ತುಮಕೂರು

ಹೇಮೆ ನಾಲೆಯಲ್ಲಿ ಹರಿವುದೇ ನೀರು?

Published On :

ಕುಣಿಗಲ್: ತಾಲೂಕಿಗೆ ಪ್ರಮುಖವಾಗಿ ನೀರು ಪೂರೈಸುವ ಮೂಲವಾದ ಹೇಮಾವತಿ ನದಿನೀರು ಹರಿಸುವ ನಾಲೆ ಕಾಮಗಾರಿ  ಬಿರುಸಿನಿಂದ ಸಾಗುತ್ತಿದ್ದು, ಈ ಕಾಮಗಾರಿಗೆ ಕೋಟ್ಯಂತರ ರುಪಾಯಿ ನೀರಿನಂತೆ ವ್ಯಯವಾಗುತ್ತಿದೆ. ಆದರೆ ನಾಲೆಯಲ್ಲಿ ನೀರು ಹರಿಯುತ್ತದೆಯೆ ಎಂಬ ಸಂಶಯ ಎದುರಾಗಿದೆ.
ಹವಾಮಾನ ವೈಪರಿತ್ಯ ಸೇರಿದಂತೆ ಹಲವು ಕಾರಣಗಳಿಂದಾಗಿ, ತಾಲೂಕಿನಲ್ಲಿ ವಾಡಿಕೆ ಮಳೆಯಾಗಿ ಹದಿನೈದು ವರ್ಷಗಳೆ ಕಳೆದಿವೆ. ಇದರಿಂದ ಕುಡಿಯುವ ನೀರು ಪೂರೈಕೆ ಸೇರಿದಂತೆ ಕೃಷಿ ಚಟುವಟಿಕೆಗೆ ನೀರು ಒದಗಿಸುವುದು ತಾಲೂಕು ಆಡಳಿತಕ್ಕೆ ಸವಾಲಾಗಿ ಪರಿಣಿಸಿದೆ. ಇನ್ನೂರ ಅರವತ್ತು ಕಿಮಿ ದೂರದ ಗೊರೂರು ಜಲಾಶಯದಿಂದ ಹರಿದು ಬರುತ್ತಿರುವ ಹೇಮೆಯನ್ನೇ ಆಶ್ರಯಿಸುವ ವಾತಾವರಣ ನಿರ್ಮಾಣವಾಗಿದೆ.
ಗೊರೂರು ಜಲಾಶಯದಿಂದ ಹರಿದು ಬರುವ ಹೇಮೆ ಸುಮಾರು 72ಕಿಮಿ ನಂತರ ವೈ ಚಾನಲ್ ಎಡದಂಡೆ ಮೂಲಕ 180ಕಿಮಿ ದೂರದ ಕುಣಿಗಲ್ ದೊಡ್ಡಕೆರೆಗೆ ತಲುಪಲಿದೆ. ಮಾಜಿ ಸಚಿವ ಹುಚ್ಚಮಾಸ್ತಿಗೌಡ, ವೈ.ಕೆ. ರಾಮಯ್ಯ, ಡಿ. ನಾಗರಾಜಯ್ಯ, ಮಾಜಿ ಶಾಸಕ ಮುದ್ದಹನುಮೇಗೌಡರ ಸತತ ಪರಿಶ್ರಮದ ಫಲವಾಗಿ ಕುಣಿಗಲ್ ದೊಡ್ಡಕೆರೆಗೆ 1999ರಲ್ಲಿ ನೀರು ಹರದುಬಂದಿತು.
ದೊಡ್ಡಕೆರೆಗೆ ನೀರು ಹರಿಸಿದ ನಂತರ ಮೂಲಯೋಜನೆಯಂತೆ ಕಸಬಾ, ಹುತ್ರಿದುರ್ಗ ಸೇರಿದಂತೆ ಅಂತಿಮವಾಗಿ ಹುಲಿಯೂರು ದುರ್ಗದ ಕಡೆಗೆ ಹೇಮೆ ನೀರು ಹರಿಸಬೇಕಿದೆ. ಹಿಂದಿನ ಶಾಸಕ ಬಿ.ಬಿ. ರಾಮಸ್ವಾಮಿಗೌಡರ ಕಾಲಾವಧಿಯಲ್ಲಿ ರೈತರ ಮನವೊಲಿಸಿ ಕೆಲವರ ವಿರೋಧದ ನಡುವೆ ಪೊಲೀಸ್ ಬಲದಿಂದ ಮುಂದಿನ ನಾಲಾ ಕಾಮಗಾರಿಗೆ ಕ್ರಮ ಕೈಗೊಂಡ ಕಾರಣ, 12ಕಿಮಿ ನಾಲಾ ಕಾಮಗಾರಿ ಪ್ರಗತಿಯಲ್ಲಿದೆ.
ನಾಲಾ ಕಾಮಗಾರಿಗೆ ಭೂಸ್ವಾಧೀನ ಸೇರಿದಂತೆ ಇತರೆ ಪ್ರಕ್ರಿಯೆಗೆ ಸುಮಾರು ನಲವತ್ತು ಕೋಟಿಗೂ ಹೆಚ್ಚು ಹಣ ವ್ಯಯವಾಗಿದೆ. ಕುಣಿಗಲ್ ಕೆರೆಗೆ ನೀರು ಹರಿದು ಒಂದೂವರೆ ದಶಕ ಕಳೆದರೂ, ಕೇವಲ ನಾಲ್ಕು ಬಾರಿ ಮಾತ್ರ ಕೆರೆ ತುಂಬಿದೆ. ಉಳಿದಂತೆ ದೊಡ್ಡಕೆರೆಯನ್ನೇ ನಿಗದಿತ ಪ್ರಮಾಣದಲ್ಲಿ ತುಂಬಿಸಲಾಗಿಲ್ಲ. ನಿಯಮದ ಪ್ರಕಾರ ನಾಲಾವಲಯದ ಅಧಿಕಾರಿಗಳು ನಾಲೆ ಕೊನೆ ಭಾಗದಿಂದ ನೀರು ಹರಿಸಿ ನಂತರ ಇತರೆ ಭಾಗಕ್ಕೆ ಹರಿಸಬೇಕಿದೆ. ಆದರೆ ನಿಯಮಗಳ ಪಾಲನೆ ಆಗದೆ ಹೇಮಾವತಿ ನೀರು ತಾಲೂಕಿಗೆ ಮರೀಚಿಕೆಯಾಗುವ ಸ್ಥಿತಿ ನಿರ್ಮಾಣವಾಗಿದೆ.
ಮೂಲ ಯೋಜನೆ ಉಲ್ಲಂಘಿಸಿ ಹೇಮೆ ನೀರು ಬೇರೆಡೆಗೆ ಹರಿಸುತ್ತಿರುವುದು ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ ಕುಣಿಗಲ್ ತಾಲೂಕಿನ ಭಾಗಕ್ಕೆ ಹರಿಯಬೇಕಾದ ನೀರು ಕೆರೆಗೆ ಕಳೆದ ನಾಲ್ಕು ವರ್ಷಗಳಿಂದ ಹರಿದಿಲ್ಲ. ಇಂತಹ ಸ್ಥಿತಿಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನಾಲೆ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿರುವುದು ತಾಲೂಕಿನ ನಾಗರಿಕರ ಪಾಲಿಗೆ ತಲೆನೋವಾಗಿದೆ. ನಾಲೆಯಲ್ಲಿ ನೀರು ಹರಿಯುತ್ತದೋ ಇಲ್ಲವೋ ಎಂಬ ಚರ್ಚೆಗೆ ಗ್ರಾಸವಾಗಿದೆ. ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ತಾಲೂಕಿನ ಸಮರ್ಪಕ ನೀರಿನಪಾಲನ್ನು ಪಡೆಯಲು ಪರಿಣಾಮಕಾರಿ ಕ್ರಮ ಕೈಗೊಂಡು ನಾಲಾ ಕಾಮಗಾರಿ ಸಾರ್ಥಕಗೊಳಿಸುವರೆ ಎಂದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.