ತುಮಕೂರು

ವ್ಯವಹಾರಿಕ ದೃಷ್ಟಿಕೋನ ಬದಲಾಗಲಿ

Published On :

ತುಮಕೂರು: ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡುವ ಭಾರತೀಯರ ಚಿಂತನಾ ಕ್ರಮ ಬದಲಾಗಬೇಕು ಎಂದು ಖ್ಯಾತ ವಿಜ್ಞಾನಿ ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಮಾರ್ಮಿಕವಾಗಿ ನುಡಿದರು.
ತುಮಕೂರಿನ ಎಸ್‌ಐಟಿ ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಕಲಿಯಲು ಮುಕ್ತ ಅವಕಾಶ ಕಲ್ಪಿಸಬೇಕು. ತಂದೆ-ತಾಯಿ, ಪೋಷಕರು ಒತ್ತಡ ಹಾಕಬಾರದು. ಹಣಕಾಸು, ವ್ಯಾವಹಾರಿಕ ಹಿನ್ನೆಲೆಯಲ್ಲಿ ಓದಲು ಒತ್ತಾಯಿಸಬಾರದು. ಭಾರತೀಯ ಯುವ ಜನತೆಗೆ ಸರಿಯಾದ ಮಾರ್ಗದರ್ಶನ ಮಾಡಿದರೆ ಚೀನಾದಂತೆ ಮುಂದಿನ ದಿನಗಳಲ್ಲಿ ವಿಶ್ವದ ಆಗ್ರಗಣ್ಯ ರಾಷ್ಟ್ರಗಳಲ್ಲಿ ಭಾರತ ಸಹ ಒಂದಾಗಲಿದೆ. ಚೀನಾ ಈಗಾಗಲೇ ಎಲ್ಲೆಡೆ ಅಡ್ವಾನ್ಸ್‌ಡ್ ಸೈನ್ಸ್ ಅಳವಡಿಸಿಕೊಂಡು ನಮಗಿಂತ ಮುಂದಿದೆ. ಮೂಲ ವಿಜ್ಞಾನದತ್ತ ಭಾರತೀಯರು ತಮ್ಮ ಚಿತ್ತವನ್ನು ಹರಿಸುವುದು ಇಂದಿನ ತುರ್ತು ಎಂದರು.
ಭಾರತ ಒಳ್ಳೆಯ ವಿದ್ಯಾಕೇಂದ್ರ. ಆದರೆ ಇಷ್ಟೊಂದು ಆಗಾಧವಾದ ಶೈಕ್ಷಣಿಕ ವ್ಯವಸ್ಥೆಯಿದ್ದರೂ ವಿಶ್ವದ ಅತ್ಯುತ್ತಮ 20 ವಿವಿ, ವಿದ್ಯಾ ಕೇಂದ್ರಗಳಲ್ಲಿ ಭಾರತದ ಯಾವೊಂದು ಸಂಸ್ಥೆಯೂ ಇಲ್ಲದಿರುವುದು ವಿಷಾದನೀಯ. ಯುವಜನತೆಗೆ ಸರಿಯಾದ ಮಾರ್ಗದರ್ಶನ ಸಿಕ್ಕಿರೆ ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವದ ಅತ್ಯುತ್ತಮ ವಿದ್ಯಾಕೇಂದ್ರವನ್ನಾಗಿಸಬಹುದು ಎಂದರು.
ಸುವಾಸನೆ ಬೀರಬೇಕು: ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳು ಉದ್ಯಾನವನಗಳಿದ್ದಂತೆ. ಉದ್ಯಾನವನದಲ್ಲಿ ಎಲ್ಲಾ ರೀತಿ ಗಿಡ, ಮರ, ಬಳ್ಳಿ, ಹೂವುಗಳಿರುತ್ತವೆಯೋ ಹಾಗೆಯೇ ವಿವಿಗಳಲ್ಲಿಯೂ ಎಲ್ಲ ರೀತಿಯ ಶಿಕ್ಷಣ ದೊರೆಯುವಂತಾಗಿ, ಶಿಕ್ಷಣದ ಪರಿಮಳ ಎಲ್ಲೆಡೆ ಬೀರುವಂತಾಗಬೇಕು. ಹೀಗಾದಾಗ ವಿಶ್ವ ವಿದ್ಯಾಲಯಗಳು ಸ್ಥಾಪನೆಯಾದದ್ದಕ್ಕೆ ಸಾರ್ಥಕವಾಗುತ್ತದೆ. ಪ್ರಪಂಚ ನಿಮ್ಮ ಕೆಲಸ ನೋಡಬೇಕೆಂದರೆ ನೀವಿರುವ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಬೇಕು ಎಂದರು.  
ಸರಳತೆ, ಛಲ, ಹುಚ್ಚು ಮರೆತಿದ್ದೇವೆ: ಸರಳತೆ, ಛಲ, ಹುಚ್ಚು ಸಾಧನೆಗೆ ಅತಿಮುಖ್ಯ ಸಾಧನಗಳು. ಆದರೆ ಭಾರತೀಯರಾದ ನಾವು ಇವುಗಳನ್ನು ಮರೆತಿರುವುದು ವಿಷಾದನೀಯ. ಸಾಧನೆಗೆ ಛಲ ಮುಖ್ಯ. ಏಕಾಗ್ರತೆ, ಹಿಡಿದ ಕೆಲಸ ಮಾಡುವ ಹುಚ್ಚು. ಸಾಧನೆಯ ಹಿನ್ನೆಲೆಯಲ್ಲಿ ಒಂದೇ ಕೆಲಸದಲ್ಲಿ ಹಿಡಿತ ಸಾಧಿಸುವ ಹುಚ್ಚುತನ ಭಾರತೀಯರಲ್ಲಿ ಕಡಿಮೆಯಾಗಿದೆ. ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲದ ಕಾಲದಲ್ಲಿ ಜಗದೀಶ್ ಚಂದ್ರಬೋಸ್, ಸಿ.ವಿ.ರಾಮನ್ ಅವರಂತಹ ಭಾರತೀಯ ವಿಜ್ಞಾನಿಗಳು ಹೊಸ ಸಂಶೋಧನೆ ಹುಚ್ಚನ್ನು ಬೆಳೆಸಿಕೊಂಡು ಆಗಾಧ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ. ಇಂದು ಎಲ್ಲವೂ ನಮ್ಮ ಕೈಗೆಟುಕುವಂತಿದ್ದರೂ ನಾವು ಯಾವುದೇ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಯುವಕರು ಕೂಡ ವಯಸ್ಸಾದವರಂತೆ ವರ್ತಿಸುತ್ತಿದ್ದಾರೆ. ನಿರುತ್ಸಾಹಿಗಳಾಗಿದ್ದಾರೆ. ಈ ಮನೋಸ್ಥಿತಿ ಬದಲಾಗಬೇಕು. ಕಾರಣ ಚಂಚಲತೆ, ವ್ಯಾವಹಾರಿಕ ದೃಷ್ಟಿಕೋನ. ಹುಚ್ಚುತನ ಇಲ್ಲದೆ ಇರುವುದೇ ಕಾರಣ ಎಂದರು.
ಪ್ರೊ.ಸಿ.ಎನ್.ಆರ್. ರಾವ್ ಅಭಿನಂದಿಸಿ ಆಶೀರ್ವಚನ ನೀಡಿದ ಡಾ. ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರಸ್ವಾಮೀಜಿ, ಭಾರತೀಯ ಕುಟುಂಬ ವ್ಯವಸ್ಥೆಗೆ ಅನುಗುಣವಾಗಿ ಪ್ರೊ.ಸಿ.ಎನ್.ಆರ್.ರಾವ್ ದಂಪತಿ ಜೀವಿಸುತ್ತಿರುವುದು ಸಂತಸದ ವಿಚಾರ. ಅವರ ಸಾಧನೆ ಅಪಾರ, ಅನನ್ಯ ಎಂದು ಕೊಂಡಾಡಿದರು.
ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿ ಅಭಿನಂದನಾ ಪತ್ರ ವಾಚಿಸಿದರು. ಪ್ರೊ.ಸಿ.ಎನ್.ಆರ್. ರಾವ್ ಪತ್ನಿ ಇಂದುಮತಿ ರಾವ್, ಸಹಕಾರ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಸಿ.ಸೋಮಶೇಖರ್ ಸಿ.ಎನ್.ಆರ್. ರಾವ್ ಅವರನ್ನು ಪರಿಚಯಿಸಿದರು. ಎಸ್‌ಐಟಿ ನಿರ್ದೇಶಕ ಪ್ರೊ.ಎಂ.ಎನ್.ಚನ್ನಬಸಪ್ಪ ಸ್ವಾಗತಿಸಿದರು. ಡಾ. ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.