ನಿದ್ದೆರಾಮಯ್ಯ ಸರ್ಕಾರ
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಜಗದೀಶ್ಶೆಟ್ಟರ್ ಆರೋಪಿಸಿದರು.
ತುಮಕೂರು ಸಮೀಪದ ಸಿದ್ಧಗಂಗಾ ಮಠದ ಸಮುದಾಯಭವನದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಏರ್ಪಡಿಸಿದ್ದ ರಾಜ್ಯ ಪರಿಷತ್ ಸಭೆ ಉದ್ಘಾಟಿಸಿ ಮಾತನಾಡಿ, ಸಿಎಂ ಸಿದ್ಧರಾಮಯ್ಯ ಸಭೆ ಸಮಾರಂಭಗಳಲ್ಲಿ ನಿದ್ದೆ ಮಾಡುವಂತೆ ಅವರ ಸರ್ಕಾರವೂ ನಿದ್ದೆ ಮಾಡುತ್ತಿದೆ. ರಾಜ್ಯದಲ್ಲಿ ಕಬ್ಬು, ತೆಂಗು, ಅಡಕೆ ಬೆಳೆಗಾರರು, ಆಲೂಗಡ್ಡೆ, ಈರುಳ್ಳಿ ಹಾಕಿರುವವರು ಹೀಗೆ ಒಟ್ಟಾರೆ ರಾಜ್ಯದ ನಾನಾ ಭಾಗಗಳ ರೈತರು ನಾನಾ ಸಂಕಷ್ಟ ಎದುರಿಸುತ್ತಿದ್ದರೂ ರಾಜ್ಯ ಸರಕಾರ ಗಮನಹರಿಸುತ್ತಿಲ್ಲ. ಕಬ್ಬಿಗೆ ಬೆಂಬಲ ಬೆಲೆ ದೊರೆಯಲಿಲ್ಲವೆನ್ನುವ ಕಾರಣಕ್ಕೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರೈತ ವಿಷಕುಡಿದು ಸತ್ತರೂ ಆತ ಸಾರಾಯಿ ಕುಡಿದು ಸತ್ತ ಎಂದು ಸಿಎಂ ಉಡಾಫೆ ಉತ್ತರ ಕೊಟ್ಟರು. ರೈತರನ್ನು ಅವಮಾನದಿಂದ ನೋಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದೆಯೆಂದರು.
ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಕೋಟ್ಯಂತರ ರು.ಬಾಕಿ ಪಾವತಿಸಬೇಕಿದ್ದರೂ, ಕೊಡಿಸಲು ಕ್ರಮ ಕೈಗೊಳ್ಳುತ್ತಿಲ್ಲ. ತಾವು ಸಿಎಂ ಆಗಿದ್ದ ಅವಧಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಸಂಬಂಧ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರಲು ಎಸ್ಎಪಿ ಕಾನೂನನ್ನು ಜಾರಿಗೆ ತಂದರೂ ಅದರ ಸಮರ್ಪಕ ಅನುಷ್ಠಾನ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳೆ, ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕ ಡಿ.ಬಿ. ಇನಾಂದರ್ ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದು, ಅವರ ಕಾರ್ಖಾನೆಗಳ ಮೇಲೆ ಯಾವುದೇ ದಾಳಿ ನಡೆಯುತ್ತಿಲ್ಲ. ದಾಳಿಯಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರದ ಛಾಯೆಯಿದ್ದರೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕರೆಯಲು ಸಿಎಂಗೆ ಪುರಸೊತ್ತಿಲ್ಲ. ಬರ ಪರಿಹಾರದ 115 ಕೋಟಿ ರು. ಹಣ ಆಯಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕೊಳೆಯುತ್ತಿದೆ. ಈ ಸರ್ಕಾರದಿಂದ ಹಣ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಕೊಲೆ, ಸುಲಿಗೆ ಪ್ರಕರಣಗಳನ್ನು ನೋಡಿದರೆ ಸಾರ್ವಜನಿಕರನ್ನು ಪೊಲೀಸರು ರಕ್ಷಿಸುವುದಿರಲಿ, ಪೊಲೀಸರನ್ನೇ ಜನಸಾಮಾನ್ಯರು ರಕ್ಷಿಸಬೇಕಾದ ಸ್ಥಿತಿ ಇದೆ ಎಂದು ವ್ಯಂಗ್ಯವಾಡಿದರು.
ರೈತರನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರ: 30-40 ವರ್ಷದ ಹಿಂದಿನಿಂದ ಗೋಮಾಳ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಗುಳೆ ಹೋಗುತ್ತಿದ್ದರೂ ಸರ್ಕಾರ ಮೌನವಹಿಸಿದೆ. ಸರ್ಕಾರ ಒಂದು ವರ್ಷ ಪೂರೈಸಿದರೂ ಇನ್ನೂ ಟೇಕಾಫ್ ಆಗದ ಸ್ಥಿತಿಯಲ್ಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಕೆರೆ, ರಸ್ತೆ ಅಭಿವೃದ್ಧಿ, ಮೂಲ ಸೌಕರ್ಯಗಳಿಗೆ ಬಿಡುಗಡೆಯಾದ ಅನುದಾನ ಬಿಟ್ಟರೆ ಹೊಸ ಯೋಜನೆಗಳಾಗಲೀ, ಅನುದಾನವಾಗಲೀ ಬಿಡುಗಡೆ ಮಾಡುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಈ ಬಗ್ಗೆ ಅಸಮಧಾನ ಹೊಂದಿದ್ದು, ನಿಮ್ಮ ಅವಧಿಯಲ್ಲಿ ಮಂಜೂರಾದ ಯೋಜನೆಗಳಿಗೆ ನಾವು ಶಂಕುಸ್ಥಾಪನೆ ಮಾಡುದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಶೆಟ್ಟರ್ ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರಮೋದಿ ಸರ್ಕಾರ ಅಧಿಕಾರ ಸ್ವೀಕರಿಸಿದ ಎರಡು ತಿಂಗಳಲ್ಲೇ ದಿಟ್ಟ ನಿಲುವು, ಜನಸಾಮಾನ್ಯರ ಪರವಾದ ನಿರ್ದಾರಗಳ ಮೂಲಕ ವಿಶ್ವವ್ಯಾಪಿ ಜನ ಮನ್ನಣೆಗೆ ಪಾತ್ರವಾಗಿದೆ ಎಂದರು. ಬಿಜೆಪಿ ರೈತ ಮೋರ್ಚಾ ಕ್ರಿಯಾಶೀಲ ಸಂಘಟನೆಯಾಗಿದ್ದು, ಬೇರೆ ಯಾವ ಪಕ್ಷದಲ್ಲಿ ಇಂತಹ ಕ್ರಿಯಾಶೀಲ ಸಂಘಟನೆ ಕಾಣಲು ಸಾಧ್ಯವಿಲ್ಲ. ರೈತರಿಗೆ ಅನ್ಯಾಯವಾದಗಲೆಲ್ಲ ಮೊದಲು ದನಿಎತ್ತುವ ಸಂಘಟನೆ, ರೈತರಿಗೆ ದೊರೆಯಬೇಕಾದ ಸವಲತ್ತು, ಕೃಷಿ ಉತ್ತೇಜನಕ್ಕಾಗಿ ಆಗಿಂದಾಗ್ಗೆ ಸಭೆ, ಸಮಾವೇಶಗಳನ್ನು ನಡೆಸಿ ಚರ್ಚೆ ನಡೆಸುತ್ತಿದೆ ಎಂದು ಪ್ರಶಂಸಿಸಿದರು.
ರೈತ ಮೋರ್ಚಾ ರಾಜ್ಯಾಧ್ಯಕ್ಷ ಅರಗಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಜಿ.ಎಸ್. ಬಸವರಾಜು, ರಾಷ್ಟ್ರೀಯ ಕಿಸಾನ್ ಮೋರ್ಚಾದ ಸುಗಣಾಕರರಾವ್, ಶಂಕರನಾರಾಯಣ್, ರೈತ ಮೋರ್ಚಾದ ರಾಜ್ಯ ಪ್ರಧಾನಕಾರ್ಯದರ್ಶಿ ಎಸ್. ಶಿವಪ್ರಸಾದ್, ನಿರ್ಮಲ್ ಕುಮಾರ್ ಸುರಾನ, ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದೀಶ್, ಜಿಲ್ಲಾ ಪ್ರಭಾರಿ ರಾಂಪ್ರಿಯಾ, ಸಾಗರನಹಳ್ಳಿ ನಟರಾಜ್, ಗಿರಿಗೌಡ, ಮಲ್ಲಿಕಾರ್ಜುನ್, ಕುಲಕರ್ಣಿ, ಗೋವಿಂದಪ್ಪ, ಶ್ರೀನಿವಾಸರೆಡ್ಡಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

