ಒತ್ತುವರಿದಾರರನ್ನು ಒದ್ದು ಹೊರ ಹಾಕಿ
ತುಮಕೂರು: ಸರ್ಕಾರಿ ಜಾಗ ಒತ್ತುವರಿ ವಿಪರೀತವಾಗಿದೆ. ಶಿರಾ ಭಾಷೆಯಲ್ಲಿ ಹೇಳುತ್ತಿದ್ದೇನೆ. ಒತ್ತುವರಿದಾರರನ್ನು ಒದ್ದು ಹೊರ ಹಾಕಿ. ರಾಜಕಾರಣಿ, ಉದ್ಯಮಿ, ಅಧಿಕಾರಿ ಯಾರೇ ಆಗಿರಲಿ, ಎಷ್ಟೇ ಪ್ರಭಾವಿಯಾಗಿರಲಿ, ಯಾವುದೇ ಪಕ್ಷಕ್ಕೆ ಸೇರಿರಲಿ ಮುಲಾಜಿಲ್ಲದೆ, ಪಕ್ಷಾತೀತವಾಗಿ ಒತ್ತುವರಿ ತೆರವುಗೊಳಿಸಿ ಎಂದು ಕಾನೂನು-ಸಂಸದೀಯ, ನ್ಯಾಯ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ತುಮಕೂರು ಮಹಾನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪಾರ್ಕ್, ಗೋಮಾಳ, ರಾಯಗಾಲುವೆ ಸೇರಿದಂತೆ ಸರ್ಕಾರಿ ಜಮೀನು ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂಬ ಒಂದಷ್ಟು ಮಾಹಿತಿ ತಮ್ಮ ಬಳಿಯಿದೆ ಎಂದ ಟಿಬಿಜೆ, ಜೆಸಿಬಿ ತನ್ನಿ ಕೂಡಲೇ ತೆರವುಗೊಳಿಸಿ ಎಂದರು. ಒತ್ತುವರಿ ಸಂಬಂಧ ವಾರ್ಡ್ವಾರು ಮಾಹಿತಿ ನೀಡುವಂತೆ ಸದಸ್ಯರಿಗೆ ಸಲಹೆ ನೀಡಿದ ಸಚಿವರು, ಮೇಯರ್, ಉಪಮೇಯರ್, ಆಯುಕ್ತರು, ಪಾಲಿಕೆ ಸದಸ್ಯರು ಸಂಬಂಧಪಟ್ಟ ಎಲ್ಲರೂ ಅಧಿಕಾರಿಗಳಿಗೆ ಬೆಂಬಲ ನೀಡಿ. ಒತ್ತುವರಿ ತೆರವುಗೊಳಿಸಲು ಸಹಕರಿಸಿ ಎಂದು ಸಚಿವರು ಕರೆ ನೀಡಿದರು.
ಸಚಿವರ ಹೇಳಿಕೆಯಿಂದ ಪ್ರಭಾವಿತರಾಗಿ ಹುಮ್ಮಸ್ಸಿನಿಂದ ಮಾತನಾಡಿದ 1 ನೇ ವಾರ್ಡ್ನ ಕೆಜೆಪಿಯಿಂದ ಗೆದ್ದು, ಬಿಜೆಪಿಗೆ ಸೇರ್ಪಡೆಯಾಗಿರುವ ಸದಸ್ಯ ಇಂದ್ರಕುಮಾರ್, ತಮ್ಮ ವಾರ್ಡ್ನಲ್ಲಿ ಗೋಮಾಳ, ಕೆರೆ ಸೇರಿದಂತೆ 100 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ಒತ್ತುವರಿಯಾಗಿದೆ ಕೂಡಲೇ ತೆರವುಗೊಳಿಸಿ ಎಂದು ಸಚಿವರಿಗೆ ಮಾಹಿತಿ ನೀಡಿದರು. ಜೆಡಿಎಸ್ ಸದಸ್ಯ ನಾಗರಾಜ್ ಮಾತನಾಡಿ, ತುಮಕೂರಿನಲ್ಲಿ 108 ಎಕರೆ ಸರ್ಕಾರಿ ಪಾರ್ಕ್ಗಳು ಒತ್ತುವರಿಯಾಗಿವೆ. ಉಳ್ಳವರ ಪಾಲಾಗಿವೆ. ಈ ಕುರಿತು ದಾಖಲಾತಿಗಳು ಇವೆ. ಕೂಡಲೇ ತೆರವುಗೊಳಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮೇಯರ್ ಗೀತಾ ರುದ್ರೇಶ್, ಉಪಮೇಯರ್ ಧನಲಕ್ಷ್ಮಿ ರವಿ, ಆಯುಕ್ತ ಅರ್ಷಾದ್ ಷರೀಪ್, ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಹಾಗೂ ಪಾಲಿಕೆಯ ಸದಸ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

