ತುಮಕೂರು

ತಾಪಂ ಅಧ್ಯಕ್ಷರ ಆಯ್ಕೆಗೆ ಹರ್ಷ

Published On :

ತಿಪಟೂರು: ತಾಲೂಕು ಪಂಚಾಯಿತಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಜಾತ್ಯಾತೀತ ಮನೋಭಾವ ಹೊಂದಿ ಸಾಮಾನ್ಯ ವರ್ಗಕ್ಕೆ ಇದ್ದ ತಾ.ಪಂ. ಅಧ್ಯಕ್ಷ ಸ್ಥಾನವನ್ನು ದಲಿತ ಮಹಿಳೆ ನೇತ್ರಾವತಿ ಭಾಸ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಅಧ್ಯಕ್ಷೆ ನೇತ್ರಾವತಿ ಭಾಸ್ಕರ್ ಅವರನ್ನು ದಸಂಸ ಪದಾಧಿಕಾರಿ ಕುಂದೂರು ತಿಮ್ಮಯ್ಯ, ಜಿಪಂ ಮಾಜಿ ಸದಸ್ಯ ಶಾಂತಪ್ಪ, ಬಿಜೆಪಿ ಉಪಾಧ್ಯಕ್ಷ ಎನ್.ಮೂರ್ತಿ, ದಸಂಸ ತಾಲೂಕು ಅಧ್ಯಕ್ಷ ನಾಗತೀಹಳ್ಳಿ ಕೃಷ್ಣಮೂರ್ತಿ, ಅಶೋಕ್, ಅಂಬೇಡ್ಕರ್ ಯುವ ಸೇನೆ ತಾಲೂಕು ಅಧ್ಯಕ್ಷ ಚನ್ನಕೇಶವ, ಉಪಾಧ್ಯಕ್ಷ ಮಂಜುನಾಥ್, ಮಾದಿಗ ದಂಡೋರ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಆರ್. ರಂಗಸ್ವಾಮಿ, ಸೋಮು, ನಗರಾಧ್ಯಕ್ಷ ಯೋಗೀಶ್, ಎಸ್ಸಿ ಎಸ್ಟಿ ಘಟಕ ಉಪಾಧ್ಯಕ್ಷ ಟಿ.ಆರ್. ರಘುಪತಿ ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ತಿಪಟೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಲೆಮಾರಿ, ಅರೆ ಅಲೆಮಾರಿ ಹಾಗೂ ಇತರೆ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಪ್ರವರ್ಗ-1, 2ಎ, 3ಎ, 3ಬಿಗಳಿಗೆ ಸೇರಿದವರಾಗಿರಬೇಕು. 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರಬೇಕು. ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯಬೇಕು. ಅರ್ಜಿಗಳನ್ನು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಜು.15ರಿಂದ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಆ.27ರೊಳಗೆ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಯವರನ್ನು ಸಂಪರ್ಕಿಸಬಹುದು.

ಬಜೆಟ್‌ನಲ್ಲಿ ಕೃಷಿಗೆ ಆದ್ಯತೆ ನೀಡಿಲ್ಲ: ಕೆಎಸ್‌ಎಸ್
ತಿಪಟೂರು: ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಗಳಂತೆ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿಲ್ಲ. ಕೃಷಿ ಕ್ಷೇತ್ರಕ್ಕೆ ಈ ಬಾರಿ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಆಸೆಯಿಂದ ಇದ್ದ ರೈತರಿಗೆ ನಿಜಕ್ಕೂ ನಿರಾಸೆಯಾಗಿದೆ. ಕೈಗಾರಿಕೆ, ವಾಣಿಜ್ಯ, ವ್ಯಾಪಾರ ಕ್ಷೇತ್ರಗಳಲ್ಲಿ ಹೊಸ ಹೊಸ ನೀತಿ ಜಾರಿಗೆ ತರಲಾಗಿದೆ. ಆದರೆ ಎಲ್ಲದರ ಮೂಲ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿಲ್ಲ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಕೆ.ಎಸ್.ಸದಾಶಿವಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಾದ ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾವಂತ ಯುವಕರು ಕೃಷಿ ಕ್ಷೇತ್ರಕ್ಕೆ ಬರುತ್ತಿಲ್ಲ. ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಅಂಶಗಳನ್ನು ಮಂಡಿಸಿದ್ದರೆ ಚೆನ್ನಾಗಿ ಇರುತ್ತಿತ್ತು. ರಾಜ್ಯಕ್ಕೆ ಬಜೆಟ್‌ನಲ್ಲಿ ಉತ್ತಮ ಕೊಡುಗೆಗಳನ್ನು ನೀಡಿದ್ದು, ಚೆನೈ-ಬೆಂಗಳೂರು ಕಾರಿಡಾರನ್ನು ತುಮಕೂರುವರೆಗೆ ವಿಸ್ತರಣೆ ಮಾಡಿದ್ದು, ತುಮಕೂರಿನಲ್ಲಿ ಕೈಗಾರಿಕಾ ಸ್ಮಾರ್ಟ್ ಸಿಟಿ ನಿರ್ಮಾಣ. ಬೆಂಗಳೂರು - ಮುಂಬೈ ಆರ್ಥಿಕ ಕಾರಿಡಾರ್ ಹಾಗೂ ಮೈಸೂರಿನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ 200 ಕೋಟಿ ನಿಗದಿ. ಬೆಂಗಳೂರಿನಲ್ಲಿ ಜೈವಿಕ ಕೇಂದ್ರ ಸ್ಥಾಪಿಸುವ ನಿರ್ಧಾರಗಳು ಸ್ವಾಗತಾರ್ಹ ಎಂದರು.  

ಶಿಕ್ಷಣ ಅತ್ಯಗತ್ಯ: ಅಮರ್ ಸಿಂಗ್
ತಿಪಟೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಅತ್ಯಾವಶ್ಯಕ. ವಿದ್ಯಾಭ್ಯಾಸದ ಕಡೆ ಗಮನಹರಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಭುವನೇಶ್ವರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಅಮರ್ ಸಿಂಗ್ ವಿದ್ಯಾರ್ಥಿಗಳಿಗೆ  ತಿಳಿಸಿದರು. ತಾಲೂಕಿನ ಹೊನ್ನವಳ್ಳಿ ಹೋಬಳಿ ಮಣಕೀಕೆರೆ ಭುವನೇಶ್ವರಿ ವಿದ್ಯಾಸಂಸ್ಥೆಯವತಿಯಿಂದ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಅತ್ಯುತ್ತಮವಾಗಿದ್ದು, ಮುಂದಿನ ಬಾರಿಯೂ ಉತ್ತಮ ಫಲಿತಾಂಶ ಪಡೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪರಿಪೂರ್ಣ ಶಿಕ್ಷಣವನ್ನು ಬೋಧಿಸಬೇಕೆಂದರು. ಶಿವಗಂಗಾ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ವೇದವ್ಯಾಸನಾಯಕ್ ಶಾಲೆಯ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿದರು. ಸಹ ಶಿಕ್ಷಕ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪಿಡಿಒ ಹನುಮರಾಜ್, ಸಹ ಶಿಕ್ಷಕ ಎಂ.ಸ್ವಾಮಿ, ಬಿ.ಟಿ. ಉಮೇಶ್, ಪವಿತ್ರ, ಶಕುಂಲತಾ ಮತ್ತಿತರರಿದ್ದರು. ಮುಖ್ಯ ಶಿಕ್ಷಕ ರಂಗರಾಮ ಸ್ವಾಗತಿಸಿ, ಎಚ್.ಎನ್. ಪ್ರಕಾಶ್ ವಂದಿಸಿದರು.

ಶಕ್ತಿಹೀನವಾಗಿರುವ ಸಾಮರ್ಥ್ಯ ಸೌಧ
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ನಿರುದ್ಯೋಗಿ ಜನರಿಗೆ ಸಾಮರ್ಥ್ಯ ತುಂಬಲು ತರಬೇತಿ ನೀಡುವ ಸೌಧವೇ ಚಟುವಟಿಕೆಯಿಲ್ಲದೆ ಶಕ್ತಿಗುಂದುತ್ತಿದೆ.
ಸರ್ಕಾರದ ಯೋಜನೆಗಳು ಕೆಲವು ಇಲಾಖೆಗಳಿಂದ ಹೇಗೆ ಹಳ್ಳ ಹಿಡಿಯುತ್ತವೆಂಬುದಕ್ಕೆ ಇಲ್ಲಿನ ಸಾಮರ್ಥ್ಯ ಸೌಧದ ಸ್ಥಿತಿಯೇ ಉದಾಹರಣೆಯಾಗಿದೆ.
2010-11ರಲ್ಲಿ ಗ್ರಾಮಸ್ವರಾಜ್ ಯೋಜನೆಯಡಿ ರು. 25 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಮಾಡಿತು. ತನ್ನ ಸೋಮಾರಿತನ, ಬೇಜವಾಬ್ದಾರಿತನಕ್ಕೆ ಹೆಸರುವಾಸಿಯಾಗಿರುವ ಭೂಸೇನಾ ನಿಗಮವು, ಕಾಮಗಾರಿಯನ್ನು ತನ್ನ ಪಾಲಿನ ಕಮೀಷನ್ ಪಡೆದು ಶಾಸಕರ ಬೆಂಬಲಿಗರೊಬ್ಬರಿಗೆ ಉಪಗುತ್ತಿಗೆ ನೀಡಿತು. ಅವರು ಸಹ ನಿಗಮದಿಂದ ಹಣಕಾಸಿನ ನೆರವು ದೊರೆತ ರೀತಿಯಲ್ಲಿಯೇ ಕಾಮಗಾರಿಯನ್ನು ಮಾಡುತ್ತಾ ಬಂದರು. ಕೊನೆಗೆ 2013ರಲ್ಲಿ ಚುನಾವಣೆ ಘೋಷಣೆಯಾಗುತ್ತದೆಂಬ ತರಾತುರಿಯಲ್ಲಿ ಒತ್ತಡಕ್ಕೆ ಮಣಿದು ಅಪೂರ್ಣ ಕಾಮಗಾರಿಯ ಕಟ್ಟಡದ ಉದ್ಘಾಟನೆಯು ಸಹ ನೆರವೇರಿತು. ಆದರೆ ಅಲ್ಲಿಂದ ಮುಂದೆ ಉಳಿದಿರುವ ಕಾಮಗಾರಿಯನ್ನು ಉಪಗುತ್ತಿಗೆದಾರರಾಗಲಿ,ಅಥವಾ ಕಾಮಗಾರಿ ಹೊಣೆಹೊತ್ತ ನಿಗಮವಾಗಲಿ ತಿರುಗಿಯು ನೋಡಲಿಲ್ಲ. ಇದರಿಂದ ಸರ್ಕಾರದ ಹಣ ಅನಾವಶ್ಯಕವಾಗಿ ಖರ್ಚಾಗಿದ್ದನ್ನು ಬಿಟ್ಟರೆ ಗ್ರಾಮ ಸ್ವರಾಜ್ ಯೋಜನೆಯ ಉದ್ದೇಶ ಮಾತ್ರ ಈಡೇರಲಿಲ್ಲ. ನಿಗದಿತ ಸಮಯದಲ್ಲಿ ಕಟ್ಟಡವನ್ನು  ಪೂರೈಸಿದ್ದರೆ, ಈಗಾಗಲೇ ಸಾವಿರಾರು ಮಂದಿ ತರಬೇತಿ ಪಡೆಯಬಹುದಿತ್ತು. ಆದರೆ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುವ ಇಂತಹ ಇಲಾಖೆಗಳ ಮೇಲೇಕೆ ಸರ್ಕಾರ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಚರಂಡಿ ಸ್ವಚ್ಛತೆ
ಮಧುಗಿರಿ: ಇಲ್ಲಿನ 17ನೇ ವಾರ್ಡಿನ ರಾಯಗಾಲುವೆ ಚರಂಡಿಯಲ್ಲಿ ಬೃಹದಾಕರವಾಗಿ ಬೆಳೆದು ನಿಂತಿದ್ದ ಗಿಡ,ಬಳ್ಳಿಗಳನ್ನು ಪೌರಕಾರ್ಮಿಕರು ಕಡಿದು ಹಾಕಿ ಚರಂಡಿ ಹೂಳು ತೆಗೆದು, ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸಿದರು. ಈ ರಾಯಗಾಲುವೆಯಲ್ಲಿ ಹೂಳು ತುಂಬಿ ಮಳೆ ಬಿದ್ದಾಗ ಕೊಳಚೆ ನೀರು ತಗ್ಗು ಪ್ರದೇಶದ ಮನೆಗಳಿಗೆ ಹರಿದು ನಿವಾಸಿಗಳನ್ನು ಹೈರಾಣಗೊಳಿಸುತ್ತಿತ್ತು. ನಿವಾಸಿಗಳ ದೂರಿನ ಮೇರೆಗೆ ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಕೂಡಲೇ ಈ ರಾಯಗಾಲುವೆ ಚರಂಡಿ ಸ್ವಚ್ಛಗೊಳಿಸಿ ಕೊಳಚೆ ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಸ್ವಚ್ಛಗೊಳಿಸಿದರು. ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ ಮಾತನಾಡಿ, ಈ ವಾರ್ಡಿನಲ್ಲಿ ಬಹುತೇಕ ದಲಿತರು ವಾಸಿಸುತ್ತಿದ್ದು, ಈ ಚರಂಡಿ ದುರಸ್ಥಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಅತಿ ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದರು. ಮುಖಂಡ ಎಂ. ರಂಗನಾಥ್ ಬಾಬು, ಶ್ರೀನಾಥ್ ಬಾಬು ಇದ್ದರು.

ಕರಡಿ ದಾಳಿ: ಮಹಿಳೆಗೆ ಗಾಯ
ಮಧುಗಿರಿ: ಬಹಿರ್ದೆಸೆಗೆ ತೆರಳಿದ್ದ ಮಹಿಳೆಯೊಬ್ಬಳ ಮೇಲೆ ಕರಡಿ ದಾಳಿ ಮಾಡಿ ತಲೆ, ಭುಜ ಪರಚಿರುವ ಘಟನೆ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಲಿಂಗಸಂದ್ರ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಪ್ರಮೀಳಮ್ಮ(40) ಎಂಬಾಕೆ ಕರಡಿ ದಾಳಿಗೆ ತೀವ್ರ ಗಾಯಗೊಂಡು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಟ್ಟೆ ನೋವು: ಯುವಕ ಆತ್ಮಹತ್ಯೆ
ಮಧುಗಿರಿ: ಜು.13 ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಬಾಚೇನಹಳ್ಳಿ ಗ್ರಾಮದ ಯುವಕನೊಬ್ಬ ಹೊಟ್ಟೆ ನೋವು ತಾಳಲಾರದೇ ಮತ್ತು ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ. ಬಸವರಾಜು (24) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ಈತ ಆಗಾಗ್ಗೆ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತಿದ್ದ. ಈತ ವಿಷ ಸೇವಿಸಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ಸೇವಿಸಿ ವ್ಯಕ್ತಿ ಮೃತ
ಕುಣಿಗಲ್: ತಾಲೂಕಿನ ಅಂಚೇಪಾಳ್ಯ ಕೈಗಾರಿಕೆ ವಸಾಹತು ಪ್ರದೇಶದಲ್ಲಿ ಖಾಸಗಿ ಕಾರ್ಖಾನೆಯ ಕಾರ್ಮಿಕನೊಬ್ಬ ಮದ್ಯ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು  ನೇಪಾಳ ಮೂಲದ ಗಗನಸಿಂಗ್ (45ವರ್ಷ) ಎಂದು ಗುರುತಿಸಲಾಗಿದೆ. ಕೈಗಾರಿಕೆ ವಸಹಾತು ಪ್ರದೇಶದಲ್ಲಿನ ತೆಂಗಿನಪುಡಿ ತಯಾರಿಕೆ ಕಾರ್ಖಾನೆಯ ಕಾರ್ಮಿಕನಾಗಿದ್ದು, ಭಾನುವಾರ ಬೆಳಗ್ಗೆ ಕಾರ್ಖಾನೆ ಸಮೀಪ ಮೃತದೇಹ ಪತ್ತೆಯಾಗಿದೆ. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿಬ್ಬ ಕುಸಿದು ವ್ಯಕ್ತಿ ಸಾವು
ಶಿರಾ: ಹೊಲಕ್ಕೆ ಮಣ್ಣು ಹಾಕಲು ಮಣ್ಣು ತೆಗೆಯಲು ಹೋದ ರೈತನೊಬ್ಬನ ಮೇಲೆ ಮಣ್ಣು ದಿಬ್ಬ ಕುಸಿದು ಮೃತಪಟ್ಟಿರುವ ಘಟನೆ ತಾಲೂಕಿನ ಓಬಳಾಪುರದಲ್ಲಿ ಜರುಗಿದೆ. ಗಂಡಿಹಳ್ಳಿ ಸಮೀಪದ ಓಬಳಾಪುರದ ಗುಜ್ಜಾರಪ್ಪ (40) ಮೃತ ವ್ಯಕ್ತಿ. ಮಣ್ಣು ಅಗೆಯುತ್ತಿದ್ದಾಗ ದಿಬ್ಬ ಕುಸಿದಿದ್ದು, ಜೊತೆಯಲ್ಲಿ ಬಂದಿದ್ದ ಕೆಂಚಪ್ಪ ಎಂಬುವರು ಗುಜ್ಜಾರಪ್ಪನನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.