ವಸತಿ ಯೋಜನೆ ಅವ್ಯವಹಾರ: ಪ್ರತಿಭಟನೆ
ಚಿಕ್ಕನಾಯಕನಹಳ್ಳಿ: ಮನೆಯೊಂದಕ್ಕೆ 75000 ಅನುದಾನದಂತೆ ತಾಲೂಕಿನಲ್ಲಿ ವಸತಿ ಯೋಜನೆಯಲ್ಲಿ ಕೋಟ್ಯಂತರ ರು.ಗಳ ಅವ್ಯವಹಾರ ನಡೆದಿದೆ ಎಂದು ಜಿಪಂ ಸದಸ್ಯ ಎಚ್.ಬಿ. ಪಂಚಾಕ್ಷರಿ ಆರೋಪಿಸಿದರು.
ಪಟ್ಟಣದ ತಾಪಂ ಕಾರ್ಯಾಲಯದ ಎದುರು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇದೊಂದು ಸಂವಿಧಾನ ವಿರೋಧಿ ಕೃತ್ಯ. ತಪ್ಪು ಯಾರೇ ಮಾಡಿರಲಿ ತಪ್ಪೇ. ಆದ್ದರಿಂದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು. ಹಾಲಿ ಕಾರ್ಯನಿರ್ವಹಣಾಧಿಕಾರಿಗಳು ಪ್ರಾಮಾಣಿಕ ಅಧಿಕಾರಿ. ಆದರೆ ಹಿಂದಿನ ಕಾರ್ಯನಿರ್ವಹಣಾಧಿಕಾರಿ ಎನ್.ಎಂ. ದಯಾನಂದ್ ಅವರಿಗೆ ಅವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಲು ಸಭೆಗೆ ಬರುವಂತೆ ನೋಟಿಸ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಹಾಲಿ ಇಓ ಅವರು ಸದರಿ ಅಧಿಕಾರಿ ಬಗ್ಗೆ ಮೃದುಧೋರಣೆ ತಾಳಿದಂತೆ ಭಾಸವಾಗುತ್ತಿದೆ. ಇದರಿಂದ ಬೇರೆಯವರು ಮಾಡಿದ ತಪ್ಪನ್ನು ನೀವು ನಿಮ್ಮ ತಲೆ ಮೇಲೆ ಹಾಕಿಕೊಳ್ಳ ಬೇಡಿ. ತಪ್ಪು ಮಾಡಿದವರು ಉಪ್ಪುತಿನ್ನುತ್ತಾರೆ ಎಂದರು.
ಇದೇ ಸಂದರ್ಭ ಮಾತನಾಡಿದ ತಾಪಂ ಸದಸ್ಯ ಶಶಿಧರ್, ವಸತಿ ಯೋಜನೆಯಲ್ಲಿ ಜಾಗೃತ ಸಮಿತಿ ಸಭೆ ಕರೆಯದೆ ಫಲಾನುಭವಿಗಳ ಪಟ್ಟಿಗೆ ಜಾಗೃತ ಸಮಿತಿ ಅಧ್ಯಕ್ಷರು ಸಹಿ ಮಾಡಿರುವುದನ್ನು ನೋಡಿದರೆ, ಇದರಲ್ಲಿ ಶಾಸಕರು ಸಹ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತದೆ. ಅವರ ಒಪ್ಪಿಗೆ ಮೇರೆಗೆ ಕಾರ್ಯನಿರ್ವಹಣಾಧಿಕಾರಿಗಳು ಪಟ್ಟಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅನುಮೋದನೆಗೆ ಕಳುಹಿಸಿದ್ದಾರೆ. ಇದರಲ್ಲಿ ಜಾಗೃತ ಸಮಿತಿ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ, ವಸತಿ ವಿಭಾಗದ ವಿಷಯ ನಿರ್ವಾಹಕ ಮೂವರು ತಪ್ಪಿತಸ್ಥರು ಎಂದು ಆರೋಪಿಸಿದರು.
ನಂತರ ಪ್ರತಿಭಟನಾಕಾರರ ಬಳಿ ಬಂದ ಕಾರ್ಯನಿರ್ವಹಣಾಧಿಕಾರಿ ಟಿ.ಜಿ. ತಿಮ್ಮಯ್ಯ ಅವರು, ಶಾಸಕರ ಜೊತೆ ದೂರವಾಣಿ ಮೂಲಕ ಸದರಿ ವಿಷಯದ ಬಗ್ಗೆ ಚರ್ಚಿಸಿದ್ದೇನೆ. ಶಾಸಕರು ಈಗ ಅಧಿವೇಶನದಲ್ಲಿ ಇರುವುದರಿಂದ 19ರಂದು ಸಭೆ ಕರೆದು ವಿವರವಾಗಿ ಚರ್ಚಿಸುವ ಬಗ್ಗೆ ಒಪ್ಪಿದ್ದಾರೆ. ಆದ್ದರಿಂದ ಅಲ್ಲಿಯವರೆಗೆ ಪ್ರತಿಭಟನೆಯನ್ನು ಕೈಬಿಡಬೇಕೆಂದು ಮಾಡಿಕೊಂಡ ಮನವಿ ಮೇರೆಗೆ ಪ್ರತಿಭಟನೆ ವಾಪಸ್ ಪಡೆದರು.
ತಾಪಂ ಸದಸ್ಯರಾದ ನಿರಂಜನಮೂರ್ತಿ, ವಸಂತಕುಮಾರ್, ಜಿ.ಎಂ. ನಾಗರಾಜು, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶಶಿಧರ್, ಟಿಎಪಿಸಿಎಂಎಸ್ ನಿರ್ದೇಶಕ ಷಡಕ್ಷರಿ, ಕೆಂಕೆರೆ ನವೀನ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

