ಉತ್ತರ ಕನ್ನಡ

ಇಡಗುಂದಿ ಗ್ರಾಪಂನಲ್ಲಿ ಅವ್ಯವಹಾರ

Published On :




ಯಲ್ಲಾಪುರ:  2011-12ನೇ ಸಾಲಿನಲ್ಲಿ ಇಡಗುಂದಿ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದ್ದು, ಇವುಗಳ ಕುರಿತಾಗಿ ಮೇಲಧಿಕಾರಿಗಳಿಂದ ತನಿಖೆ ಆಗಬೇಕೆಂದು ಗ್ರಾಪಂ ಮಾಜಿ ಸದಸ್ಯ ವಿಶ್ವನಾಥ ಘಟ್ಟಿ ಆಗ್ರಹಿಸಿದ್ದಾರೆ.
ವರದಿಗಾರರ ಸಂಘದ ಕಾರ್ಯಾಲಯದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬೀರಗದ್ದೆ ನಂ.1 ಶಾಲೆಯಿಂದ ನಂ. 2 ಶಾಲೆ ವರೆಗಿನ ರಸ್ತೆ ದುರಸ್ತಿಗೆ ರು. 20,000 ಖರ್ಚು ಹಾಕಲಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಈ ರಸ್ತೆ ದುರಸ್ತಿ ಕಾಮಗಾರಿ ಮಾಡದೆಯೇ ಹಣ ಖರ್ಚು ಮಾಡಲಾಗಿದೆ. ಕೋಮಡಿಯ ರಾಮ ಸಿದ್ದಿ ಎಂಬ ವ್ಯಕ್ತಿಯೊಬ್ಬರಿಗೆ ಸೇರಿದ ಕೆರೆಯ ಪುನಶ್ಚೇತನ ಕಾಮಗಾರಿಗಾಗಿ ಫಲಾನುಭವಿಯ ಒಪ್ಪಿಗೆ ಇಲ್ಲದಿದ್ದರೂ ರು. 20,000 ಖರ್ಚು ಹಾಕಿ ರು. 2ರಿಂದ ರು. 3 ಸಾವಿರ ದಷ್ಟು ಕೆಲಸ ಮಾಡಿ ಹಣ ವಿನಿಯೋಗಿಸಲಾಗಿದೆ. ಬೀರಗದ್ದೆಯ ನಾರಾಯಣ ಅನಂತ ಬಾಂದಿ ಅವರಿಗೆ ಸೇರಿದ ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕೆಂದು ರು. 75,000 ಕ್ರಿಯಾಯೋಜನೆ ತಯಾರಿಸಿ, ಬಿಲ್ ಮಾಡಿ ಕೇವಲ ರು. 18,000 ಮೊತ್ತದಷ್ಟು ಕೆಲಸ ನಡೆದಿದೆ ಎಂದು ಫಲಾನುಭವಿ ತಿಳಿಸಿದ್ದಾರೆಂದು ದೂರಿದ ಅವರು ಈ ಬಗ್ಗೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದರು.
ಶಂಕೆ: ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ತಾಲೂಕಿನ ಉದ್ಯೋಗ ಖಾತ್ರಿ ಕಾಮಗಾರಿಗಳ ಕುರಿತು ಆರ್‌ಟಿಐನಲ್ಲಿ ಮಾಹಿತಿ ಕೇಳಿ ಮೂರು ತಿಂಗಳಾದರೂ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿದ್ದಾರೆಂದು ಆರೋಪಿಸಿದ ವಿಶ್ವನಾಥ ಘಟ್ಟಿ, ಈ ಎಲ್ಲ ಅವ್ಯವಹಾರದಲ್ಲಿ ಸ್ಥಳೀಯ ಅಧಿಕಾರಿಗಳೇ ಶಾಮೀಲಾಗಿದ್ದು, ಇನ್ನಿತರ ಬೇರೆ ಕಾಮಗಾರಿಗಳಲ್ಲೂ ಅವ್ಯವಹಾರ ನಡೆದಿರುವ ಕುರಿತು ಶಂಕೆ ವ್ಯಕ್ತಪಡಿಸಿದರು. ಸ್ಥಳೀಯ ಅಧಿಕಾರಿಗಳು ಪಾರದರ್ಶಕ ತನಿಖೆ ನಡೆಸುತ್ತಾರೆಂಬ ವಿಶ್ವಾಸ ತಮಗಿಲ್ಲವಾದುದರಿಂದ ಮೇಲಧಿಕಾರಿಗಳಿಂದಲೇ ತನಿಖೆ ನಡೆಯಬೇಕೆಂದು ಆಗ್ರಹಿಸಿದರು. ಈ ಅವ್ಯವಹಾರಗಳ ಕುರಿತು ಉದ್ಯೋಗ ಖಾತ್ರಿ ಯೋಜನೆಯ ರಾಜ್ಯ ಅನುಷ್ಠಾನಾಧಿಕಾರಿ ಮನೀಷ ಮುದ್ಗಿಲ್ ಅವರಿಗೆ ದೂರು ನೀಡಿರುವುದಾಗಿ ತಿಳಿಸಿದರು. ಸದ್ಯದಲ್ಲೇ  ಲೋಕಾಯುಕ್ತರಿಗೂ ದೂರು ಸಲ್ಲಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.