ಉಲ್ಟಾಪಲ್ಟಾ ಆಗುತ್ತಿರುವ ಮೌಲ್ಯ
ತೀರ್ಥಹಳ್ಳಿ: ದೇಶದಲ್ಲಿಂದು ಸಾಂಸ್ಕೃತಿಕ ಬಿಕ್ಕಟ್ಟುಗಳಿವೆ. ನಾವು ನಂಬಿ ಆಚರಿಸಿಕೊಂಡು ಬರುತ್ತಿದ್ದ ಸಮಾಜದ ಬೆಳವಣಿಗೆಯನ್ನು ಆರೋಗ್ಯಕರವಾಗಿ ಇಡುವ ಮೌಲ್ಯಗಳೆಲ್ಲಾ ಉಲ್ಟಾಪಲ್ಟಾ ಆಗುತ್ತಿವೆ. ಸಾಮಾಜಿಕ ನ್ಯಾಯ ಎಂದರೆ ಇಂದು ಗೇಲಿಯ ವಸ್ತುವಾಗಿದೆ ಎಂದು ಬರಹಗಾರ ಹಾಗೂ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ದಿನೇಶ್ ಅಮೀನ್ಮಟ್ಟು ಅಭಿಪ್ರಾಯಪಟ್ಟರು.
ಶನಿವಾರ ನಡೆದ ನಾಲ್ಕನೇ ತಾ. ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು ನಮ್ಮ ಪರಂಪರೆಯಲ್ಲಿ ಸರಳತೆಗೆ ಬಹಳ ಮಹತ್ವ ಇತ್ತು. ಆದರೆ ಇಂದು ಡಿಸೈನರ್ ಕುರ್ತಾ ನಮ್ಮ ಬ್ರಾಂಡ್ ವೇಶಭೂಷಣವಾಗುವಷ್ಟು ಬದಲಾವಣೆ ಕಾಣುತ್ತಿದ್ದೇವೆ. ಬುದ್ಧಿಜೀವಿಗಳ ಮೇಲೆ ದಾಳಿ ಮಾಡುವ, ಅವರನ್ನು ಗೇಲಿ ಮಾಡುವ ಪ್ರಯತ್ನ ಎದ್ದುಕಾಣುತ್ತಿದೆ. ಒಂದು ವೇಳೆ ಕುವೆಂಪು, ಲಂಕೇಶ್ ಈಗ ಇದ್ದಿದ್ದರೆ ಅವರ ಮೇಲೂ ಅನಂತಮೂರ್ತಿಯವರ ಮೇಲೆ ನಡೆದಂತ ದಾಳಿ ಆಗುತ್ತಿತ್ತೇನೋ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದೇವರಾಜ ಅರಸು ಕಾಲದಲ್ಲಿ ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಿ ಪ್ರಯತ್ನ ನಡೆಯಿತು. 80ರ ದಶಕದಲ್ಲಿ ನಮ್ಮ ಸಮಾಜ ನಿದ್ರಾವಸ್ಥೆಗೆ ಜಾರಿತು. ಅದು ಇಂದಿಗೂ ಮುಂದುವರೆಯುತ್ತಿದೆ ಎಂದ ಅವರು, ಇಂದು ಸಾಹಿತಿಗಳಿಗೂ ಸವಾಲು ಇದೆ. ಜನಜಾಗೃತಿ ಬೆಂಕಿ ಆರುವುದಕ್ಕೆ ಬಿಡಬಾರದು. ವರ್ತಮಾನದ ಸಾಹಿತ್ಯದ ಹಿಂದೆ ದೊಡ್ಡ ಪರಂಪರೆಯಿದೆ ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷ ಬಿಳುಮನೆ ರಾಮದಾಸ್ ಸಂಘಟಕರ ಶ್ರಮ ಸಾರ್ಥಕವಾಗಿದೆ ಎಂದು ಶ್ಲಾಘಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೆಂಪೆ ದೇವರಾಜ್ ಸಮ್ಮೇಳನದ ಯಶಸ್ಸಿಗೆ ತೀರ್ಥಹಳ್ಳಿಯ ಜನತೆ ಕಾರಣವಾಗಿದ್ದು, ಎಲ್ಲರ ಸಹಕಾರದಿಂದ ಈ ಸಮ್ಮೇಳನ ಸಂಘಟಿಸಲು ಸಾಧ್ಯವಾಯಿತು ಎಂದರು.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ತಾಲೂಕಿನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಚಿತ್ರ ಸಾಹಿತಿ ಕವಿರಾಜ್, ನಿರ್ದೇಶಕ ಕೋಡ್ಲು ರಾಮಕೃಷ್ಣ, ಹಿರಿಯ ರಂಗಕರ್ಮಿ ಸೀತಾರಾಮಾಚಾರ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಗಂಗಪ್ಪಗೌಡ, ಯಕ್ಷಗಾನ ಕಲಾವಿದ ಬಿ.ಗಣಪತಿ, ಕವಿ ಎನ್.ವಿ.ಶೇಷಾಚಲ, ಕವಲೇದುರ್ಗ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.
ದೇವಂಗಿ ಮನುದೇವ್, ಹೆಗ್ಗೋಡು ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ಕಸಾಪ ಕಾರ್ಯದರ್ಶಿ ಟಿ.ಕೆ.ರಮೇಶ ಶೆಟ್ಟಿ ಹಾಗೂ ಸಮ್ಮೇಳನದ ಯಶಸ್ಸಿಗೆ ಕಾರಣರಾದ ವಿವಿಧ ಸಮಿತಿಗಳವರಿಗೆ ಧನ್ಯವಾದ ಅರ್ಪಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

