ಕವಿತೆ ಧ್ಯಾನದ ಫಲ
ತುಮಕೂರು: ಕವಿತೆ ಎಂಬುದು ಧ್ಯಾನದ, ಯೋಗದ ಹಾಗೂ ನಿರಂತರ ಪರಿಶ್ರಮದ ಸಾಗುವಿಕೆಯ ಫಲವಾಗಿದೆ. ಕವಿತೆಗಳಲ್ಲಿ ಇರಬೇಕಾದದ್ದು ಧ್ವನಿಪೂರ್ಣತೆ ಹಾಗೂ ಧ್ವನಿರಮ್ಯತೆ ಎಂದು ನಿವೃತ್ತ ಡಾ.ಎಸ್.ಪಿ. ಹೇಳಿದರು.
ಜಿಲ್ಲಾ ಕಸಾಪ, ತಾಲೂಕು ಕಸಾಪ ಹಾಗೂ ನಗರ ಕಸಾಪ ಸಹಯೋಗದಲ್ಲಿ ಮಂದರಗಿರಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕವಿತೆಯ ರಚನೆಕಾರ ಕಾವ್ಯ ತಪಸ್ವಿಯಾಗಿರಬೇಕು ಆಗ ಮಾತ್ರ ಉತ್ಕೃಷ್ಟ ಕವಿತೆಗಳನ್ನು ರಚಿಸಲು ಸಾಧ್ಯ ಎಂದು ವಿವರಿಸಿದರು. ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಮಾತನಾಡಿ, ಕವಿಯಾದವನು ಕಾಲಧರ್ಮಕ್ಕೆ ಅನುಗುಣವಾಗಿ ಸ್ಪಂದಿಸಬೇಕು. ಪ್ರಕೃತಿಯಂತೆ ಕವಿಗಳು ಚಲನಶೀಲತೆಯಿಂದ ಇರಬೇಕು. ಆಗ ಮಾತ್ರ ಉತ್ತಮ ಕವಿ, ಲೇಖಕ, ಕಲಾವಿದ ಆಗುತ್ತಾರೆ. ಕವನ ವಾಚಿಸುವುದು ಒಂದು ಕಲೆ. ಕವನ ಹೇಳುವ ರೀತಿ ಕೇಳುಗರ ಹೃನ್ಮನ ತಟ್ಟಬೇಕು ಎಂದರು.
ನೃಪತುಂಗ ವಿದ್ಯಾಸಂಸ್ಥೆಯ ಸಂಸ್ಥಾಪಕ ಪ್ರೊ.ಸಿ.ಎಚ್. ಮರಿದೇವರು ಮಾತನಾಡಿ, ಪ್ರಕೃತಿ ಕವಿಯ ಕಾಮಧೇನುವಾಗಿದ್ದು ಕವಿತೆ, ಕಾದಂಬರಿ, ನಾಟಕ ಕತೆ ಇವೆಲ್ಲಾ ಪ್ರಕೃತಿಯಿಂದ ಬಂದಿದೆ ಎಂದರು.
ತುಮಕೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಕೆ. ಕುಲಕರ್ಣಿ ಮಾತನಾಡಿ, ಕವನಗಳಲ್ಲಿ ಸಮಕಾಲೀನ ಪ್ರಜ್ಞೆ ಬರಬೇಕಾಗಿದೆ. ಹೂ, ಹಣ್ಣು ಮರಗಳನ್ನು ವರ್ಣಿಸುವುದನ್ನು ಬಿಟ್ಟು ನಮ್ಮ ಸುತ್ತಲಿನ ಸಮಸ್ಯೆಗಳನ್ನು ಕುರಿತು ಬರೆಯಿರಿ ಎಂದು ಹೇಳಿದರು.
ತುಮಕೂರು ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ. ರೇಣುಕಯ್ಯ ಮಾತನಾಡಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್, ವ್ಯಾಸ, ವಾಲ್ಮೀಕಿ, ಪಂಪ, ರನ್ನ ಮುಂತಾದವರು ತಮ್ಮ ಕಾವ್ಯಗಳಿಂದ ಶಾಶ್ವತವಾಗಿದ್ದಾರೆ. ಇಂತಹ ಕವಿಗಳ ಸಾಹಿತ್ಯದ ಅಧ್ಯಯನಶೀಲರಾಗಬೇಕು ಎಂದರು.
ರವಿಕುಮಾರ್ ಇದ್ದರು. ಕವಿ ಹರಳೂರು ಶಿವಕುಮಾರ್ ಪ್ರಾರ್ಥಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಲೀಲಾಲೇಪಾಕ್ಷ್ ಸ್ವಾಗತಿಸಿದರು. ತಾಲೂಕು ಕಸಾಪ ಸಂಘಟನಾ ಕಾರ್ಯದರ್ಶಿ ಅಬ್ಬಿನಹೊಳೆ ಸುರೇಶ್ ನಿರೂಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಶೆ.ನಂ. ಸಿದ್ದಲಿಂಗಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

