ವಾಹನ ಪ್ರವೇಶ ಶುಲ್ಕ ತೆರವುಗೊಳಿಸಿ
ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 1
ಗೋವಾ ರಾಜ್ಯದ ವಿನೂತನ ರೀತಿಯ ವಾಹನ ಪ್ರವೇಶ ಶುಲ್ಕ ನೀತಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎನ್. ದತ್ತಾ, ಗಡಿ ಭಾಗ ನೆರೆಯ ಗೋವಾ ರಾಜ್ಯಕ್ಕೆ ಪ್ರವೇಶಿಸುವ ಅನ್ಯ ರಾಜ್ಯದ ವಾಹನಗಳ ಮೇಲೆ ಪ್ರವೇಶ ತೆರಿಗೆ ವಿಧಿಸಲು ಗೋವಾ ಸರ್ಕಾರ ಮುಂದಾಗಿರುವುದು ಕರ್ನಾಟಕ ವಾಹನ ಮಾಲೀಕರಿಗೆ ತೀವ್ರ ತೊಂದರೆಯಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ಗೋವಾ ಸರ್ಕಾರ ಹೊರ ರಾಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ರೂಪಿಸಿದೆ. ಈಗಾಗಲೇ ಗೋವಾ ನೋಂದಣಿ ಅಲ್ಲದ ಹೊರ ರಾಜ್ಯ ದ್ವಿಚಕ್ರ ವಾಹನಗಳಿಗೆ ರು. 15, ಲಘು ವಾಹನಕ್ಕೆ ರು. 250, ಭಾರಿ ವಾಹನಗಳಿಗೆ ರು. 660 ಶುಲ್ಕ ವಿಧಿಸಿದೆ. ಆದರೆ ಕರ್ನಾಟಕದಿಂದ ಹೆಚ್ಚಿನ ವಾಹನಗಳು ಗೋವಾಕ್ಕೆ ಹೋಗುತ್ತಿವೆ. ಸದ್ಯ ಗೋವಾ ರಾಜ್ಯದಲ್ಲಿ ಬಾಡಿಗೆ ವಾಹನಗಳಿಗೆ ಕರ್ನಾಟಕಕ್ಕಿಂತ ಮೂರು ಪಟ್ಟು ಹೆಚ್ಚಿನ ತೆರಿಗೆ ಪಡೆಯಲಾಗುತ್ತಿದೆ. ಅದರಂತೆ ಟೋಲ್ ಗೇಟ್ ಸ್ಥಾಪಿಸಿ ಪ್ರವೇಶ ಶುಲ್ಕ ಪಡೆದು ಕರ್ನಾಟಕ ವಾಹನ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.
ತಕ್ಕ ಪಾಠ: ಗೋವಾ ಸರ್ಕಾರ ಕರ್ನಾಟಕದ ವಾಹನದ ಮೇಲೆ ಪ್ರವೇಶ ಶುಲ್ಕ ಪಡೆದು ಸರ್ಕಾರ ನಡೆಸುತ್ತಿರುವುದು ವಿಷಾದನೀಯ. ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸರ್ಕಾರ ಹೆಚ್ಚು ಅನುದಾನ ನೀಡುತ್ತಿದ್ದು ಈ ನೀತಿಯನ್ನು ರದ್ದು ಪಡಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಆದರೆ ಗೋವಾ ಸರ್ಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವೇಶ ಶುಲ್ಕ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗೋವಾ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಕರ್ನಾಟಕದಿಂದ ಗೋವಾಕ್ಕೆ ಹೋಗುವಂತಹ ವಿದ್ಯುತ್ ಹಾಗೂ ಎಲ್ಲ ಸಾಮಗ್ರಿಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಬೇಕು ಎಂದು ಅವರು ಒತ್ತಾಯಿಸಿದರು.
ಕರವೇ ಜಿಲ್ಲಾ ಸಹ ಕಾರ್ಯದರ್ಶಿ ದೀಪಕ ಕುಡಾಳಕರ್, ಪ್ರಮುಖರಾದ ಸುನೀಲ್ ನಾಯ್ಕ, ಸುಜಿತ್ ಮಾಳ್ಸೇಕರ್, ಆನಂದು ಮಡಿವಾಳ, ಮದನ ಗುನಗಿ, ದೀಪಕ ನಾಯ್ಕ, ವಿಜಯ ಇಡೂರಕರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

