ರೈತರೇ.. ರಾಜಕೀಯ ಕ್ರಾಂತಿ ಮಾಡಿ
ಮಧುಗಿರಿ: ರೈತರು, ಕೃಷಿಕರು ಹಾಗೂ ದುಡಿಯುವ ವರ್ಗದ ಜನರು ಗುಲಾಮಗಿರಿಯಿಂದ ಹೊರ ಬಂದು ಸಂಘಟಿತರಾಗಿ ರಾಜಕೀಯ ಕ್ರಾಂತಿಗೆ ಮುಂದಾಗಬೇಕು ಎಂದು ಶಾಸಕ ಹಾಗೂ ರಾಜ್ಯ ರೈತ ಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಕರೆ ನೀಡಿದರು.
ಇಲ್ಲಿನ ಮಾಲಿಮರಿಯಪ್ಪ ರಂಗಮಂದಿರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಏರ್ಪಡಿಸಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುಡಿಯುವ ವರ್ಗದ ಜನರ ರಕ್ಷಣೆಗೆ ನೀತಿ ಜಾರಿಗೊಳಿಸಬೇಕು. ಬರಗಾಲಕ್ಕೆ ತುತ್ತಾಗಿ ಬಳಲುವ ರೈತನ ಕುಟುಂಬ ರಕ್ಷಣೆಗೆ ಸರ್ಕಾರದ ಕ್ರಮ ಏನು? ಬರ ನಿರ್ವಹಣೆಗೆ ಇದುವರೆಗೆ ಆಡಳಿತ ನಡೆಸಿದ ಯಾವ ಸರ್ಕಾರಗಳು ನೀತಿ ರೂಪಿಸಲಿಲ್ಲ. ಇದರ ಪರಿಣಾಮ ರೈತರು ಗುಳೇ ಹೋಗಿ ನಗರದ ಫುಟ್ಪಾತ್ಗಳಲ್ಲಿ ಮಲಗಿದರೆ ಈ ದೇಶಕ್ಕೆ ದೊಡ್ಡ ಅವಮಾನ. ವಿಚ್ಛೇದನಕ್ಕಾಗಿ ಗಂಡ-ಹೆಂಡತಿ ಅರ್ಜಿ ಹಾಕಿದರೆ ಕೌನ್ಸೆಲಿಂಗ್ ನಡೆಸುವ ಸರ್ಕಾರ ಅದೇ ಹಳ್ಳಿ ಬಿಟ್ಟ ರೈತರನ್ನೇಕೆ ಕೌನ್ಸೆಲಿಂಗ್ ಮಾಡಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಗ್ರಾಮೀಣ ರೈತ ಮಹಿಳೆಯರು ಶೇ.70ರಷ್ಟು ಗರ್ಭಕೋಶ ಕಾಯಿಲೆಗೆ ತುತ್ತಾಗಿ ಬಳಲುತ್ತಿದ್ದಾರೆ. ರಾಜ್ಯದಲ್ಲಿ 56 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಯಾವುದೇ ಇಲಾಖೆಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂಬ ನಾಮಪಲ ಹಾಕಿದ್ದಾರೆಯೇ? ಈ ದೇಶದ ರೈತ ಆಹಾರ ಉತ್ಪಾದನೆ ಮಾಡದೇ ಹೋದರೆ ದೇಶದ ಸ್ಥಿತಿ ಅಧೋಗತಿ ತಲುಪುವ ಕಾಲ ದೂರವಿಲ್ಲ. ರೈತರು ಸರ್ಕಾರಿ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಮನೆ, ಟ್ರ್ಯಾಕ್ಟರ್ ಜಪ್ತಿಗೂ ಅಂಜಬೇಡಿ. ಎಲ್ಲ ಧರ್ಮಕ್ಕಿಂತ ರೈತ ಧರ್ಮ ಅತಿ ಶ್ರೇಷ್ಠ, ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಸಂಘಟಿತರಾಗಿ ರಾಜಕೀಯ ಕ್ರಾಂತಿಗೆ ಸಜ್ಜಾಗಿ ಎಂದರು.
ಮಳೆಯಾಧಾರಿತ ಪ್ರದೇಶದಲ್ಲಿ ಬರ ಪರಿಸ್ಥಿತಿ ಎದುರಾದರೆ ಯಾವುದೇ ಸಾಲ ವಸೂಲಾತಿ ಮಾಡಬಾರದು. ಅದನ್ನೇ ದಿರ್ಘಾವಧಿ ಸಾಲವನ್ನಾಗಿ ಪರಿವರ್ತಿಸಿ ಎಂದು ಆರ್ಬಿಐ ಆದೇಶವಿದೆ. ಹಾಗಾಗಿ ಅಧಿಕಾರಿಗಳು ಬ್ರಿಟಿಷರ ಗುಲಾಮಗಿರಿ ಪದ್ಧತಿ ಕೈ ಬಿಟ್ಟು ಅನ್ನದಾತನನ್ನು ಪ್ರೀತಿ, ವಿಶ್ವಾಸದಿಂದ ಕಂಡು ಆತನ ಬದುಕಿಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಪ್ಯಾಕೇಜ್ ಲೋನ್ ಕೊಡುವ ನೀತಿ ಜಾರಿಗೊಳಿಸಿ ಎಂದು ಒತ್ತಾಯಿಸಿದರು.
ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಪರಮಶಿವಯ್ಯ ವರದಿ 18 ವರ್ಷಗಳಿಂದ ಕುಂಟುತ್ತಾ ಸಾಗಿದ್ದು ಇದರ ನಿವಾರಣೆಗೆ 10 ಜಿಲ್ಲೆ ರೈತರು ಸೇರಿ ಕಾರವಾರದ 4 ಜಿಲ್ಲೆಯ ಮುಖಂಡರ ಜತೆ ಸಾಧಕ-ಬಾಧಕ ಚರ್ಚಿಸಿ 200 ಟಿಎಂಸಿ ನೀರು ಪೋಲಾಗುವುದನ್ನು ಗಮನಕ್ಕೆ ತಂದು ವೈಜ್ಞಾನಿಕವಾಗಿ ಯಾವುದೇ ರೀತಿಯ ಹಾನಿ ಆಗದಂತೆ ಯೋಜನೆ ಜಾರಿಗೆ ಸರ್ಕಾರ ಮುಂದಾಗಬೇಕು ಎಂದರು.
ಸಂಘದ ಜಿಲ್ಲಾ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಮಧುಗಿರಿ, ಪಾವಗಡ, ಕೊರಟಗೆರೆ ಮತ್ತು ಶಿರಾ ತಾಲೂಕು ಮಳೆ ಬೆಳೆ ಇಲ್ಲದೆ ಬರಕ್ಕೆ ಸಿಕ್ಕು ಗುಳೇ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈಲ್ವೆ, ರಸ್ತೆ,ಪವರ್ ಗ್ರಿಡ್ಗಾಗಿ ರೈತ ಜಮೀನುಗಳಿಗೆ ವೈಜ್ಞಾನಿಕ ಬೆಲೆ, ನೂರಾರು ಎಕರೆ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ಪರಿಣಾಮ ವೈಜ್ಞಾನಿಕ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಸೋಮಗುದ್ದರಂಗಸ್ವಾಮಿ, ಬಡಗಲಾಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ರವಿಕುಮಾರ್ ಮಾತನಾಡಿದರು. ತಾಲೂಕಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಶಂಕರಪ್ಪ, ಕೆ.ಟಿ.ಗಂಗಾಧರ, ಎಂ.ರಾಮು, ದೊಡ್ಡಮಾಳಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

