ತುಮಕೂರು

ಶೆಲ್ಟರ್ ಇಲ್ಲ, ಫ್ಲಾಟ್‌ಫಾರಂ ಸರಿಯಿಲ್ಲ

Published On :

ಉಗಮ ಶ್ರೀನಿವಾಸ್
ತುಮಕೂರು: ಹೆಸರಿಗಷ್ಟೆ ಇದು ತುಮಕೂರು ರೇಲ್ವೆ ನಿಲ್ದಾಣ. ಆದರೆ ಯಾವೊಂದು ಮೂಲಭೂತ ಸೌಕರ್ಯವೂ ಈ ನಿಲ್ದಾಣದಲ್ಲಿ ಇಲ್ಲ. ದೊಡ್ಡಬೆಲೆ, ಹಿರೇಹಳ್ಳಿ, ಚಿಕ್ಕಬಾಣಾವರ ರೇಲ್ವೆ ನಿಲ್ದಾಣದಲ್ಲಿ ಇರುವ ಕನಿಷ್ಠ ಸೌಲಭ್ಯವನ್ನು ಈ ನಿಲ್ದಾಣದಲ್ಲಿ ಕಲ್ಪಿಸಿಲ್ಲ.
ರೇಲ್ವೆ ನಿಲ್ದಾಣದ ಪ್ರವೇಶದಲ್ಲಿ ಶೆಲ್ಟರ್ ಸೌಲಭ್ಯವಿದೆ. ಆದರೆ ಎರಡು ಹಾಗೂ ಮೂರನೇ ಫ್ಲಾಟ್‌ಫಾರಂನಲ್ಲಿ ಶೆಲ್ಟರ್ ಇಲ್ಲ. ಹೀಗಾಗಿ ಪ್ರಯಾಣಿಕರು ಬಿಸಿಲಿನಲ್ಲೇ ಬಸವಳಿದು ಹೋಗಬೇಕಾಗಿದೆ. ಗಾಳಿ, ಬಿಸಿಲು, ಮಳೆಯಿಂದ ರಕ್ಷಣೆಗೆ ಎರಡು ಹಾಗೂ ಮೂರನೇ ಪ್ಲಾಟ್‌ಫಾರಂನಲ್ಲಿ ಎಂಜಿನ್ ನಿಲ್ಲುವ ತನಕವೂ ಶೆಲ್ಟರ್‌ನ ಅಗತ್ಯವಿದೆ.
ಫ್ಲಾಟ್‌ಫಾರಂ ಚಿಕ್ಕದು: ಮುಖ್ಯವಾಗಿ ಎರಡನೇ ಫ್ಲಾಟ್‌ಫಾರಂನಲ್ಲಿ ಫ್ಲಾಟ್‌ಫಾರಂ ಅತ್ಯಂತ ಚಿಕ್ಕದು. ರೈಲಿನಿಂದ ಇಳಿಯುವುದು ಮತ್ತು ರೈಲನ್ನು ಹತ್ತುವುದು ಬಹು ಪ್ರಯಾಸದ ಕೆಲಸ. ಹಿರಿಯ ನಾಗರಿಕರು, ಮಹಿಳೆಯರು ಎಷ್ಟೋ ಸಲ ರೈಲು  ಹತ್ತುವಾಗ ಹಾಗೂ ರೈಲು ಇಳಿಯುವಾಗ ಬಿದ್ದದ್ದುಂಟು. ಮುಖ್ಯವಾಗಿ ಎರಡು ಹಾಗೂ ಮೂರನೇ ಫ್ಲಾಟ್‌ಫಾರಂ ಅನ್ನು ಎತ್ತರಿಸಬೇಕಾಗಿದೆ. ಇಲ್ಲದಿದ್ದರೆ ಅಪಘಾತ ಕಟ್ಟಿಟ್ಟ ಬುತ್ತಿ.
ಕುರ್ಚಿಯೇ ಇಲ್ಲ: ಪ್ರತಿ ದಿನ ಕನಿಷ್ಠ 58 ರೈಲುಗಳು ತುಮಕೂರು ನಿಲ್ದಾಣಕ್ಕೆ ಬಂದು ಹೋಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು, ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ಒಮ್ಮೊಮ್ಮೆಯಂತೂ ಜನಜಂಗುಳಿಯಿಂದ ರೇಲ್ವೆ ನಿಲ್ದಾಣ ತುಂಬಿ ಹೋಗಿರುತ್ತದೆ. ಆದರೆ ಎರಡು ಹಾಗೂ  ಮೂರನೇ ಫ್ಲಾಟ್‌ಫಾರಂನಲ್ಲಿ ಈಗ ಹಾಕಿರುವ ಕಲ್ಲು ಕುರ್ಚಿಗಳು ಯಾವುದಕ್ಕೂ ಸಾಲುತ್ತಿಲ್ಲ. ಹಾಗಾಗಿ ಕಲ್ಲು ಕುರ್ಚಿಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ.
ಮೆಟ್ಟಿಲು ಸೌಲಭ್ಯವಿಲ್ಲ: ರೈಲುಗಳು ಎರಡು ಹಾಗೂ ಮೂರನೇ ಪ್ಲಾಟ್‌ಫಾರಂಗೂ ಬರುತ್ತದೆ. 2 ರಿಂದ 3 ನೇ ಫ್ಲಾಟ್ ಫಾರಂ ಹತ್ತಲು ಕನಿಷ್ಠ 5 ರಿಂದ 6 ಕಡೆ ಮೆಟ್ಟಿಲು ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಎಷ್ಟು ಹಿರಿಯ ನಾಗರಿಕರು ರೇಲ್ವೆ ನಿಲ್ದಾಣದಲ್ಲಿ ಹತ್ತಿ ಇಳಿಯುವುದೇ ದೊಡ್ಡ ಸಮಸ್ಯೆ ಅಂತಾ ರೈಲಿನಲ್ಲಿ ಪ್ರಯಾಣಿಸುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಕಡೇ ಪಕ್ಷ ಪ್ಲಾಟ್  ಫಾರಂ ಹತ್ತಲು ಒಂದಷ್ಟು ಸಮತಟ್ಟಾದ ಕಲ್ಲುಗಳನ್ನಾದರೂ ಹಾಕಬಹುದಾಗಿದೆ.
ಗಬ್ಬು ನಾರುತ್ತಿದೆ ರೇಲ್ವೆ ನಿಲ್ದಾಣ: ರೇಲ್ವೆ ಹಳಿಗಳ ಮೇಲೆ ಬೀಳುವ ಮಲ ಮೂತ್ರಗಳನ್ನು ಸಂಬಂಧಪಟ್ಟವರು ಸ್ವಚ್ಛಮಾಡುವ ಗೋಜಿಗೆ ಹೋಗುವುದಿಲ್ಲ. ಬೆಂಗಳೂರಿನಲ್ಲಿ ಪ್ರತಿ ದಿನ ರೇಲ್ವೆ ನಿಲ್ದಾಣದಲ್ಲಿನ ಹಳಿಗಳನ್ನು ನೀರಿನಿಂದ ಸ್ವಚ್ಛ ಮಾಡುತ್ತಾರೆ.
ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡಬೇಕಾಗುತ್ತದೆ. ಕೆಲವರಂತೂ ಎರಡು ಹಾಗೂ ಮೂರನೇ ಪ್ಲಾಟ್ ಫಾರಂ ದಾಟುವಾಗ ರೇಲ್ವೆ ಹಳಿಗಳ ಮೂಲಕ ಹೋಗುತ್ತಾರೆ.
ಸಾಂಕ್ರಾಮಿಕ ರೋಗ: ಕೆಲವೊಮ್ಮೆ ಬಿದ್ದು ಬಟ್ಟೆಗಳನ್ನೆಲ್ಲಾ ಕೊಳಕು ಮಾಡಿಕೊಳ್ಳುವುದು ಉಂಟು. ಅಲ್ಲದೇ ವಿಪರೀತ ವಾಸನೆಯಿಂದ ಸಾಂಕ್ರಾಮಿಕ ರೋಗಕ್ಕೂ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ವಾರಕ್ಕೆ ಎರಡು ಮೂರು ದಿನವಾದರೂ ರೇಲ್ವೆ ಹಳಿಗಳನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಸಿಂಪಡಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.
ಕುಡಿಯುವ ನೀರಿನ ಸೌಲಭ್ಯ: ತುಮಕೂರು ರೇಲ್ವೆ ನಿಲ್ದಾಣದಲ್ಲಿ ಎಲ್ಲೋ ಒಂದೆರೆಡು ಕಡೆ ಕುಡಿಯುವ ನೀರಿನ ಸೌಕರ್ಯವಿದೆ. ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಜನ ಓಡಾಡುವ ನಿಲ್ದಾಣದಲ್ಲಿ ಕನಿಷ್ಠ 5 ಕಡೆಯಾದರೂ ಪ್ಯೂರಿಫೈಡ್ ನೀರಿನ ಸೌಲಭ್ಯ ಒದಗಿಸಬೇಕಾಗಿದೆ. ದೂರದೂರಿಗೆ ಪ್ರಯಾಣ ಬೆಳೆಸುವವರಿಗೆ ನೀರು ತುಂಬಿಸಿಕೊಳ್ಳಲು ಅನುಕೂಲಕರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.