ಸಚಿವರ ತೋರಿಕೆ ಭರವಸೆಗೆ ಬಗ್ಗಲ್ಲ
ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತುಮಕೂರು ನಗರ ಅಂಗವಿಕಲರ ಒಕ್ಕೂಟ, ಜಿಲ್ಲಾ ಅಂಗವಿಕಲರ ಸಂಯುಕ್ತಾಶ್ರಯದಲ್ಲಿ ಕಳೆದ 3 ದಿನಗಳಿಂದ ನಗರಸಭೆ ಮುಂಭಾಗ ಸತ್ಯಾಗ್ರಹ ನಡೆಸುತ್ತಿದ್ದು, ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಸಂಧಾನ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಆದರೆ, ಸಚಿವರ ಸಂಧಾನ ವಿಫಲವಾಯಿತು. ಕಳೆದ 10 ವರ್ಷಗಳಿಂದ ಇದೇ ರೀತಿಯ ಭರವಸೆ ನೀಡಲಾಗುತ್ತಿದೆ. ಸಚಿವರ ಭರವಸೆ ಕೇವಲ ತೋರಿಕೆಯದ್ದು. ಅಂಕಿ-ಅಂಶಗಳಲ್ಲಿ ಸ್ಪಷ್ಟತೆ ಇಲ್ಲ. ಸಚಿವರು ತಂದಿರುವ 40 ಮಂದಿ ಫಲಾನುಭವಿಗಳ ಪಟ್ಟಿ ಸರಿಯಾಗಿಲ್ಲ. ಹೀಗಾಗಿ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಅಂಗವಿಕಲರ ಒಕ್ಕೂಟದ ಅಧ್ಯಕ್ಷೆ ಮಂಜುಳ ಹಾಗೂ ಇತರೆ ಅಂಗವಿಕಲರು ಹಾಗೂ ಪೋಷಕರು ಪತ್ರಕರ್ತರಿಗೆ ತಿಳಿಸಿದರು.
ಸಚಿವರ ಸುದ್ದಿಗೋಷ್ಠಿ, ತಪ್ಪೊಪ್ಪಿಗೆ: ಅಂಗವಿಕಲರೊಂದಿಗೆ ಸಂಧಾನ ನಡೆಸುವ ಮುನ್ನ ತುರ್ತು ಸುದ್ದಿಗೋಷ್ಠಿ ನಡೆಸಿದ ಸಚಿವ ಸೊಗಡು, 2011-12ನೇ ಸಾಲಿನ ನಗರಸಭೆ ಬಜೆಟ್ನಲ್ಲಿ ವಿಕಲ ಚೇತನರ ಸಮಸ್ಯೆ ನಿವಾರಿಸುವಲ್ಲಿ ಅಂಗವಿಕಲರ ಭವನ ನಿರ್ಮಾಣಕ್ಕೆ ರು.15 ಲಕ್ಷ ಸ್ವಯಂ ಉದ್ಯೋಗಕ್ಕೆ ರು. 5 ಲಕ್ಷ ಸೇರಿದಂತೆ 2011-12 ನೇ ಸಾಲಿನ ನಗರಸಭೆ ಬಜೆಟ್ನಲ್ಲಿ ಒಟ್ಟು ರು. 25 ಲಕ್ಷಇಡಲಾಗಿದೆ. ಈ ಬಾರಿ ರು.9 ಕೋಟಿ ರೆವಿನ್ಯೂ ಕಲೆಕ್ಷನ್ ಆಗಿದೆ. ರು. 27 ಲಕ್ಷ ಅಂಗವಿಕಲರಿಗೆ ಕೊಡುವ ಉದ್ದೇಶವಿದೆ. ಆದರೆ ಅಂಗವಿಕಲರು ತಪ್ಪು ಕಲ್ಪನೆಯಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಹಾಲಿ ಇರುವ ಮಾಹಿತಿ ಪ್ರಕಾರ ಒಟ್ಟು ತುಮಕೂರು ನಗರದಲ್ಲಿ 5887 ಮಂದಿ ಅಂಗವಿಕಲರಿದ್ದಾರೆ. ಹೊಸದಾಗಿ ಸರ್ವೆ ಮಾಡಿಸಲು ಹೊರಟಿದ್ದೇವೆ ಎಂದರು.
ಅಂಗವಿಕಲರು ಸಮಸ್ಯೆ ನೀಗಿಸಿಕೊಳ್ಳಲು ಉಪವಾಸ ಸತ್ಯಾಗ್ರಹ ಮಾಡಬೇಕೆ ಎಂಬ ಪ್ರಶ್ನೆಗೆ, ಸರ್ವೆ ಕಾರ್ಯ ಮಾಡುವ ಖಾಸಗಿ ಏಜೆನ್ಸಿ, ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ನಾನೀಗ ಸರ್ಕಾರದ ಒಂದು ಭಾಗ. ಒಟ್ಟಾರೆ ತಪ್ಪಿಗೆ ನಾನೇ ಹೊಣೆ ಎಂದು ತಪ್ಪೊಪ್ಪಿಕೊಂಡರು.
ಸಂಧಾನ ವಿಫಲ: ನಂತರ ಸಂಧಾನ ನಡೆಸಲು ತೆರಳಿದ ಸಚಿವರು, ಈಗ ಇರುವ ಸವಲತ್ತು ಪಡೆದುಕೊಳ್ಳಿ. ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸುವೆ ಎಂಬ ಭರವಸೆ ನೀಡಿದರು. ಇದಕ್ಕೆ ಬಗ್ಗದ ಅಂಗವಿಕಲರು ಸಂಘದೊಂದಿಗೆ ಚರ್ಚಿಸಿ, ನಂತರ ಭರವಸೆ ನೀಡುವುದಾಗಿಯೂ, ಕೂಡಲೇ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಹಠ ಹಿಡಿದರು. ಸಚಿವರ ಸಂಧಾನ ವಿಫಲವಾದ ಪರಿಣಾಮ, ಹಿಂತಿರುಗಿದರು.
ಒಂದೇ ಸಾರಿ ಸಾಯೋದೊಳ್ಳೇದು: ಸಂಧಾನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತುಮಕೂರು ನಗರ ಅಂಗವಿಕಲರ ಒಕ್ಕೂಟದ ಅಧ್ಯಕ್ಷೆ ಮಂಜುಳ, ದಿನಾ ಸಾಯೋ ಬದ್ಲು, ಒಂದೇ ಸಾರಿ ಸಾಯೋದೊಳ್ಳೇದು. ಕಳೆದ 10 ವರ್ಷಗಳಿಂದ ಸಚಿವರು ಸೇರಿದಂತೆ ಸಂಬಂಧಪಟ್ಟವರ ಭರವಸೆಗಳನ್ನು ಕೇಳಿ-ಕೇಳಿ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ತುಮಕೂರು ನಗರದಲ್ಲೇ ಗರಿಷ್ಠ 9000 ಮಂದಿ ಅಂಗವಿಕಲರಿದ್ದಾರೆ. ಕನಿಷ್ಠ ಎಂದರೂ 7000 ಮಂದಿ ಇದ್ದಾರೆ. ಆದರೆ ಕಲ್ಪತರು ಗ್ರಾಮೀಣಾಭಿವೃದ್ಧಿ ಎಂಬ ಖಾಸಗಿ ಸಂಸ್ಥೆಯೊಂದು ಸರ್ವೆ ನಡೆಸಿ ಕೇವಲ 688 ಮಂದಿ ಅಂಗವಿಕಲರಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದೆ. ಮಿಕ್ಕವರ ಗತಿಯೇನು ಎಂದು ಪ್ರಶ್ನಿಸಿದರು.
ತೋರಿಕೆ ಭರವಸೆ ಬೇಡ: ಸಚಿವರ ತೋರಿಕೆ ಭರವಸೆಗೆ ಮಣಿಯುವ ಪ್ರಶ್ನೆಯೇ ಇಲ್ಲ. ಒಕ್ಕೂಟದೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇದರಲ್ಲಿ ಯಾವುದೇ ರಾಜಿಯಿಲ್ಲ. ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಮಂಜುಳ ತಿಳಿಸಿದರು.
ಸಚಿವರೊಂದಿಗೆ ನಗರಸಭೆ ಆಯುಕ್ತ ನಾರಾಯಣಪ್ಪ, ನಗರಸಭೆ ಅಧ್ಯಕ್ಷೆ ಗೀತಾ ರುದ್ರೇಶ್, ಉಪಾಧ್ಯಕ್ಷ ಅಸ್ಲಾಂಪಾಷಾ ಸೇರಿದಂತೆ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

