ತಾಲೂಕಿನಲ್ಲಿ ಮುಂಗಾರು, ಹಿಂಗಾರು ವಿಫಲ ಸಾಲ ಮನ್ನಾಕ್ಕೆ ಕೆಜೆಪಿ ಒತ್ತಾಯ
ತಿಪಟೂರು: ತಾಲೂಕಿನಲ್ಲಿ ಕಳೆದ ವರ್ಷ ಮುಂಗಾರು-ಹಿಂಗಾರು ಸಂಪೂರ್ಣ ಕೈಕೊಟ್ಟ ಪರಿಣಾಮ, ಇದ್ದ ಬದ್ದ ಬೆಳೆಗಳೆಲ್ಲಾ ವಿಫಲವಾಗಿದ್ದು, ಇಲ್ಲಿನ ರೈತರು, ಜಾನುವಾರುಗಳು ಕುಡಿಯುವ ನೀರಿಗೂ, ಮೇವಿಗೂ ಪರಿತಪಿಸುವಂತಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರ ಈ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು. ಅಲ್ಲದೆ ರೈತರಿಗೆ ಮತ್ತು ಕೂಲಿಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ರೂಪಿಸಿ ತುರ್ತಾಗಿ ಜಾರಿಗೆ ತರಬೇಕೆಂದು ತಾಲೂಕು ಕೆಜೆಪಿ ಮುಖಂಡ ಟಿ.ಎಸ್. ಲೋಕೇಶ್ವರ ಸರ್ಕಾರವನ್ನು
ಒತ್ತಾಯಿಸಿದ್ದಾರೆ.
ಕಳೆದ ವರ್ಷದ ಮುಂಗಾರಿನಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಗೆ ತಾಲೂಕಿನ ರೈತರು ಗೊಬ್ಬರ ಬೀಜಕ್ಕೆಂದು ಸಾವಿರಾರು ರೂ ಸಾಲ ಮಾಡಿ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಕಳೆದ ಜೂನ್, ಜುಲೈನಲ್ಲಿ ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ನಷ್ಟ
ಅನುಭವಿಸುವಂತಾಯಿತು. ನಂತರ ತಾಲೂಕಿನ ಜನ, ಜಾನುವಾರು ಪ್ರಮುಖ ಆಹಾರ ಬೆಳೆಯಾದ ರಾಗಿ ಪೈರನ್ನು ಜುಲೈ ಮತ್ತು ಆಗಸ್‌ನಲ್ಲಿ ಬಿತ್ತನೆ ಮಾಡಬೇಕಾಗಿತ್ತು. ಆದರೆ ಮಳೆ ಮತ್ತೆ ಕೈಕೊಟ್ಟಿದ್ದರಿಂದ ತಾಲೂಕಿನ ಹಲವು ಭಾಗಗಳಲ್ಲಿ ರಾಗಿ ಬಿತ್ತನೆ ಕಾರ್ಯವೇ ನಡೆದಿರಲಿಲ್ಲ. ಕೊನೆಗೆ ಆಗಸ್ ಮಧ್ಯ ಭಾಗದಲ್ಲಿ ಆಗೊಮ್ಮೆ ಈಗೊಮ್ಮೆ ಸುರಿದ ಸೋನೆ ಮಳೆಗೆ ಅಲ್ಪಸ್ವಲ್ಪ ರಾಗಿ ಬಿತ್ತನೆ ನಡೆಯಿತಾದರೂ, ಮತ್ತೆ ಮಳೆ ಬಾರದ್ದರಿಂದ ರಾಗಿ ಪೈರು ವಿಫಲವಾದ್ದರಿಂದ ರೈತರು ತಲೆ ಮೇಲೆ ಕೈಹೊರುವಂತಾಗಿದೆ. ಇದರಿಂದ ತಾಲೂಕಿನ ಪ್ರಮುಖ ವಾಣಿಜ್ಯ ಉಪಕಸುಬಾದ ಪಶುಪಾಲನೆಗೂ ತೀವ್ರ ಮೇವಿನ ಕೊರತೆ ಉಂಟಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
ತಾಲೂಕಿನ ವಾಣಿಜ್ಯ ಬೆಳೆಯಾದ ತೆಂಗಿಗೂ ಮಳೆ ಇಲ್ಲದ್ದರಿಂದ ತೆಂಗಿನ ಗರಿಗಳು ಜೋತು ಬೀಳುತ್ತಿವೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಬೋರ್‌ವೆಲ್‌ಗಳಿಗೆ ಅಂತರ್ಜಲದ ಕೊರತೆ ಎದುರಾಗಿರುವುದುರಿಂದ ತಾಲೂಕಿನ ರೈತರು ಮುಂದಿನ ಜೀವನ ಹೇಗೆಂದು ಭಯಬೀತರಾಗಿದ್ದಾರೆ. ಅಲ್ಲದೆ, ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿದ್ದು ದಿಕ್ಕು ತೋಚದಂತಾಗಿದೆ. ಈ ನಡುವೆಯೇ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರ ಸಂಘಗಳು ಮತ್ತು ಪಿಎಲ್‌ಡಿ ಬ್ಯಾಂಕ್ ನವರು ಸಾಲ ವಸೂಲಿಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ರೈತರು ಅನ್ಯಮಾರ್ಗವಿಲ್ಲದೆ ಆತ್ಮಹತ್ಯೆಯತ್ತ ಮುಖ ಮಾಡಿಯಾರು ಎಂಬ ಆತಂಕ ತಾಲ್ಲೂಕಿನಲ್ಲಿ ಸೃಷ್ಠಿಯಾಗಿದೆ.
ಈ ನಿಟ್ಟಿನಲ್ಲಿ, ಈ ಕೂಡಲೇ ಸರ್ಕಾರ ತಾಲೂಕಿನ ರೈತರ ಸಾಲಮನ್ನಾ ಘೋಷಿಸಿ, ಈ ಬಗ್ಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂಕಷ್ಠದಲ್ಲಿರುವ ತಾಲೂಕಿನ ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದು ಲೋಕೇಶ್ವರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

