ನ್ಯಾಯ ವಿಳಂಬ, ಅರಾಜಕತೆ, ನಕ್ಸಲಿಸಂಗೆ ದಾರಿ
ತುಮಕೂರು: ನ್ಯಾಯ ವಿಳಂಬ, ಆಡಳಿತ ವೈಫಲ್ಯ ಅರಾಜಕತೆ, ಹಿಂಸೆ, ನಕ್ಸಲಿಸಂಗೆ ದಾರಿಯಾಗುತ್ತದೆ ಎಂಬ ಅಭಿಪ್ರಾಯ ಮಧ್ಯಸ್ಥಿಕೆ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು.
ತುಮಕೂರಿನಲ್ಲಿ ಏರ್ಪಾಟಾಗಿರುವ 5 ದಿನಗಳ ಮಧ್ಯಸ್ಥಿಕೆ ಕಾರ್ಯಾಗಾರದಲ್ಲಿ ಮೇಲಿನ ಅಭಿಪ್ರಾಯಗಳು ಬಿಂಬಿಸಲ್ಪಟ್ಟವು.
ಹೈಕೋರ್ಟ್ ನ್ಯಾಯಾಧೀಶ ಡಿ.ವಿ. ಶೈಲೇಂದ್ರಕುಮಾರ್ ಹಾಗೂ ತುಮಕೂರು ಜಿಲ್ಲಾ ಬಾರ್ ಕೌನ್ಸಿಲ್ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮೇಲಿನ ಹೇಳಿಕೆಗಳಿಗೆ ಸಾಕ್ಷಿಯಾದರು. ಮೊದಲಿಗೆ ಕಾರ್ಯಾಗಾರ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಾಧೀಶ ಡಿ.ವಿ. ಶೈಲೇಂದ್ರಕುಮಾರ್ ಮಾತನಾಡಿ, ನ್ಯಾಯದಾನ ವಿಳಂಬದಿಂದ ಜನತೆಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಹೋಗಿ, ಅರಾಜಕತೆಗೆ ಕಾರಣವಾಗುತ್ತದೆ. ನ್ಯಾಯ ವಿಳಂಬಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಕೆಲ ವಕೀಲರು, ನ್ಯಾಯಾಧೀಶರು ಕಾರಣರಾಗಿರುವುದು ದುರದೃಷ್ಟಕರ. ಜತೆಗೆ ಸ್ವಾತಂತ್ರ್ಯಾ ನಂತರ, ಸಂವಿಧಾನ ಜಾರಿಯಾಗಿದ್ದರೂ, ಕೆಲ ಬ್ರಿಟಿಷ್ ಕಾನೂನುಗಳು ಉಳಿದಿರುವುದು ಕೂಡ ನ್ಯಾಯ ವಿಳಂಬಕ್ಕೆ ಕಾರಣವಾಗಿವೆ. ಸದ್ಯದ ಪರಿಸ್ಥಿತಿ ನೋಡಿದರೆ ಗೆದ್ದೋನು ಸೋತ. ಸೋತೋನು ಸತ್ತ ಎಂಬ ಮಾತು ನೆನಪಿಗೆ ಎಂದು ಮಾರ್ಮಿಕವಾಗಿ ನುಡಿದರು. ಆಡಳಿತ ವ್ಯವಸ್ಥೆ ಶೇ. 60 ರಷ್ಟು ಕೆಲಸ ಕಾರ್ಯಾಂಗದ್ದು. ಶೇ. 30 ರಷ್ಟು ಶಾಸಕಾಂಗದ್ದು. ಮಿಕ್ಕ ಶೇ. 10 ರಷ್ಟು ಮಾತ್ರ ನ್ಯಾಯಾಂಗದ ಜವಾಬ್ದಾರಿಯಾಗಿದೆ.
ನ್ಯಾಯಾಂಗದ ಮೇಲಿದೆ: ಶಾಸಕಾಂಗ, ಕಾರ್ಯಾಂಗಗಳು ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನೋಡಿಕೊಳ್ಳುವ ಮಹತ್ವದ ಹೊಣೆಗಾರಿಕೆ ಕೂಡ ಮೇಲಿನ ಹಂತದ ನ್ಯಾಯಾಂಗದ ಮೇಲಿದೆ. ಇದು ಕಾನೂನು, ಸಂವಿಧಾನದ ಮೂಲ ಆಶಯ ಕೂಡ ಎಂದು ಶೈಲೇಂದ್ರಕುಮಾರ್ ಸ್ಪಷ್ಟಪಡಿಸಿದರು. ಸಮಸ್ಯೆಗಳನ್ನು ಅರ್ಥಪೂರ್ಣವಾಗಿ, ಸಮಾಧಾನಕರವಾಗಿ ಬಗೆಹರಿಸುವ, ಈ ಮೂಲಕ ಸಮಾಜದಲ್ಲಿ ಶಾಂತಿ, ಸಾಮರಸ್ಯ ಕಾಪಾಡುವ ಮಹತ್ವದ ಹೊಣೆಗಾರಿಕೆ ನ್ಯಾಯಾಲಯಗಳಿಗೆ ಇದೆ. ಈ ನಿಟ್ಟಿನಲ್ಲಿ ತೀರ್ಪು ನೀಡುವ ವೇಳೆ ಎಚ್ಚರಿಕೆ ಅಗತ್ಯ. ತೀರ್ಪು ನಿಷ್ಪಕ್ಷಪಾತವಾಗಿರಬೇಕು ಎಂದರು.
ನ್ಯಾಯಾಂಗಕ್ಕೆ ಹೆಚ್ಚಿನ ಮಹತ್ವ: ರಾಜ್ಯಾಂಗದ ಪ್ರಕಾರ ನ್ಯಾಯಾಂಗ ಒಂದು ಭಾಗ. ಆದರೂ ಪ್ರಮುಖ ಪಾತ್ರ ವಹಿಸುತ್ತಿದೆ. ಕಾರಣ ಶಾಸಕಾಂಗ ಹಾಗೂ ಕಾರ್ಯಾಂಗಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ. ನ್ಯಾಯಾಲಯಗಳು ಇರುವುದು ವಕೀಲರು, ನ್ಯಾಯಾಧೀಶರಿಗಾಗಿ ಅಲ್ಲ. ಬದಲಿಗೆ ಜನ ಸಾಮಾನ್ಯರಿಗೆ ಎಂಬುದನ್ನು ಮರೆಯಬಾರದು ಎಂದು ಶೈಲೇಂದ್ರಕುಮಾರ್ಬಲವಾಗಿ ಪ್ರತಿಪಾದಿಸಿದರು.
ಮಧ್ಯಸ್ಥಿಕೆ ಕೇಂದ್ರಗಳ ಪಾತ್ರ ಹಿರಿದು: ನ್ಯಾಯಾಂಗ ವ್ಯವಸ್ಥೆ ಯಾಂತ್ರಿಕವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮಧ್ಯಸ್ಥಿಕೆ ಕೇಂದ್ರಗಳ ಪಾತ್ರ ಬಲು ಹಿರಿದು. ಮಧ್ಯಸ್ಥಿಕೆ ಕೇಂದ್ರಗಳಿಂದಾಗಿ ಕೇಸುಗಳ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿ, ನ್ಯಾಯಾಲಯಗಳ ಹೊಣೆಗಾರಿಕೆ ಕಡಿಮೆಯಾಗುತ್ತದೆ. ಜತೆಗೆ ನ್ಯಾಯದಾನ ಸರಾಗವಾಗುತ್ತದೆ ಎಂದರು.
100 ಮಂದಿ ಮಧ್ಯಸ್ಥಗಾರರು: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಎಚ್.ಬಿ. ಪ್ರಭಾಕರಶಾಸ್ತ್ರಿ ಮಾತನಾಡಿ, ಸಕಾಲದಲ್ಲಿ ನ್ಯಾಯ ಸಿಗುತ್ತಿಲ್ಲ. ನ್ಯಾಯ ದೊರಕಿಸಿಕೊಳ್ಳಲು ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದ್ದರೂ, ಸಕಾಲದಲ್ಲಿ ನ್ಯಾಯ ದೊರಕಿಸಿಕೊಳ್ಳಲು ವಿಫಲರಾಗಿದ್ದೇವೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಎಲ್ಲಿ ಎಡವಿದ್ದೇವೆ. ವ್ಯಾಜ್ಯ ತೀರ್ಮಾನಿಸುವಲ್ಲಿ ವಿಫಲರಾಗಿದ್ದೇವೆ. ಶೀಘ್ರ ನ್ಯಾಯ ಇಂದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಸಕಾಲದಲ್ಲಿ ನ್ಯಾಯ ಸಿಗದೇ ಹೋದರೆ ಹೊಣೆ ಯಾರು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಧ್ಯಸ್ಥಿಕೆ ಕೇಂದ್ರಗಳು ಕೂಡ ನ್ಯಾಯಾಲಯದ ಒಂದು ಭಾಗವೇ. ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಅತಿ ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ನ್ಯಾಯ ತೀರ್ಮಾನವಾಗುತ್ತದೆ.
ಇದಕ್ಕೆ ಪಕ್ಷಗಾರರ ಒಪ್ಪಿಗೆ ಬೇಕು ಅಷ್ಟೆ. ಸದ್ಯ ಜಿಲ್ಲೆಯಲ್ಲಿ 100 ಮಂದಿ ಮಧ್ಯಸ್ಥಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಮುಂದೆ ಮತ್ತಷ್ಟು ಮಧ್ಯಸ್ಥಗಾರರನ್ನು ವ್ಯವಸ್ಥೆ ಮಾಡಲಾಗುವುದು ಎಂದು ಶಾಸ್ತ್ರಿಗಳು ಭರವಸೆ ನೀಡಿದರು.
25 ವರ್ಷಗಳಾದರೂ ಕೇಸ್ಗಳು ಮುಗಿಯಲ್ಲ: ದೊಡ್ಡಮನೆ ಗೋಪಾಲಗೌಡ
ತುಮಕೂರು: ಹೊಸದಾಗಿ ಕೇಸ್ಗಳು ದಾಖಲಾಗದೇ ಹೋದರೂ, ಇರುವ ಕೇಸ್ಗಳು ಮುಗಿಯಲು ಕನಿಷ್ಠ 25 ವರ್ಷಗಳಾದರೂ ಬೇಕು ಎಂದು ತುಮಕೂರು ಜಿಲ್ಲಾ ಬಾರ್ ಕೌನ್ಸಿಲ್ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಅಭಿಪ್ರಾಯಪಟ್ಟರು. ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ 5 ದಿನಗಳ ಮಧ್ಯಸ್ಥಿಕೆ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನ್ಯಾಯ ವಿಳಂಬ, ಆಡಳಿತ ವೈಫಲ್ಯ ಹಿಂಸೆ, ನಕ್ಸಲಿಸಂಗೆ ಕಾರಣವಾಗುತ್ತದೆ. ಹೊಸ ಕೇಸ್ಗಳು ನ್ಯಾಯಾಲಯಕ್ಕೆ ದಾಖಲಾಗದೇ, ಇನ್ನು 25 ವರ್ಷ ಕಳೆದರೂ ಈಗಿರುವ ಕೇಸ್ಗಳು ಮುಗಿಯಲ್ಲ. ಕೆಳಗಿನ ಹಂತದಲ್ಲಿ ಕೇಸ್ಗಳು ಮುಗಿದರೂ, ಮೇಲಿನ ಕೋರ್ಟ್ಗಳಿಗೆ ಮೇಲ್ಮನವಿ ಸಲ್ಲಿಕೆಯಾಗುತ್ತಲೇ ಇರುತ್ತದೆ. ನ್ಯಾಯಾಂಗ ದೊಡ್ಡಮಟ್ಟದಲ್ಲಿ ವೈಫಲ್ಯ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಬಹುಮುಖ್ಯವಾಗಿದ್ದು, ಸಂಧಾನ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಧಾನ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ಸಾಧನವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

