ತುಮಕೂರು

ದೇಸಿ ಆರ್ಟಿಸಾನ್ ಹಬ್ ಸ್ಥಾಪನೆಗೆ ಹರ್ಷ

Published On :

ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.29
ಗ್ರಾಮೀಣ ಪ್ರದೇಶದಲ್ಲಿನ ನೈಪುಣ್ಯತೆ, ನೈಜಕಲೆ, ತನ್ನದೇ ಆದ ಚಾಕಚಕ್ಯತೆಯಿಂದ ಗ್ರಾಮೀಣ ಕುಲ ಕಸುಬುದಾರರು ಒಂದು ಕಾಲದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದರು. ಇಂದು ಕುಲಕಸುಬು ನಶಿಸುವ ಹಂತ ತಲುಪಿದೆ. ಇಂತಹ ಸಂದರ್ಭದಲ್ಲಿ ದೇಸಿ ಆರ್ಟಿಸಾನ್ ಹಬ್ ಸ್ಥಾಪನೆ ಹರ್ಷದ ಸಂಗತಿ ಎಂದು ಸಿದ್ಧಗಂಗಾ ಶ್ರೀಗಳು ಪ್ರತಿಪಾದಿಸಿದರು.
ಯುವ ಜನತೆ ದಾರಿ ತಪ್ಪಿದ್ದಾರೆ, ನಿರುತ್ಸಾಹಿಗಳಾಗಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯ ಮಹತ್ವದ ಅರಿವು ಅವರಿಗಿಲ್ಲದಂತಾಗಿದೆ. ಅವರಲ್ಲಿ ಧೈರ್ಯ ತುಂಬಿ ಸ್ವಾಭಿಮಾನದ ಜೀವನ ಸಾಗಿಸಲು ಈ ಆಂದೋಲನ ಪ್ರೇರಣೆ ಆಗಲಿ ಎಂದರು.
ರೈತ ತಾನು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಪಡೆಯುವಲ್ಲಿ ವಿಫಲನಾಗಿದ್ದಾನೆ. ಮೌಲ್ಯ ವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಲು ರೈತನಲ್ಲಿ ಶಕ್ತಿ ಇಲ್ಲ. ಮಳೆ ಇಲ್ಲ, ಬೆಳೆ ಇಲ್ಲ, ರೋಗ-ರುಜಿನಗಳಿಂದ ರೈತ ತತ್ತರಿಸಿದ್ದಾನೆ. ಯಾವುದೇ ಕಾಯಕ ಮಾಡಿದರೂ ಅದರಲ್ಲಿ ಅದರಲ್ಲಿ ಪ್ರತಿಯೊಬ್ಬರಿಗೂ ತೃಪ್ತಿ ಸಿಗಬೇಕು.
ಆದರೆ, ರೈತನಿಗೆ ತೃಪ್ತಿ ಜೀವನವೇ ಒಂದು ಕನಸಾಗಿದೆ ಎಂದು ವಿಷಾದಿಸಿದರು.
ಪ್ರತಿಯೊಂದು ಹಳ್ಳಿಗಳಲ್ಲಿನ ರೈತರು ಗುಂಪು ಚರ್ಚೆ ನಡೆಸಬೇಕು. ವಿಷಯವಾರು ಪರಿಣಿತರು ಮೌನವಾಗಿರದೆ ಜನತೆಗೆ ಅರಿವು ಮೂಡಿಸಬೇಕು. ಅಧ್ಯಯನ ನಡೆಸಬೇಕು, ಎಲ್ಲರೂ ಫಲಾನುಭವಿಗಳಾಗಲು ಸ್ಫೂರ್ತಿ ತುಂಬಬೇಕು ಎಂದು ಶ್ರೀಗಳು ಕರೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಮಕೂರಿನಲ್ಲಿ ಉದ್ಯೋಗ ದೊರಕುವಂತಹ ಬೃಹತ್ ಯೋಜನೆಗೆ ಮಂಜೂರಾತಿ ನೀಡಿರುವುದು ಸ್ವಾಗತ ಹಾಗೂ ಅಗತ್ಯವೂ ಕೂಡ. ಇದರಿಂದ ರೈತರ ಬದುಕಿಗೆ ಹಾಗೂ ಪರಿಸರಕ್ಕೆ ಧಕ್ಕೆ ತರದ ರೀತಿಯಲ್ಲಿ ಯೋಜನೆ ರೂಪಿಸಬೇಕು. ಈ ಬಗ್ಗೆ ವಿಶೇಷ ಗಮನವಿರಲಿ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.
ಜಿ.ಎಸ್.ಬಿ ಮನವಿ: ತುಮಕೂರು ಜಿಲ್ಲೆಯಲ್ಲಿ ರೈತರು ಬೆಳೆದ ಪ್ರತಿಯೊಂದು ಉತ್ಪನ್ನಗಳಿಗೆ ಮೌಲ್ಯವರ್ಧಿತ ಬೆಲೆ ದೊರಕಬೇಕು, ಪ್ರತಿಯೊಬ್ಬ ರೈತರು ತಮ್ಮ ಬೆಳೆಗಳನ್ನು ಉತ್ಪನ್ನಗಳನ್ನಾಗಿ ಪರಿವರ್ತಿಸಬೇಕು. ದೇಸಿ ಕುಲ ಕಸುಬು ಉಳಿಯುವಂತಾಗಬೇಕು. ಕುಲ ಕಸುಬುದಾರರ ಉತ್ಪನ್ನಗಳು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಸೆಡ್ಡು ಹೊಡೆಯುವಂತಿರಬೇಕು. ಈ ರೀತಿಯ ಒಂದು ಅಂತಾರಾಷ್ಟ್ರೀಯ ಮಟ್ಟದ ಕೇಂದ್ರ ಸ್ಥಾಪಿಸಲು ತಮ್ಮ ಅನುಭವದ ಮಾರ್ಗದರ್ಶನ ನೀಡಬೇಕು ಎಂದು ಶತಾಯುಷಿ  ಸಿದ್ಧಗಂಗಾ ಶ್ರೀಗಳಲ್ಲಿ ತುಮಕೂರು ಸಂಸದ ಜಿ.ಎಸ್.ಬಸವರಾಜ್ ಮನವಿ ಮಾಡಿದರು.
ಅವರು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನೇತೃತ್ವದಲ್ಲಿ ತುಮಕೂರು-ನಿಮ್ಜ್, ಆರ್ಟಿಸಾನ್ ಹಬ್ ರೀಸರ್ಚ್ ಹಬ್ ಕ್ಲಸ್ಟರ್ ಹಬ್ ವಿಜ್ಞಾನ ಗುಡ್ಡ ಯಶಸ್ವಿ ಯೋಜನೆ ಅನುಷ್ಠಾನಗೊಳಿಸಲು, ಪಬ್ಲಿಕ್ ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಚಿಂತನೆ ನಡೆಸಿದ್ದು, ಈ ಬಗ್ಗೆ ಜನಾಂದೋಲನವನ್ನು ಹಮ್ಮಿಕೊಂಡಿದ್ದರ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಕಿರುಹೊತ್ತಿಗೆ ಸಮರ್ಪಿಸುವ ಸಂದರ್ಭದಲ್ಲಿ ಮನವಿ ಮಾಡಿದರು.
ಶ್ರೀಕ್ಷೇತ್ರದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನದಾನ, ವಿದ್ಯಾದಾನ ಮಾಡಲಾಗಿದೆ. ಜಿಲ್ಲೆಯ ಕಟ್ಟಕಡೆಯ ಸಾವಿರಾರು ಯುವಜನರಿಗೆ ಸ್ವಯಂ ಉದ್ಯೋಗಿಗಳಾಗಿ, ಉದ್ಯಮಿಯಾಗಲು ಪ್ರೇರೇಪಿಸುವುದೇ ಈ ಆಂದೋಲನದ ಗುರಿಯಾಗಿದೆ. ಜಿಲ್ಲೆಯ ಎಲ್ಲರು ಆಂದೋಲನದಲ್ಲಿ ಭಾಗಿಯಾಗುವ ಅಗತ್ಯವಿದೆ ಎಂದರು.
ಆರ್.ರಘೋತ್ತಮರಾವ್, ವಾಮನರಾವ್, ಹೆಚ್.ಜಿ.ಬಸವರಾಜ್, ಕೊಪ್ಪಳ ನಾಗರಾಜ್,ಕೆ.ವಿ.ಪ್ರಕಾಶ್, ಪ್ರದೀಪ್ ಹೆಂಗವಳ್ಳಿ, ಅನಿತ ಪ್ರದೀಪ್,ಹೊನ್ನೇಶ್ ಕುಮಾರ್, ಕೃಷ್ಣಸ್ವಾಮಿ, ಬಂಡೇಪಾಳ್ಯ ಸಿದ್ದು, ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.