ಲಂಚ ಸ್ವೀಕಾರ: ಎಸ್‌ಒ ಬಂಧನ
ಮಧುಗಿರಿ: ತಾಲೂಕಿನ ಬಡವನಹಳ್ಳಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕಗಳ ಇಂಡೆಂಟ್ ನೀಡುವುದಕ್ಕೆ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸ್‌ಒ ಲಕ್ಷ್ಮೀಕಾಂತ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರ ರಂಗನಾಥ ಬಡಿಗೊಂಡನಹಳ್ಳಿ, ಮಲ್ಲೇನಹಳ್ಳಿ ಗ್ರಾಮದ ರೈತರ ಐಪಿ ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ನೀಡುವಂತೆ ಎಸ್‌ಒ ಅವರಿಗೆ ಬೇಡಿಕೆ ಸಲ್ಲಿಸಿದ್ದರು. ಈ ಸಂಬಂಧ ಎಸ್‌ಒ ಲಕ್ಷ್ಮೀಕಾಂತ್ 10 ಸಾವಿರ ರು. ನೀಡುವಂತೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಾಗಿ 8 ಸಾವಿರ ರು. ನೀಡುತ್ತಿದ್ದಾಗ ತುಮಕೂರು ಲೋಕಾಯುಕ್ತ ಇನ್ಸ್‌ಪೆಕ್ಟರ್ ರಮೇಶ್‌ಕುಮಾರ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಬಲೆಗೆ ಲಕ್ಷ್ಮೀಕಾಂತ್ ಬಿದ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಲಕ್ಷ್ಮೀಕಾಂತ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಿಡಿಓಗೆ ರು. 5 ಸಾವಿರ ದಂಡ
ಅರಕಲಗೂಡು: ಚುನಾಯಿತ ಸದಸ್ಯರೊಬ್ಬರು ಕೇಳಿದ ಮಾಹಿತಿ ಒದಗಿಸದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ 5 ಸಾವಿರ ರು. ದಂಡವನ್ನು ಕರ್ನಾಟಕ ಮಾಹಿತಿ ಹಕ್ಕು ಆಯೋಗದ ನ್ಯಾಯಾಲಯ ವಿಧಿಸಿದೆ. ಜನವರಿ 2012ರ 2 ರಂದು ಕಡುವಿನಹೊಸಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ.ನಾಗರಾಜ್ 13ನೇ ಹಣಕಾಸು ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ 2-7-2012ರ ವರೆಗೂ ಅರ್ಜಿದಾರರಿಗೆ ಮಾಹಿತಿ ಒದಗಿಸಿರಲಿಲ್ಲ. ಈ ಸಂಬಂಧ ನಾಗರಾಜ್ ನ್ಯಾಯಾಲಯದಲ್ಲಿ ಮಾಹಿತಿ ಒದಗಿಸದಿರುವ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಆಲಿಸಿದ ಆಯೋಗ ಅಂದಿನ ಸರಗೂರು ಗ್ರಾಮ ಪಂಚಾಯಿತಿ ಪಿಡಿಓ, ಪ್ರಸಕ್ತ ರಾಮನಾಥಪುರ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಅಧಿಕಾರಿಗೆ 5 ಸಾವಿರ ರು. ದಂಡ ವಿಧಿಸಿದೆ.
ಮದುವೆಗೆ ಒಲ್ಲೆ: ಯುವಕನ ಬಂಧನ
ಗುಂಡ್ಲುಪೇಟೆ: ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಮದುವೆಗೆ ನಿರಾಕರಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬೇಗೂರು ಗ್ರಾಮದ ಶಿವಣ್ಣ ಎಂಬವರ ಮಗಳಾದ ಶ್ವೇತಾ(17) ಹಾಗೂ ಮಹದೇವಶೆಟ್ಟಿ ಎಂಬವರ ಮಗ ಗಣೇಶ್(21) ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಯುವಕ ಒಪ್ಪದ ಹಿನ್ನೆಲೆಯಲ್ಲಿ ಯುವತಿ ದೂರು ನೀಡಿದ್ದಳು. ಹೀಗಾಗಿ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ. ಯುವಕ ಗಣೇಶ್ ಆಟೋ ಚಾಲಕನಾಗಿದ್ದ. ಯುವತಿ ಬೇಗೂರು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಮೂರು ವರ್ಷದಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎಂದು ಹುಡುಗಿ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಶ್ವೇತಾಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗಿದೆ.
ಜಾನಪದ
ಕಲಾಮೇಳ
ಮೈಸೂರು: ಸಿದ್ಧಾರ್ಥ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ ಕನ್ನಡ ಕಲಾಮೇಳ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಮಾ.31 ರಂದು ಏರ್ಪಡಿಸಿದೆ. ಅಂದು ಬೆಳಗ್ಗೆ 10ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಸಮ್ಮೇಳನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕೆಂಪರಾಜು, ಹಿರಿಯ ಸಲಹೆಗಾರ ಎನ್. ಸುರೇಶ್ ಹಾಗೂ ಪ್ರಾಂಶುಪಾಲ ಪ್ರೊ.ಕೆ. ಚಾಮರಾಜು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

