ತುಮಕೂರು

ಹುಚ್ಚಯ್ಯ ಜಿಪಂ ಅಧ್ಯಕ್ಷ?

Published On :

ಉಗಮ ಶ್ರೀನಿವಾಸ್
ತುಮಕೂರು:
ಕೊನೆಯ ಅವಧಿಗೆ ಜಿಪಂ ಅಧ್ಯಕ್ಷರು ಯಾರಾಗ್ತಾರೆ ಎಂಬುದಕ್ಕೆ ಮುಹೂರ್ತ್ ಫಿಕ್ಸ್ ಆಗಿದ್ದು ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ವೈ.ಎಚ್. ಹುಚ್ಚಯ್ಯ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಕೊನೆಯ ಅವಧಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿದ್ದ ವೈ.ಎಚ್. ಹುಚ್ಚಯ್ಯ ಅವರು ಕೆಲವು ಕಾಲ ಪ್ರಭಾರ ಅಧ್ಯಕ್ಷರೂ ಆಗಿದ್ದರು. ಉಳಿದ ಅವಧಿಗೆ ಅವರನ್ನೇ ಆಯ್ಕೆ ಮಾಡಲು ಜೆಡಿಎಸ್ ನಿರ್ಧರಿಸಿದೆ.
57 ಸಂಖ್ಯಾ ಬಲದ ತುಮಕೂರು ಜಿಪಂ ಜೆಡಿಎಸ್ ವಶದಲ್ಲಿದ್ದು ಈಗಾಗಲೇ ನಾಲ್ಕು ಮಂದಿ ಅಧ್ಯಕ್ಷರಾಗಿದ್ದಾರೆ. ಮೊದಲ ಅಧ್ಯಕ್ಷರಾಗಿ ರವಿ ಡಿ. ನಾಗರಾಜಯ್ಯ ಆಯ್ಕೆಯಾಗಿದ್ದರು. ಬಳಿಕ ಆನಂದ ರವಿ ಆಯ್ಕೆಯಾದರು. 3ನೇ ಅವಧಿಗೆ ಪ್ರೇಮ ಮಹಾಲಿಂಗಪ್ಪ, ನಾಲ್ಕನೇ ಅವಧಿಗೆ ಸಾಕಮ್ಮ ಆಯ್ಕೆಯಾಗಿದ್ದರು. ಈಗ ಐದನೇ ಹಾಗೂ ಕೊನೆಯ ಅವಧಿಗೆ ಅಧ್ಯಕ್ಷ ಗಾದಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಜೆಡಿಎಸ್‌ನ ಹಿರಿಯ ಸದಸ್ಯ ವೈ.ಎಚ್. ಹುಚ್ಚಯ್ಯರನ್ನೇ ನೇಮಿಸಲು ಪಕ್ಷ ತೀರ್ಮಾನಿಸಿದೆ.
57 ಸಂಖ್ಯಾ ಬಲದ ಜಿಪಂನಲ್ಲಿ ಜೆಡಿಎಸ್ 33 ಸ್ಥಾನ ಗೆದ್ದುಕೊಂಡಿತ್ತು. ಆದರೆ ಜಿಪಂ ಸದಸ್ಯರಾಗಿದ್ದ ಸುಧಾಕರಲಾಲ್ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ಆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾರಾಯಣಮೂರ್ತಿ ಗೆಲವು ಸಾಧಿಸಿದ್ದರು. ಹೀಗಾಗಿ ಒಂದು ಸ್ಥಾನವನ್ನು ಕಳೆದುಕೊಂಡ ಜೆಡಿಎಸ್ 32 ಸ್ಥಾನಕ್ಕೆ ಕುಸಿಯಿತು. ಇದಾದ ಬಳಿಕ ಶಿರಾ ತಾಲೂಕು ತಾವರೆಕೆರೆ ಜಿಪಂ ಸದಸ್ಯರಾಗಿದ್ದ ಬಡೀರಣ್ಣ ನಿಧನರಾದ ಹಿನ್ನೆಲೆಯಲ್ಲಿ ಮತ್ತೊಂದು ಸ್ಥಾನ ಕಡಿಮೆಯಾಯಿತು. ಈಗ ಜೆಡಿಎಸ್ 31 ಸದಸ್ಯರನ್ನು ಹೊಂದಿದ್ದು ಸ್ಪಷ್ಟ ಬಹುಮತ ಇದೆ.
ಇನ್ನು ಜಿಪಂನ 10 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ನಾರಾಯಣಮೂರ್ತಿ ಗೆಲವು ಸಾಧಿಸಿದ ಬಳಿಕ ತನ್ನ ಸಂಖ್ಯೆಯನ್ನು 11ಕ್ಕೆ ಹೆಚ್ಚಿಸಿಕೊಂಡಿದೆ. ಉಳಿದಂತೆ ಬಿಜೆಪಿ 13 ಸದಸ್ಯರು ಹಾಗೂ ಜೆಡಿಯು 1 ಸದಸ್ಯರನ್ನು ಹೊಂದಿದೆ. ಇನ್ನು ತಾವರೆಕೆರೆ ಜಿಪಂ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ.
ಉಪಾಧ್ಯಕ್ಷ ಯಾರು?
ಜಿಪಂ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಾಗಿದೆ. ರೇಸ್‌ನಲ್ಲಿ ಮೂವರು ಇದ್ದಾರೆ. ಆಂಜಿನಪ್ಪ, ಟಿ.ಎಚ್. ಕೃಷ್ಣಪ್ಪ, ಆಂಜಿನಪ್ಪ ಇದ್ದಾರೆ. ಈ ಮೂವರಲ್ಲಿ ಆಂಜಿನಪ್ಪ ರೇಸ್‌ನಲ್ಲಿ ಮುಂದೆ ಇದ್ದಾರೆ. ಆದರೆ ಕೊನೆ ಕ್ಷಣದವರೆಗೂ ಕಾದು ನೋಡಬೇಕಾಗಿದೆ. ಈಗಾಗಲೇ ಉಪಾಧ್ಯಕ್ಷರಾಗಿ ಲಲಿತಾ ಮಂಜುನಾಥ್, ನಾಗಮಣಿ, ಮಮತಾ ಶಿವಲಿಂಗಯ್ಯ ಹಾಗೂ ಜಾನಮ್ಮ ಆಯ್ಕೆಯಾಗಿದ್ದರು. ಜೆಡಿಎಸ್‌ಗೆ ಸ್ಪಷ್ಟ ಬಹುಮತ ಇರುವುದರಿಂದ ನಿರಾಳವಾಗಿ ಆ ಪಕ್ಷದ ಅಭ್ಯರ್ಥಿ ಅಧ್ಯಕ್ಷರಾಗುತ್ತಾರೆ. ವೈ.ಎಚ್. ಹುಚ್ಚಯ್ಯ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಮುದ್ರೆ ಬೀಳಲು ಇನ್ನೂ 3 ದಿನ ಕಾಯಬೇಕಷ್ಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.