ತುಮಕೂರು

ಬಿಜೆಪಿ ಧರ್ಮ, ಜೆಡಿಎಸ್ ಜಾತಿಗೆ ಸೀಮಿತ

Published On :

ಕ.ಪ್ರ.ವಾರ್ತೆ ನಂಜನಗೂಡು ಮಾ.30
ಬಿಜೆಪಿ ಧರ್ಮ ಒಂದಕ್ಕೆ ಸೀಮಿತವಾದರೆ, ಜೆಡಿಎಸ್ ಮತ್ತು ಕೆಜೆಪಿ ಜಾತಿಗೆ ಸೀಮಿತವಾದ ಪಕ್ಷಗಳು ಎಂದು ಸಂಸದ ಆರ್. ಧ್ರುವನಾರಾಯಣ ಟೀಕಿಸಿದರು.
ವಿಧಾನಸಭಾ ಚುನಾವಣೆಯ ಅಂಗವಾಗಿ ಶನಿವಾರ ಪೂರ್ವ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಇಂತಹ ಅಸಮಾನತೆಯ ಪಕ್ಷಗಳ ನಡುವೆ ಕಾಂಗ್ರೆಸ್ ಸಾಮಾಜಿಕ ನ್ಯಾಯ ತಳಹದಿಯ ಮೇಲೆ ನಿಂತಿದೆ. ಬಿಜೆಪಿ, ಕೆಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಮುಖಗಳು. ಧೈರ್ಯವಿದ್ದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ  ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪಕ್ಷದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಳೆಂದು ದಲಿತ, ಹಿಂದುಳಿದ ಇಲ್ಲವೇ ಅಲ್ಪಸಂಖ್ಯಾತರ  ಹೆಸರನ್ನು ಘೋಷಿಸಲಿ ಎಂದು ಸವಾಲೆಸೆದರು.
ಬಿಜೆಪಿಯಿಂದ ಕಳಂಕ: ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಕಡಿದಾಳು ಮಂಜಪ್ಪ,
ವೀರೇಂದ್ರ ಪಾಟೀಲ್, ಡಿ. ದೇವರಾಜ ಅರಸು, ಆರ್. ಗುಂಡೂರಾವ್, ಎಂ. ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ ಮುಂತಾದ ಧೀಮಂತ ನಾಯಕರುಗಳೆಲ್ಲರೂ ಕಾಂಗ್ರೆಸ್ ಪಕ್ಷದ ಕೊಡುಗೆ. ಇವರೆಲ್ಲರೂ ಕರ್ನಾಟಕವನ್ನು ಪ್ರಗತಿಯ ರಾಜ್ಯವನ್ನಾಗಿ ರೂಪಿಸಿದರು. ಆದರೆ, ಕಳೆದ ನಾಲ್ಕೂವರೆ ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸ್ವಾರ್ಥ ಸಾಧನೆಯಲ್ಲೇ ಮಗ್ನರಾಗಿ ಆಡಳಿತ ಮರೆತು, ನಾಡಿನ ಸಂಪತ್ತನ್ನು ಲೂಟಿ ಹೊಡೆದು, ರಾಜ್ಯಕ್ಕೆ ಕಳಂಕ ತಂದಿಟ್ಟರು ಎಂದು ಕಿಡಿಕಾರಿದರು. ಹಾಗಾಗಿ ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ರಾಜ್ಯದ ಗೌರವ ಮಣ್ಣು ಪಾಲಾಯಿತು. ಈಗ ಮತ್ತೆ ರಾಜ್ಯದ ಘನತೆಯನ್ನು ಉತ್ಕರ್ಷಕ್ಕೆ ಕೊಂಡೊಯ್ಯುವ ಸದಾವಕಾಶ ಚುನಾವಣೆಯ ಮೂಲಕ ಎದುರಾಗಿದೆ. ಬಿಜೆಪಿಯ ಒಡಕು ಲಾಭವಾಗಿ ಪರಿಣಮಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಸೂಚನೆ ನಿಚ್ಚಳವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಪ್ಪುಚುಕ್ಕೆ ಇಲ್ಲ: ಯಾವುದೇ ಕಪ್ಪುಚುಕ್ಕೆ ಇಲ್ಲದೆ ನಾಲ್ಕು ದಶಕಗಳ ಕಾಲ ಶುದ್ಧ ರಾಜಕಾರಣ ನಡೆಸಿರುವ ಶಾಸಕ ವಿ. ಶ್ರೀನಿವಾಸಪ್ರಸಾದ್ ದಕ್ಷ, ಪ್ರಾಮಾಣಿಕ ಮತ್ತು ಸ್ವಾಭಿಮಾನಿ ರಾಜಕಾರಣಿ ಎಂದೇ ಪ್ರಸಿದ್ಧರು. ಅವರ ಅಧಿಕಾರ ಅವಧಿಯಲ್ಲಿ ತಾಲೂಕು ಗಮನಾರ್ಹ ಅಭಿವೃದ್ಧಿ ಕಂಡಿದೆ. ಇಷ್ಟಾದರೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಚಾರದಲ್ಲಿ ತೊಡಗುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು. ತಮ್ಮ ಇನ್ನು ಒಂದು ವರ್ಷದ ಅಧಿಕಾರವಧಿಯೊಳಗಾಗಿ ಮೈಸೂರು- ನಂಜನಗೂಡು ಚತುಷ್ಪಥ ರಸ್ತೆಯ ಕಾಮಗಾರಿಗೆ ಚಾಲನೆ ನೀಡುವುದಾಗಿ ಸಂಸದರು ಭರವಸೆ ನೀಡಿದರು. ಮುಖಂಡರಾದ ಜಿಪಂ ಸದಸ್ಯ ಕೆ. ಮಾರುತಿ, ಕೆಪಿಸಿಸಿ ಸದಸ್ಯ ಅಕ್ಬರ್, ಯು.ಎನ್. ಪದ್ಮನಾಭರಾವ್, ಪುರಸಭಾ ಸದಸ್ಯೆ ಅನುಸೂಯ, ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಡಿಸಿಸಿ ಸದಸ್ಯ ರಾಮು, ಮಾದಪ್ಪ, ಪಿ. ಶ್ರೀನಿವಾಸು ಮತ್ತು ನೀಲಿಸಿದ್ದು ಮಾತನಾಡಿ, ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿ ಮತ್ತು ಅಭಿವೃದ್ಧಿಗಾಗಿ ಪ್ರಸಾದ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪುರಸಭಾ ಸದಸ್ಯ ದೊರೆಸ್ವಾಮಿ, ಹಂಚೀಪುರದ ರಾಜಶೇಖರ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದರು. ಬ್ಲಾಕ್ ಅಧ್ಯಕ್ಷರಾದ ಕೆ.ಎಸ್. ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಮುಖಂಡರಾದ ಯು.ಎನ್. ಪದ್ಮನಾಭರಾವ್, ಜಿಪಂ ಪ್ರತಿಪಕ್ಷ ನಾಯಕ ಕೆ. ಮಾರುತಿ, ಕೆಪಿಸಿಸಿ ಸದಸ್ಯರಾದ ವಿ. ರಾಮಸ್ವಾಮಿ, ಅಕ್ಬರ್‌ಅಲಿ, ಎಚ್.ಪಿ. ಬಸವರಾಜು, ಜಿಪಂ ಮಾಜಿ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ಮಾಜಿ ಪುರಸಭಾಧ್ಯಕ್ಷರಾದ ಸಿ.ಎಂ. ಶಂಕರ್, ಶ್ರೀಧರ್, ಪಿ. ಶ್ರೀನಿವಾಸ್, ಎನ್.ಆರ್. ದೊರೆಸ್ವಾಮಿ, ತಾಪಂ ಸದಸ್ಯರಾದ ಲಕ್ಷ್ಮೀ ನಾಗರಾಜು, ಎಂ.ಆರ್. ಪುಟ್ಟಸ್ವಾಮಿ, ಎಪಿಎಂಸಿ ಉಪಾಧ್ಯಕ್ಷ ಚಂದ್ರಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.