ತುಮಕೂರು

ಯಾತಕ್ಕೆ ಮಳೆ ಹೋದವೋ ಶಿವಾ?

Published On :

ವೈ. ಸೋಮಶೇಖರ್
ಮಧುಗಿರಿ:
ತಾಲೂಕಿನಾದ್ಯಂತ ಪುನರ್ವಸು ಮಳೆ ಕೈ ಕೊಟ್ಟ ಪರಿಣಾಮ ಬಿತ್ತನೆ ಕಾರ್ಯ ಕುಂಠಿತವಾಗಿ  ರೈತರಿಗೆ ಪೆಟ್ಟು ಬಿದ್ದಿದ್ದು, ಜನ, ಜಾನುವಾರುಗಳ ರಕ್ಷಣೆ ಹೇಗೆ ಎಂಬ ಚಿಂತೆ ಕಾಡುತ್ತಿದೆ.
ವರುಣನ ಆಗಮನಕ್ಕಾಗಿ ಜಾತಕ ಪಕ್ಷಿಯಂತೆ  ರೈತರು ಕಾಯುತ್ತಿದ್ದರೂ ನಾಲ್ಕ ಹನಿ ಚಲ್ಲಿ  ಓಡುತ್ತಿರುವ ಮೋಡಗಳತ್ತ ಕಣ್ಣು, ಬಾಯಿ ಬಿಡುವಂತಾಗಿ ಮುಂದಿನ ಜೀವನ ನಿರ್ವಹಣೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ದೊಡ್ಡಸಲು ಮಳೆ ಬಹುತೇಕ ಶಿರಾ,ಪಾವಗಡ, ಕೊರಟಗೆರೆ ಮತ್ತು ಮಧುಗಿರಿ ತಾಲೂಕುಗಳಲ್ಲಿ  ಪ್ರಮುಖ ಆರ್ಥಿಕ ಬೆಳೆ ಶೇಂಗಾ ಬಿತ್ತಲು ಒಳ್ಳೆ ಕಾಲ. ಈ ಮಳೆಯಲ್ಲಿ ಬೀಜ ಬಿತ್ತಿದ್ದರೆ ಬಂಪರ್ ಬೆಳೆ ಸಿಗಲಿದೆ ಎಂಬುದು ರೈತರ ಬಲವಾದ ನಂಬಿಕೆ. ಆದರೆ ಅದು ಈಗ ಹುಸಿಯಾಗಿದ್ದು ರೈತನ ಬದುಕು ಮತ್ತೆ ಮೂರಾಬಟ್ಟೆಯಾಗಲಿದೆ ಎಂಬ ಆತಂಕ ಎದುರಾಗಿದೆ.
ಪುಷ್ಯಮಿ ಮೇಲೆ ಆಸೆ: ಇಂದಿನಿಂದ ಚಿಗಸಲು(ಪುಷ್ಯಮಿ) ಮಳೆ ಪ್ರಾರಂಭವಾಗಿದ್ದು ಇನ್ನು ಒಂದು ವಾರದ ಒಳಗಾಗಿ ಮಳೆ ಬಿದ್ದರೆ ಬಿತ್ತನೆ ಕಾರ್ಯ ನಡೆದರೂ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಕೈಗೆ ಸಿಗುವುದು ಕಷ್ಟ. ಆದರೂ ಬಿತ್ತಿದ್ದೇವೆ ಎಂಬ ಸಮಾಧಾನ ರೈತರದ್ದು. ಈ ಮಳೆ ಸಕಾಲಕ್ಕೆ ಬಾರದೆ ಹೋದರೆ ಸಾಲ ಮಾಡಿ ಶೇಖರಿಸಿರುವ ಶೇಂಗಾ ಮಾರುಕಟ್ಟೆ ಪ್ರವೇಶಿಸಿ ರೈತನ ಜೇಬು ಖಾಲಿಯಾಗಿ ವ್ಯಾಪಾರಸ್ಥರ ಜೇಬು ತುಂಬುವುದರಲ್ಲಿ ಅನುಮಾನವಿಲ್ಲ. ರಾಗಿ, ಮುಸುಕಿನ ಜೋಳ, ಸಜ್ಜೆ, ನವಣೆ ದ್ವಿದಳ ದಾನ್ಯ ಬಿತ್ತನೆಗೆ ಸಕಾಲವಾಗಿದ್ದು ಈ ಮಳೆ 7 ದಿನದ ಒಳಗೆ ಬಾರದೇ ಹೋದರೆ ರೈತರ ಸ್ಥಿತಿ ಅದೋಗತಿ ತಲುಪಲಿದೆ.
ಬಿತ್ತನೆ ವಿವರ: ಈವರೆಗೆ ತಾಲೂಕಿನಲ್ಲಿ 2,515 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ. ಈ ಪೈಕಿ ಮಿಡಿಗೇಶಿ 980 ಹೇಕ್ಟೆರ್, ಐ.ಡಿ. ಹಳ್ಳಿ 524, ಕಸಬಾ 526,ಬಡವನಹಳ್ಳಿ 122, ಪುರವರ 184, ಹಾಗೂ ಕೊಡಿಗೇನಹಳ್ಳಿ 173 ಹೇಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇನ್ನು 38 ಸಾವಿರ ಹೇಕ್ಟೇರ್ ಭೂಮಿ ಬಿತ್ತನೆ ಆಗಬೇಕಿದೆ. ಈಗ ಮಳೆ ಬಂದರೆ ಬಿತ್ತನೆ ಮಾಡುತ್ತಾರೆ. ಮಳೆ ಬೀಳದಿದ್ದರೆ ಸರ್ಕಾರ ಮಧುಗಿರಿ ತಾಲೂಕನ್ನು ಬರಪೀಡಿತ ತಾಲೂಕು  ಎಂದು ಘೋಷಿಸಿ ರೈತರಿಗೆ ಗೋಶಾಲೆ, ಗಂಜಿಕೇಂದ್ರ ತೆರೆದು ಜನ, ಜಾನುವಾರುಗಳಿಗೆ ಮೇವು, ಕುಡಿವ ನೀರು ಹಾಗೂ ಮೂಲ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ.
ಗುಳೆ ಹೊರಟ ಜನ: ಸಾಲ ಮಾಡಿ ತಂದ ಬಿತ್ತನೆ ಬೀಜ ಗೊಬ್ಬರ ಭೂಮಿಗೆ ಸುರಿದವರು ಆಕಾಶ ನೋಡಿ  ಕಂಗಾಲಾಗಿ ಮುಂದೇನು ಎಂದು ಚಿಂತಿಸುತ್ತ ತಲೆಗೆ ಕೈ ಕೊಟ್ಟು ಕುಳಿತಿದ್ದಾರೆ. ಅಕ್ಷರ ಕಲಿತವರು ಉದ್ಯೋಗ ಅರಸಿ ಪಟ್ಟಣ ಸೇರಿದ್ದಾರೆ. ಉಳಿದವರು ಗ್ರಾಮಗಳಲ್ಲಿ ಕೃಷಿಗಾಗಿ ಯಾಂತ್ರಿಕ ವಿಧಾನ ಅನುಸರಿಸಿ ಮಳೆ ಬಂದರೆ ಬೆಳೆ ಇಲ್ಲವಾದರೆ ಇಲ್ಲ ಎಂಬ ಧನಿ ಗಂಟಲಲ್ಲಿ ನಿಂತು ಕಣ್ಣಲ್ಲಿ ಕಂಬನಿ ಉರುಳುತ್ತಿದೆ. ಮಳೆ ಬೀಳದಿರುವ ಕಾರಣ ಬೆಳೆ ವಿಮೆ ಕಟ್ಟಲು ಜು.30ರವರೆಗಿದ್ದು ಇನ್ನು ಒಂದು ತಿಂಗಳು ವಿಸ್ತರಿಸಬೇಕು ಎಂದು ರೈತರು ಒತ್ತಾಯಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.