ತುಮಕೂರು

ತುರುವೇಕೆರೆ: ಕಾಂಗ್ರೆಸ್ ಟಿಕೆಟ್‌ಗೆ ಭಾರಿ ಪೈಪೋಟಿ

Published On :

ತುರುವೇಕೆರೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಹಿಂದೆಂದೂ ಇಲ್ಲದಷ್ಟು   ಪೈಪೋಟಿ ಏರ್ಪಟ್ಟಿದೆ. ಸುಮಾರು 20ಕ್ಕೂ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ 5 ಮಂದಿ ಮಾತ್ರ ಶತಾಯ ಗತಾಯ ತಾವೇ ಟಿಕೆಟ್ ಪಡೆದು ತೀರಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ. ಇವರಲ್ಲಿ ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಚೌದ್ರಿ ಟಿ ರಂಗಪ್ಪ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ರಾಜಣ್ಣ, ಬಿ.ಎಸ್.ವಸಂತಕುಮಾರ್, ಎಂ.ಎಲ್.ಗೋವಿಂದರಾಜ್‌ಗೌಡ, ಎನ್.ಆರ್.ಜಯರಾಂ, ವೆಂಕಟೇಶ್ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜು, ಚಲನ ಚಿತ್ರ ನಿರ್ಮಾಪಕ ಕೆ.ಮಂಜು ಹಾಗೂ ವಕೀಲ ಪ್ರವೀಣ್ ಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಹೈಕಮಾಂಡ್ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿರುವವರೆಂದರೆ ಮಾಜಿ ಶಾಸಕ ಎಚ್.ಬಿ.ನಂಜೇಗೌಡ. ಇವರು ತಾಲೂಕಿನಲ್ಲಿ ಕಾಂಗ್ರೆಸ್ ಸಂಘಟಿಸಿದ್ದಾರೆ. ಜಗ್ಗೇಶ್ ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿ ಗೆ ಜಂಪ್ ಮಾಡಿದ ನಂತರ ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆಗ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಡಿ.ಲಕ್ಷ್ಮೀನಾರಾಯಣ್ ರಭಸಕ್ಕೆ ಕೊಚ್ಚಿ ಹೋಗಿದ್ದರು.  ಹೆಚ್.ಬಿ.ನಂಜೇಗೌಡರಿಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಹಿರಿಯ ಮುಖಂಡ ಚೌದ್ರಿ ಟಿ.ರಂಗಪ್ಪ ಹೆಸರು ಕೂಡ ಪಟ್ಟಿಯಲ್ಲಿ ಚಾಲ್ತಿಯಲ್ಲಿದೆ. 2008ನೇ ಸಾಲಿನ ಚುನಾವಣೆಯಲ್ಲಿ ಜಗ್ಗೇಶ್‌ರಿಗೆ ಚಮಕ್ ನೀಡಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಅಖಾಡಕ್ಕೆ ಇಳಿಯಲು ಸಿದ್ದರಾಗಿದ್ದರು ಚೌದ್ರಿ ರಂಗಪ್ಪ. ಆದರೆ,  ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಜಗ್ಗೇಶ್‌ರನ್ನೇ ಕಣಕ್ಕಿಳಿಸಿತ್ತು.ಈ ಸಿಟ್ಟಿನಿಂದ ಚೌದ್ರಿ ರಂಗಪ್ಪ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಜಗ್ಗೇಶ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ  ನಂತರ ಮರಳಿ ಕಾಂಗ್ರೆಸ್ ಸೇರಿದ್ದರು.  ಮೂರನೇ ಹೆಸರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಗೀತಾ ರಾಜಣ್ಣ ರವರದ್ದು. ಯುವಕರಿಗೆ ಹಾಗೂ ಮಹಿಳೆಯರಿಗೆ ಜಿಲ್ಲೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಈ ಹೆಸರು ಚಾಲ್ತಿಗೆ ಬಂದಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಈಕೆಯನ್ನು ಹೊರೆತುಪಡಿಸಿ ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟರೂ ಸೈ ನಾವೆಲ್ಲಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೇವೆ ಎಂದು ಹೇಳಿದ್ದರೂ, ಹೈಕಮಾಂಡ್ ನ ಚಿತ್ತ ಈಕೆಯತ್ತ ನೆಟ್ಟಿದೆ ಎಂದು ಹೇಳಲಾಗಿದೆ. ಟಿಕೆಟ್ ಘೋಷಣೆಯಾದರೆ ಸ್ಥಳೀಯ ಮುಖಂಡರ ಮನವೊಲಿಸಿ ಅಖಾಡಕ್ಕೆ ಇಳಿಯುವುದು ಸ್ಪಲ್ಪ ಕಷ್ಟ ಎನ್ನಲಾಗುತ್ತಿದೆ.
ಬಿ.ಎಸ್.ವಸಂತಕುಮಾರ್ 'ಸ್ಪರ್ಧಾಚೈತ್ರ'  ಮಾಸ ಪತ್ರಿಕೆಯ ಸಂಪಾದಕರಾಗಿದ್ದಾರೆ. ಕ್ಷೇತ್ರದ ಬಹುಪಾಲು ವಿದ್ಯಾವಂತ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಿಕ್ಷಣದ ಭೋಧನೆಗೆ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ಇದ್ದುದರಲ್ಲಿ ಪಕ್ಷವನ್ನು ಚುರುಕುಗೊಳಿಸಿದ ಹೆಸರು ಮಾಡಿದ್ದಾರೆ.
ಎಂ.ಎಲ್.ಗೋವಿಂದರಾಜ್‌ಗೌಡ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಚಿದಂಬರಂ ಕುಟುಂಬದ ನಂಟು ಹಿಡಿದು ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ.
ಒಟ್ಟಾರೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡೇ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.