ತುಮಕೂರು

ಗಾಡ್‌ಮಾಫಿಯಾ ಅಲ್ಲ, ಸರ್ವಿಸ್

Published On :

ತುಮಕೂರು:ನಾನು ಮಾಡುತ್ತಿರೋದು ಗಾಡ್‌ಮಾಫಿಯಾ ಅಲ್ಲ, ಸರ್ವಿಸ್ ಎಂದು ಹೇಳುವ ಮೂಲಕ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು  ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣನವರಿಗೆ ತಿರುಗೇಟು ನೀಡಿದ್ದಾರೆ.
ಅವರು ತುಮಕೂರಿನ ಶಿರಡಿ ಸಾಯಿಬಾಬಾ ದೇವಾಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ ನಂದಿ ಹಾಗೂ ಸಾಯಿಬಾಬಾ ಮಂಟಪದ ಸಿಂಹಾಸನಾ ಪ್ರತಿಷ್ಠಾಪನಾ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನನಗೆ ಗೊತ್ತಿರೋದು ಸೇವೆ ಮಾತ್ರ. ಆದರೆ ಗಾಡ್‌ಮಾಫಿಯಾ ಅನ್ನೋ ಇಂಗ್ಲಿಷ್ ಪದದ ಸ್ಪೆಲಿಂಗ್ ಗೊತ್ತಿಲ್ಲದ, ಪದ ಉಚ್ಚಾರಣೆ ಮಾಡಲು ಬಾರದ ವ್ಯಕ್ತಿ ನನ್ನನ್ನು ಪದೇ-ಪದೇ ಗಾಡ್‌ಮಾಫಿಯಾಕ್ಕೆ ಹೋಲಿಸುತ್ತಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣನವರ ಹೆಸರೆತ್ತದೆ ಲೇವಡಿ ಮಾಡಿದರು.
ಟ್ರಸ್ಟ್ ಸದಸ್ಯನೂ ಅಲ್ಲ: ಮೊದಲಿಗೆ ಶಿರಡಿ ಸಾಯಿಬಾಬಾ ದೇವಸ್ಥಾನ ಟ್ರಸ್ಟ್‌ಗೆ ಸೇರಿದ್ದು. ಟ್ರಸ್ಟ್‌ನಲ್ಲಿ ತಾವೊಬ್ಬ ಸದಸ್ಯನೂ ಅಲ್ಲ. ದೇವಾಲಯ ತಮ್ಮ ಹೆಸರಿನಲ್ಲಿ ಇಲ್ಲ. ಇದು ಯಾರಪ್ಪನ ಆಸ್ತಿ ಅಲ್ಲ. ಟೀಕೆ-ಟಿಪ್ಪಣಿ ಮಾಡೋ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು ವಸ್ತು ಸ್ಥಿತಿ ಅರಿಯಬೇಕಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಬೇಕಾ ಬಿಟ್ಟಿ ಮಾತನಾಡಿದ್ದಾರೆ ಎಂದು ಸಚಿವರ ಹೆಸರೆತ್ತದೆ ಮತ್ತೆ ವಾಗ್ದಾಳಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮನ್ನು ಪದೇ-ಪದೇ ಗಾಡ್‌ಮಾಫಿಯಾಕ್ಕೆ ಬ್ರಾಂಡ್ ಮಾಡುತ್ತಿರುವುದರಿಂದ ಈ ಮೇಲಿನ ಮಾತುಗಳನ್ನು ಹೇಳಲೇಬೇಕಿದೆ. ಸಮಯ-ಸಂದರ್ಭವೂ ಹಾಗಿದೆ. ಅವರೆತ್ತಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಹೀಗಾಗಿ ಈ ಮೇಲಿನ ಮಾತುಗಳನ್ನು ಹೇಳಿದ್ದೇನೆ ಅಷ್ಟೆ ಎಂದರು.
ಭಕ್ತರಿಗಾಗಿ, ಹೊಗಳಿಕೆಗಾಗಿ ಅಲ್ಲ: ಶಿರಡಿಗೇ ಹೋಗಿ ಸಾಯಿಬಾಬಾ ದರ್ಶನ ಪಡೆಯಲಾರದ ಭಕ್ತರಿಗಾಗಿ, ಶಿರಡಿಯ ಪ್ರತಿರೂಪದಂತೆಯೇ ಇರುವ ದೇವಸ್ಥಾನವನ್ನು ತುಮಕೂರಿನಲ್ಲಿ ನಿರ್ಮಿಸಲಾಗಿದೆ. ಭಕ್ತರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಕೇವಲ ರಾಜಕೀಯ ಹೊಗಳಿಕೆಗಾಗಿ ಸಾಯಿಬಾಬಾ ದೇವಾಲಯ ನಿರ್ಮಿಸಿದ್ದಲ್ಲ. ಆಂತರಿಕ ಪ್ರಾಮಾಣಿಕತೆ ಬಹಳ ಮುಖ್ಯ. ಧರ್ಮದ ಹಣ ಬ್ಯಾಂಕ್‌ಗೆ ಹೋಗಬೇಕು. 1986 ರಲ್ಲಿ ಈ ದೇವಾಲಯದ ಪರಿಕಲ್ಪನೆ ತಮಗೆ ಬಂದಿತ್ತು. ಹಣದ ಕೊರತೆ ಇಲ್ಲದಿದ್ದರೂ, ಬಯಕೇ ಈಡೇರಿದ್ದು ಮಾತ್ರ 2012 ರಲ್ಲಿ ಎಂದು  ಬಸವರಾಜು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಒಳಒತ್ತಡ, ಬಿಎಸ್‌ವೈ ಆಹ್ವಾನ, ಹಠ: ತಾವು 2009 ರ ಲೋಕಸಭಾ ಚುನಾವಣೆ ವೇಳೆ ಗೊಂದಲಕ್ಕೆ ಬಿದ್ದಿದ್ದು ನಿಜ. ಕಾಂಗ್ರೆಸ್‌ನಲ್ಲಿನ ಒಳ ಒತ್ತಡ, ಹಿತಶತ್ರುಗಳಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇತ್ತು. ಇದೇ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀನು ನಮ್ಮ ಬಿಜೆಪಿ ಪಕ್ಷಕ್ಕೆ ಬಂದರೆ ಎಂಪಿ ಯಾಗುತ್ತೀಯಾ ಎಂದು ಮುಕ್ತ ಆಹ್ವಾನ ನೀಡಿದರು. ಇದೇ ಸಂದರ್ಭದಲ್ಲಿ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರಲ್ಲಿ ಕೋರಿಕೊಂಡೆ. ಬಿಜೆಪಿ ಸೇರಲು ರಹದಾರಿ ಸಿಕ್ಕಿತು. ಅದರಂತೆ ಬಿಜೆಪಿ ಸೇರಿದೆ. ಕಾಂಗ್ರೆಸ್ ಒಳಒತ್ತಡಗಳು, ಹಿತಶತ್ರುಗಳ ಮೇಲಿನ ಹಠಕ್ಕೆ ಬಿದ್ದು ಬಿಜೆಪಿ ಸಂಸದನಾದೆ ಎಂದು ಬಸವರಾಜ್ ತಾವು ಬಿಜೆಪಿ ಸೇರಿ ಎಂಪಿಯಾದ ಕಥೆಯನ್ನು ಬಿಚ್ಚಿಟ್ಟರು.
ಸಾನಿಧ್ಯವನ್ನು ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳು ಹಾಗೂ ರಾಮಕೃಷ್ಣ ವಿವೇಕಾನಂದಾಶ್ರಮದ ಡಾ. ವೀರೇಶಾನಂದ ಸರಸ್ವತಿ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಆರ್.ಕೆ. ರಾಜು, ಜಿಪಂ ಸಿಇಓ ಗೋವಿಂದರಾಜು ಪಾಲ್ಗೊಂಡಿದ್ದರು.

ಇದ್ದುದ್ದನ್ನು ಇದ್ದ ಹಾಗೇ ಹೇಳೋದು ಬಸವರಾಜು ವಿಶೇಷ
ತುಮಕೂರು:
ಇದ್ದುದ್ದನ್ನು ಇದ್ದ ಹಾಗೇ ಹೇಳೋದು ಸಂಸದ ಜಿ.ಎಸ್. ಬಸವರಾಜ್ ವಿಶೇಷ. ಅವರ ನೇರ - ನುಡಿ ಶ್ಲಾಘನೀಯ, ಅಭಿನಂದನಾರ್ಹ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದಾಶ್ರಮದ ಡಾ. ವೀರೇಶಾನಂದ ಸರಸ್ವತಿ ಸ್ವಾಮಿಗಳು ಮುಕ್ತ ಕಂಠದಿಂದ ಪ್ರಶಂಶಿಸಿದರು.
ಅವರು ತುಮಕೂರಿನ ಕುಣಿಗಲ್ ರಸ್ತೆಯ ರಾಮಕೃಷ್ಣ ನಗರದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದ ಪ್ರಥಮ ವಾರ್ಷಿಕೋತ್ಸವ, ಹಾಗೂ ನಂದಿ ಮತ್ತು ಸಾಯಿಬಾಬಾ ಮಂಟಪದ ಸಿಂಹಾಸನಾ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ನೇರ-ನುಡಿಯ ಸಂಸದ ಬಸವರಾಜು ತರಹದ ವ್ಯಕ್ತಿಗಳು ಅಪರೂಪ. ವಿರಳ ಎಂದು ವೀರೇಶಾನಂದರು ಶ್ಲಾಘಿಸಿದರು.
ತರಬೇತಿ ನೀಡಿದರೂ ಕಷ್ಟ: ಸಂಸದ ಬಸವರಾಜು ರೀತಿ ಮಾತಾಡೋದು ಸುಲಭವಲ್ಲ. ತರಬೇತಿ ನೀಡಿದರೂ ಸಹ ನೇರವಾಗಿ, ಬಸವರಾಜು ರೀತಿ ಮಾತಾಡೋದು ಕಷ್ಟ. ಟ್ರೈನಿಂಗ್ ತಗೊಂಡರೂ ಮಾತಾಡೋಕೆ ಬರಲ್ಲ. ವಿನಾಕಾರಣ ಬಸವರಾಜು ಅವರನ್ನು ಹೊಗಳುತ್ತಿದ್ದೇನೆ ಎಂದು ಯಾರೂ ಭಾವಿಸಬಾರದು. ಬಸವರಾಜು ಸಾಯಿಬಾಬಾ ಮಂದಿರ ನಿರ್ಮಿಸಿ, ಮಹತ್ವದ, ಒಳ್ಳೆಯ ಕೆಲಸ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದವರ ಬಗ್ಗೆ ಮಾನವೀಯತೆ, ಕೃತಜ್ಞತೆ ತೋರುವುದೇ ಮನುಷ್ಯತ್ವ. ಹೀಗಾದಾಗಲೇ ಮಾನವೀಯ ಸಮಾಜ, ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಇದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವೀರೇಶಾನಂದರು ಕಿವಿಮಾತು ಹೇಳಿದರು.
ಡಿಸಿಗೂ ಪ್ರಶಂಸೆ: ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾಧಿಕಾರಿ ಆರ್.ಕೆ. ರಾಜು ಅವರನ್ನು ಕೂಡ ವೀರೇಶಾನಂದರು ಮುಕ್ತಕಂಠದಿಂದ ಪ್ರಶಂಶಿಸಿದರು. ರಾಜು ಸರಳ, ಸಜ್ಜನ. ನಿಸ್ಪೃಹ ವ್ಯಕ್ತಿ. ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡುವ, ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ವ್ಯಕ್ತಿ. ಅವರು ಹೆಸರಿಗೆ ತಕ್ಕ ಹಾಗೆ ರಾಜನಂತೆಯೇ ಇದ್ದಾರೆ ಎಂದರು.
ಶ್ರಮವರಿಯದೇ ಕೆಲಸ ಮಾಡಬೇಕು: ಮನುಷ್ಯ ಜನ್ಮ ದೊಡ್ಡದು. ಅಪರೂಪದ ಜನ್ಮ ಮನುಷ್ಯ ಜನ್ಮ. ಮನುಷ್ಯ ಶ್ರಮವರಿಯದೇ ಕೆಲಸ ಮಾಡಬೇಕು. ನಗು ನಗುತ್ತಲೇ ಕೆಲಸ ಮಾಡಿ, ನಗು-ನಗುತ್ತಲೇ ನಿರ್ಗಮಿಸಬೇಕು. ಮನುಷ್ಯನ ಬುದ್ಧಿ ಸಾಮರ್ಥ್ಯಕ್ಕೆ ತಕ್ಕಂತೆ ಪರಮಾತ್ಮ ಗೋಚರಿಸುತ್ತಾನೆ. ಮನುಷ್ಯನ ಹೆಚ್ಚು-ಹೆಚ್ಚು ಉನ್ನತಿಗೇರಿದಂತೆ ಪ್ರಕೃತಿಯನ್ನೇ ದೇವರೆಂದು ಪೂಜಿಸುತ್ತಾನೆ. ನೀರು, ಆಕಾಶ, ಭೂಮಿ, ಬೆಂಕಿ, ಗಾಳಿಯಂತಹ ಅನಿವಾರ್ಯ ಪದಾರ್ಥಗಳನ್ನು ಭಾರತೀಯರು ದೇವರೆಂದು ಪೂಜಿಸುತ್ತಿದ್ದಾರೆ. ಇದು ಮೂಡನಂಬಿಕೆಯಲ್ಲ ಎಂದು ವೀರೇಶಾನಂದರು ಪ್ರತಿಪಾದಿಸಿದರು.
ವಿಜ್ಞಾನ ನಮ್ಮ ಜೀವನವನ್ನು ದೀರ್ಘವಾಗಿಸಬಹುದು. ಆದರೆ ಆಧ್ಯಾತ್ಮ ಜೀವವನವನ್ನು ಆಳವಾಗಿಸುತ್ತದೆ. ಧರ್ಮ, ಆಧ್ಯಾತ್ಮಗಳು ಮನುಷ್ಯತ್ವ ಇಟ್ಟುಕೊಂಡು ಬದುಕುವಂತೆ ಮಾಡುತ್ತವೆ. ಕೇವಲ ಪದವಿಗಳಷ್ಟೇ ಮಾನವನನ್ನು ದೊಡ್ಡವನ್ನಾಗಿ ಮಾಡುವುದಿಲ್ಲ. ಮನುಷ್ಯತ್ವ, ಸೇವೆ, ಉದಾರ ಗುಣಗಳು ಮನುಷ್ಯನನ್ನು ಉನ್ನತಿಗೇರಿಸುತ್ತವೆ ಎಂದರು.
ಸಮಾರಂಭದಲ್ಲಿ ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಂಸದ ಜಿ.ಎಸ್. ಬಸವರಾಜು, ಸಂಸದರ ಪುತ್ರ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಆರ್.ಕೆ. ರಾಜು, ಜಿಪಂ ಸಿಇಓ ಗೋವಿಂದರಾಜು, ಟ್ರಸ್ಟ್ ಸದಸ್ಯರು ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.