ಶಿವಮೊಗ್ಗ

ಕೋಟಿ ವಂಚಕ ರಂಗಸ್ವಾಮಿ ಸೆರೆ

Published On :

ಸೊರಬ: ಸ್ನೇಹಜೀವಿ ಮಾರ್ಕೆಂಗ್ ಹೆಸರಿನಲ್ಲಿ ಗ್ರಾಹಕರಿಂದ ಕೋಟ್ಯಂತರ ರುಪಾಯಿ ಹಣ ಸಂಗ್ರಹಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ.
ತಾಳಗುಪ್ಪೆ ಗ್ರಾಮದ ರಂಗಸ್ವಾಮಿ ಆಲಿಯಾಸ್ ರಂಗನಾಥಸ್ವಾಮಿ ಗ್ರಾಹಕರಿಗೆ ವಂಚಿಸಿದ ವ್ಯಕ್ತಿ. ಸೊರಬ ಪಟ್ಟಣ ಚಾಮರಾಜಪೇಟೆ ಬಾಡಿಗೆ ಮನೆಯಲ್ಲಿ 6-7 ವರ್ಷಗಳಿಂದ ಅಪ್ಪಾಜಿ ಸೇವಾ ಟ್ರಸ್ಟ್ ಸ್ಥಾಪಿಸಿಕೊಂಡು ಸ್ನೇಹಜೀವಿ ಮಾರ್ಕೆಟಿಂಗ್ ಹೆಸರಿನ ಬಹುಮಾನ ಯೋಜನೆ ನಡೆಸುತ್ತಿದ್ದ. ಯೋಜನೆಯಲ್ಲಿ ಸೊರಬ, ಸಾಗರ, ಸಿದ್ದಾಪುರ, ಶಿಕಾರಿಪುರ, ಹಾನಗಲ್, ಹಿರೇಕೆರೂರು ತಾಲೂಕುಗಳಲ್ಲಿ ಏಜೆಂಟರನ್ನು ನೇಮಿಸಿ ಇವರ ಮೂಲಕ ಸಾವಿರಾರು ಸದಸ್ಯರನ್ನು ಹೊಂದಿದ್ದ.
ಅಪ್ಪಾಜಿ ಸೇವಾ ಟ್ರಸ್ ವತಿಯಿಂದ ಮೊರಾರ್ಜಿ ದೇಸಾಯಿ, ನವೋದಯ ಸೇರಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ,  ವಿವಿಧ ಕ್ರೀಡಾಕೂಟ ಮುಂತಾದ ಜನಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ತನ್ನತ್ತ ಸೆಳೆಯುತ್ತಿದ್ದ ರಂಗಸ್ವಾಮಿ.
ಏನಿದು ಸ್ನೇಹಜೀವಿ ಮಾರ್ಕೆಟಿಂಗ್: ಸ್ನೇಹಜೀವಿ ಬಹುಮಾನ ಯೋಜನೆಯಲ್ಲಿ ನೋಂದಾಯಿತ ಸದಸ್ಯರು ಪ್ರತಿ ತಿಂಗಳು
ರು. 600 ರಂತೆ 10 ತಿಂಗಳು ಹಣ ಕಟ್ಟುತ್ತ ಹೋಗಬೇಕು.  ಪ್ರತಿ ತಿಂಗಳು ಒಬ್ಬರಿಗೆ ಲಾಟರಿ ಎತ್ತುವ ಮೂಲಕ ಪೂರ್ತಿ ಹತ್ತು ತಿಂಗಳ ಕಂತು ಜಮಾಆಗುತ್ತದೆ. ಹತ್ತು ತಿಂಗಳ ಪೂರ್ತಿಗೆ ಯಾರಿಗೆ ಲಾಟರಿ ಬರುವುದಿಲ್ಲವೋ ಅವರಿಗೆ ಕಂತಿನ ಹಣ ಮತ್ತು ಪ್ರೋತ್ಸಾಹ ಬಹುಮಾನ ನೀಡುವುದಾಗಿ ನಂಬಿಸಿ, ಏಜೆಂಟರ ಮೂಲಕ
ಸದಸ್ಯರಿಂದ ಸುಮಾರು ರು. 3 ಕೋಟಿಕೂ ಅಧಿಕ ಹಣ ಸಂಗ್ರಹಿಸಿದ್ದ. ಇದರ ಜೊತೆಗೆ ಮೈಕ್ರೋ ಫೈನಾನ್ಸ್ ಮಾ ದರಿಯಲ್ಲಿ ಮಹಿಳೆಯರ ಉಳಿತಾಯ ಗುಂಪು ರಚಿಸಿಕೊಂಡು ಉಳಿತಾಯ ಖಾತೆಯಲ್ಲಿ ಹಣ ಸಂಗ್ರಹಿಸುತ್ತಿದ್ದ. ಜನವರಿಯಿಂದ ಕಚೇರಿಗೆ ಬೀಗ ಜಡಿದು ಪರಾರಿಯಾಗಿದ್ದ ಎಂದು ಎಸ್.ಕೆ. ರವಿ ಶಿರಾಳಕೊಪ್ಪ ಇವರು ಸೊರಬ ಪೊಲೀಸರಿಗೆ ದೂರು ನೀಡಿದ್ದರು.
ಭಟ್ಕಳದಲ್ಲಿ ಪತ್ತೆ: ರಂಗಸ್ವಾಮಿ ಭಾವಚಿತ್ರವನ್ನು ಸ್ನೇಹಜೀವಿ ಮಾರ್ಕೆಟಿಂಗ್ ಏಜೆಂಟರು ಅಕ್ಕಪಕ್ಕದ ತಾಲೂಕಿನ  ಗೆಳೆಯರಿಗೆ ನೀಡಿ ಸುಳಿವು ನೀಡಿ ಎಂದು ತಿಳಿಸಿದ್ದರು. ಮಂಗಳವಾರ ಭಟ್ಕಳದಲ್ಲಿ ಆಸ್ತಿ ಖರೀದಿ ವೇಳೆ ಸಿಕ್ಕಿ ಬಿದ್ದ ಆರೋಪಿಯನ್ನು ಸಾರ್ವಜನಿಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ವಂಚಿನಗೊಳಗಾದ ಎಸ್.ಕೆ. ರವಿ ದೂರಿನನ್ವಯ ಸೊರಬ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ. ಬುಧವಾರ ಸಂಜೆ ಡಿವೈಎಸ್ಪಿ ಶೃತಿ ಆಗಮಿಸಿದ್ದರು.
ಆರೋಪಿ ಬಂಧಿಸಿರುವ ವಿಷಯ ತಿಳಿಯುತ್ತಿದ್ದಂತೆ ವಿವಿಧ ತಾಲೂಕುಗಳಿಂದ ವಂಚನೆಗೊಳಗಾದ ನೂರಾರು ಮಂದಿ ಪೊಲೀಸ್ ಠಾಣೆ ಆವರಣದಲ್ಲಿ ಜಮಾಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.