ತುಮಕೂರು

ಮಧುಗಿರಿ ಬಂದ್ ಸಂಪೂರ್ಣ

Published On :

ಮಧುಗಿರಿ: ರಾಜ್ಯದ ಬೆಳಗಾವಿ ಯಳ್ಳೂರಲ್ಲಿ ಗಡಿ ವಿವಾದ ಖ್ಯಾತೆ ಮಾಡುತ್ತಿರುವ ಎಂಇಎಸ್ ಹಾಗೂ ಶಿವಸೇನೆ  ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ಮಧುಗಿರಿಯಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟ ಹಾಗೂ ನಾನಾ ಸಂಘ ಸಂಸ್ಥೆಗಳು ಮಂಗಳವಾರ ಕರೆ ನೀಡಿದ್ದ ಮಧುಗಿರಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು, ಬ್ಯಾಂಕ್, ಎಲ್ಲ ಸರ್ಕಾರಿ ಕಚೇರಿ, ಸಿನಿಮಾ ಟಾಕೀಸ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳು ಬಿಕೋ ಎನ್ನುತ್ತಿದ್ದವು. ಪಾವಗಡ, ತೂಮಕೂರು, ಗೌರಿಬಿದನೂರು, ಹಿಂದುಪೂರ ಹಾಗೂ ಶಿರಾ ಕಡೆ ಓಡಾಡುವ ಪ್ರಯಾಣಿಕರು ಪರದಾಡಿದರು.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಪ್ರತಿಭಟನೆ ಮೆರವಣಿಗೆ ನಡೆಸಿ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ವಿರುದ್ಧ ದಿಕ್ಕಾರ ಕೂಗಿದರು.
ಮಹಾರಾಷ್ಟ್ರ ಗಡಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ತನ್ನ ಉದ್ಧಟತನ ಪ್ರದರ್ಶಿಸಿ ಕನ್ನಾಡಂಬೆಯ ಅಣುಕು ಶವಯಾತ್ರೆ ನಡೆಸಿ ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿ ಕನ್ನಡಿಗರಿಗೆ ಅವಮಾನ ಮಾಡಿದ್ದಲ್ಲದೆ,  ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊನೆಹಳ್ಳಿ, ಶಿನೋಹಳ್ಳಿಯಲ್ಲಿ ಮೆರವಣಿಗೆ ನಡೆಸಿ ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ಅನುಚಿತವಾಗಿ ವರ್ತಿಸಿದೆ. ನಮ್ಮ ರಾಜ್ಯ ಸರ್ಕಾರ ಯಳ್ಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕನ್ನಡಪರ ಹೋರಾಟಗಾರರನ್ನು  ಬಂಧಿಸಿದ್ದಲ್ಲದೆ, ಮಹಾರಾಷ್ಟ್ರದಿಂದ ಬೆಳಗಾವಿಗೆ ಗಲಾಟೆ ಎಬ್ಬಿಸಲು ಬಂದ ಮರಾಠಿ ಪುಂಡರನ್ನು ಬಂಧಿಸದೇ ನಮ್ಮವರನ್ನೇ ಬಂಧಿಸಿ ತಾರತಮ್ಯ ಎಸಗಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರ ಈ ಕೂಡಲೇ ಎಂಇಎಸ್ ಪುಂಡಾಟಿಕೆ ನಿರ್ನಾಮ ಮಾಡುವ ಜತೆಗೆ ಆ ಸಂಘಟನೆ ನಿಷೇಧಿಸಬೇಕು. ಕನ್ನಡ ನಾಡು, ನುಡಿ, ಜನರ ಸ್ವಾಭಿಮಾನ ಎತ್ತಿ ಹಿಡಿಯುವ ಇಚ್ಚಾ ಶಕ್ತಿಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.
ಪ್ರಭಾರ  ಉಪವಿಭಾಗಾಧಿಕಾರಿ ಕೆ. ರಮೇಶ್ ಅವರಿಗೆ ಮನವಿ ಅರ್ಪಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಕೇಬಲ್ ಸುಬ್ಬು, ಅಧ್ಯಕ್ಷ ರಾಘವೇಂದ್ರ, ಜಯಕರ್ನಾಟಕ ಅಧ್ಯಕ್ಷ ಚಂದು, ಕರವೇ ವೇದಿಕೆ, ಕನ್ನಡ ಸೇನೆ ಅಧ್ಯಕ್ಷ ಭಾಸ್ಕರ್, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಸೇರಿದಂತೆ ಅನೇಕ  ಹೋರಾಟಗಾರರು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಬಂದ್ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ಎರ್ಪಡಿಸಲಾಗಿತ್ತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.