜದಲ್ಲಿ ನಾವಿಂದು ಎಲ್ಲೆಡೆ ವೈಮನಸ್ಸು-ವೈಶಮ್ಯಗಳನ್ನೇ ಕಾಣುತ್ತಿದ್ದೇವೆ. ನಮ್ಮ ಸಂಸ್ಕಾರದ ಅಪೂರ್ವ ಪ್ರತೀಕವಾದ ದಾಂಪತ್ಯ ವಿಚಾರಗಳಲ್ಲೂ ಬಿರುಕು ಉಂಟಾಗಿ ಸಂಸಾರದ ಘನತೆ ನಿರ್ಜಿವಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದಂಪತಿಗಳಿಗೆ ಯಶಸ್ವೀ ಕುಟುಂಬ ನಿರ್ವಹಣೆ ಕುರಿತು ಸಮರ್ಪಕ ಮಾಹಿತಿ ಮತ್ತು ಮಾರ್ಗದರ್ಶನ ನೀಡಲೆಂದೇ ಈ ಶಿಬಿರ ಆಯೋಜಿಸಲಾಗಿದೆ ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಜಿ. ಭಟ್ಟ ಬಾಳ್ಕಲ್, ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆಗಳಿರುವಲ್ಲಿ ಶಾಂತಿ-ನೆಮ್ಮದಿ ಇರುತ್ತದೆ. ಇದು ಅನ್ಯೋನ್ಯ ದಂಪತಿ ಲಕ್ಷಣವೂ ಕೂಡಾ. ಪ್ರತಿಯೊಬ್ಬ ಪುರುಷ ಪರಿಪೂರ್ಣತೆ ಸಾಧಿಸಲು ಮಹಿಳೆ ಸಹಕಾರಿ ಎಂಬುದರ ಜೊತೆ, ಮಹಿಳೆ ಕೂಡಾ ಪುರುಷನ ಮನಸ್ಸು-ಹೃದಯಗಳನ್ನು ಅರಿಯುವುದೂ ಉತ್ತಮ ದಾಂಪತ್ಯಕ್ಕೆ ಕಾರಣವಾಗುತ್ತದೆ ಎಂದರು.
ವಿಚಾರಗೋಷ್ಠಿ: ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ 'ಸ್ವಾಸ್ಥ್ಯ ಕುಟುಂಬದಲ್ಲಿ ದಂಪತಿಗಳು' ವಿಷಯದ ಕುರಿತು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಮುಕ್ತಾಶಂಕರ, 'ಕುಟುಂಬ ನಿರ್ವಹಣೆಯಲ್ಲಿ ದಂಪತಿಗಳ ಪಾತ್ರ' ಕುರಿತು ಚೌಡಳ್ಳಿಯ ಶಿಕ್ಷಕ ಬಾಲಚಂದ್ರ ಹೆಗಡೆ ಮಾತನಾಡಿದರು. ಕೆಎಂಎಫ್ ನಿರ್ದೇಶಕ ಮಧುಕೇಶ್ವರ ಭಟ್ಟ, ಯೋಜನಾಧಿಕಾರಿ ಕೆ.ಅಮರಪ್ರಸಾದ ಶೆಟ್ಟಿ ಇದ್ದರು. ಸುಮಾರು 150ದಂಪತಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ದಂಪತಿಗಳು ಮಂಗಳವಾದ್ಯದ ಮೊಳಗಿನ ನಡುವೆ ಪರಸ್ಪರ ಕಂಕಣ ಕಟ್ಟಿಕೊಂಡ ದೃಶ್ಯ ಅರ್ಥಪೂರ್ಣವಾಗಿತ್ತು. ಕಾರ್ಯಕ್ರಮದಲ್ಲಿ ಆನಗೋಡು ನಿವಾಸಿಗಳಾದ ಕೃಷ್ಣ ಮರಾಠಿ-ಪಾರ್ವತಿ ಮರಾಠಿ ಹಾಗೂ ಬಾಸಲ ನಿವಾಸಿಗಳಾದ ಜಾಹ್ನವಿ ಭಟ್ಟ-ಮಹಾಬಲೇಶ್ವರ ಭಟ್ಟ ಎಂಬ ಹಿರಿಯ ದಂಪತಿಗಳನ್ನು ಗೌರವಿಸಲಾಯಿತು. ನಂತರ ದಂಪತಿಗಳಿಗಾಗಿ ವೇಗವಾಗಿ ತಿಲಕವಿಡುವ ಸ್ಪರ್ಧೆ, ಅದೃಷ್ಟ ದಂಪತಿ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಗುರುತಿಸುವ ಸ್ಪರ್ಧೆ ಏರ್ಪಡಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

