ತುಮಕೂರು

ಜಾತೀಯತೆ ತೊರೆದು ಮತ ನೀಡಿ, ಕೆಜೆಪಿ ಗೆಲ್ಲಿಸಿ

Published On :

ಕ.ಪ್ರ.ವಾರ್ತೆ ್ಣ ತಿಪಟೂರು ್ಣ ಮಾ.30
ಕಲ್ಪತರು ನಾಡಿನ ಎಲ್ಲಾ ಮತಬಾಂಧವರು ಜಾತಿಯತೆಯನ್ನು ತೊರೆದು ಒಂದೇ ಎಂಬ ಮನೋಭಾವನೆಯನ್ನಿಟ್ಟುಕೊಂಡು ಕೆಜೆಪಿಯನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಕಾರ್ಯಕರ್ತರು ಮತ್ತು ಮತದಾರರಲ್ಲಿ ಮಾಜಿ ಶಾಸಕ ಹಾಗೂ ಕೆಜೆಪಿ ಮುಖಂಡ ಬಿ.ನಂಜಾಮರಿ ಮನವಿ ಮಾಡಿದರು.
ನಗರದ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕಿನ ಕಸಬಾ ಹೋಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ನಾನು ಈ ಹಿಂದೆ ಜೆಡಿಎಸ್ ಶಾಸಕನಾಗಿದ್ದಾಗ ಕುಮಾರಸ್ವಾಮಿಯವರು ತಿಪಟೂರು ತಾಲೂಕು ಮತ್ತು ನಗರದ ಅಭಿವೃದ್ಧಿಗೆ, ರಸ್ತೆ ಅಗಲೀಕರಣಕ್ಕೆ ಮತ್ತು ಕೆಲ ನೀರಾವರಿ ಯೋಜನೆಗಳಿಗೆ ಹಣ ಕೇಳಿದರೆ ನೀಡಲಿಲ್ಲ. ಆದರೆ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ತಿಪಟೂರು ಮತ್ತು ಇಲ್ಲಿನ ಜನಸಾಮಾನ್ಯರ ಮೇಲೆ ಇಟ್ಟಿರುವ ಕಾಳಜಿಯಿಂದ ನೂರಾರು ಕೋಟಿ ಹಣ ಬಿಡುಗಡೆಗೊಳಿಸಿ ತಾಲೂಕಿನ ಜನಸಾಮಾನ್ಯರ ಹೃದಯ ಗೆದ್ದಿದ್ದು ಮುಂಬರಲಿರುವ ಚುನಾವಣೆಯಲ್ಲಿ ಎಲ್ಲರೂ ಅವರ ಕೈ ಬಲಪಡಿಸಿ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನಾಗಿಸಬೇಕೆಂದು ಕರೆ ನೀಡಿದರು.
450 ಕೋಟಿ ರು. ಅನುದಾನ: ಕೆಜೆಪಿ ಮುಖಂಡ ಹಾಗೂ ಅಭ್ಯರ್ಥಿ ಲೋಕೇಶ್ವರ ಮಾತನಾಡಿ ಯಡಿಯೂರಪ್ಪನವರು ತಿಪಟೂರು ಅಭಿವೃದ್ಧಿಗೆ 450ಕೋಟಿ ರು. ಅನುದಾನ ನೀಡಿದ್ದಾರೆ. ಆದರೆ ಆ ಯೋಜನೆಗಳ್ಯಾವವು ಸರಿಯಾದ ರೀತಿಯಲ್ಲಿ ಆಗಿಲ್ಲ. ತಾಲೂಕಿನಲ್ಲಿ ಈವರೆಗೂ ವಿರೋಧ ಪಕ್ಷಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿರುವುದರಿಂದ ಅನ್ಯಾಯಗಳನ್ನು ಯಾರೂ ವಿರೋಧಿಸುವ ಧೈರ್ಯ ಮಾಡಲಿಲ್ಲ. ನಾನು ಇತ್ತೀಚೆಗೆ ಕೆಲ ಅನ್ಯಾಯ, ಅಕ್ರಮಗಳನ್ನು ವಿರೋಧಿಸುತ್ತಿರುವುದಕ್ಕೆ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಜನರಿಗೆ ತಪ್ಪು ಮಾಹಿತಿಗಳನ್ನು ನೀಡಿ ಲೋಕೇಶ್ವರ್‌ದು ಪೊಲೀಸ್ ಬುದ್ಧಿ ಎಂದು ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ಆದರೆ ಪೊಲೀಸ್ ಬುದ್ಧಿ ಎಂದರೆ ಶಿಸ್ತು, ರಕ್ಷಣೆ ಎಂಬುದು ಅವರಿಗೆ ಗೊತ್ತಿದ್ದಂತಿಲ್ಲ. ನಾನು ಯಾವುದೇ ಸ್ವಾರ್ಥಕ್ಕೆ ರಾಜಕೀಯ ಮಾಡದೆ ಬಡವರ, ಮಧ್ಯಮ ವರ್ಗದವರ ಹಾಗೂ ಕೃಷಿ ಮತ್ತು ಇನ್ನಿತರೆ ಸಮಸ್ಯೆಗಳಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ರಾಜಕೀಯ ಪ್ರವೇಶಿಸಿರುವೆ. ಎಲ್ಲಾ ಗ್ರಾಮ, ಹೋಬಳಿ ಹಾಗೂ ನಗರದಾದ್ಯಂತ ಕೆಜೆಪಿಯನ್ನು ಸಂಘಟಿಸುವುದಾಗಿ ತಿಳಿಸಿದರು.
ಸ್ಮರಣೀಯ: ತಾಲೂಕು ಅಧ್ಯಕ್ಷ ರಘುಪತಿ ಮಾತನಾಡಿ ದಲಿತರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ಯಡಿಯೂರಪ್ಪನವರು ನೀಡಿದ ಸೌಲಭ್ಯಗಳು ಸ್ಮರಣೀಯ. ತಾಲೂಕಿನ ಇತಿಹಾಸದಲ್ಲೇ ಒಬ್ಬ ದಲಿತನನ್ನು ಪಕ್ಷದ ತಾಲೂಕು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ದಲಿತರ ಬಗ್ಗೆ ಅವರಿಗಿರುವ ಕಾಳಜಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು.
ರಾಜ್ಯ ಯುವ ಕಾರ್ಯದರ್ಶಿ ಸಂತೋಷ್ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳಲ್ಲಿಯೇ ಧೀಮಂತ ನಾಯಕ ಬಿ.ಎಸ್.ವೈ. ಅಂತವರ ಅಲೆಯಲ್ಲಿ ತೇಲಿ ಬಂದು ಈ ತಾಲೂಕಿನ ಅಧಿಕಾರದ ಗದ್ದುಗೆಯನ್ನೇರಿದ ನಾಗೇಶ್ ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದು, ಅವರ ಸೋಲಿನಿಂದ ತಾಲೂಕಿನ ಬಡ-ಮಧ್ಯಮ ವರ್ಗ ನೆಮ್ಮದಿಯಾಗಿರಬಹುದೆಂದು ತಿಳಿಸಿದರು. ತಾಲೂಕು ಮುಖಂಡ ಈರಲಗೆರೆ ಶೇಖರ್ ಮಾತನಾಡಿ ಕಲ್ಪತರು ನಾಡಿನ ಅಭಿವೃದ್ಧಿಗೆ ವಚನ ನೀಡಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರೂ. 450 ಕೋಟಿಗೂ ಹೆಚ್ಚು ಹಣ ನೀಡಿದ್ದನ್ನೇ ಮರೆತು ಅವರ ಬೆನ್ನಿಗೆ ಚೂರಿ ಹಾಕಿರುವ ಹಾಲಿ ಶಾಸಕ ನಾಗೇಶ್ ಠೇವಣಿ ಕಳೆಯಬೇಕು. ಯಡಿಯೂರಪ್ಪನವರ ಹೆಸರಿನಲ್ಲಿ ಗೆದ್ದ ಅವರು ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸದೆ ಕೇವಲ ಅಭಿವೃದ್ಧಿ ಮಂತ್ರ ಜಪಿಸುತ್ತಾ ಕಾಲ ಕಳೆದಿರುವುದು ನಾಚಿಕೆಗೇಡಿನ ವಿಷಯ ಎಂದರು. ಸಮಾವೇಶದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಸುನಿತಾ, ಅಲ್ಪ ಸಂಖ್ಯಾತರ ತಾಲೂಕು ಅಧ್ಯಕ್ಷ ಮಹಮದ್ ಅನ್ವರ್, ರಂಗಾಪುರ ದೇವರಾಜ್, ನಗರಸಭಾ ಸದಸ್ಯ ಯದುನಂದನ್, ತಾ.ಕಾರ್ಯದರ್ಶಿ ಮಲ್ಲೇಶ್, ನಗರ ಕಾರ್ಯದರ್ಶಿ ಗಿರೀಶ್ ಸೂಗೂರು ನಿಂಗಪ್ಪ, ಈರಲಗೆರೆ ಶಂಕರಣ್ಣ, ರಾಜಣ್ಣ, ದೊಡ್ಡಮಾರ್ಪನಹಳ್ಳಿ ಗ್ರಾಮದ ಆಟೋ ಷಡಕ್ಷರಿ ಮತ್ತಿತರರಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಇತರೆ ಪಕ್ಷಗಳ ನೂರಾರು ಮುಖಂಡರು,ಕಾರ್ಯಕರ್ತರು ಕೆಜೆಪಿ ಸೇರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.