ಕೈಗೆ ಬಯಸದೇ ಬಂದ ಭಾಗ್ಯ
ಶಿವಮೊಗ್ಗ: ಯಾವುದೇ ಪ್ರಯತ್ನ ಮಾಡದಿದ್ದರೂ ಕಾಂಗ್ರೆಸ್ಗೆ ಅನಾಯಾಸವಾಗಿ ಜಿಪಂ ಅಧಿಕಾರ ದಕ್ಕಿದೆ. ಬಹುಮತ ಇಲ್ಲದಿದ್ದರೂ ಜಿಲ್ಲಾ ಪಂಚಾಯ್ತಿಯ ಮೂರನೇ ಅವಧಿಯ ಅಧ್ಯಕ್ಷ ಸ್ಥಾನ ಪಡೆದಿದೆ.
ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಜತೆ ಕೈಜೋಡಿಸಿ ಬಹುಮತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿಗೆ ವಿಧಾನಪರಿಷತ್ ವಿಪಕ್ಷ ನಾಯಕರ ಊರಿನಲ್ಲಿಯೇ ಬಹುಮತ ಉಳಿಸಿಕೊಂಡಿಲ್ಲ.
ನಾಟಕೀಯ ಬೆಳವಣಿಗೆ ಕಂಡ ಜಿಪಂ ಚುನಾವಣೆಯಲ್ಲಿ ಈವರೆಗೂ ಜಿಲ್ಲಾ ಪಂಚಾಯ್ತಿಯಲ್ಲಿ ವಿಪಕ್ಷ ನಾಯಕರೆಂದೇ ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ನ ಕಲಗೋಡು ರತ್ನಾಕರ್ ಅಧ್ಯಕ್ಷರಾಗಿ ಆಯ್ಕೆಯಾದರು. ಮೂರು ಬಾರಿ ಮೂರು ಕ್ಷೇತ್ರದಿಂದ ಜಿಪಂಗೆ ಆಯ್ಕೆಯಾಗಿರುವ ಇವರು ಹಿಂದೊಮ್ಮೆ ಉಪಾಧ್ಯಕ್ಷರೂ ಆಗಿದ್ದರು.
ಕೂದಲೆಳೆಯ ಅಂತರ: ಒಟ್ಟು 31 ಸದಸ್ಯರಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ 16 ಸದಸ್ಯರ ಬಹುಮತ ಹೊಂದಿದ್ದು, ಎರಡು ಅವಧಿ ಆಡಳಿತ ನಡೆಸಿತ್ತು. ಕಾಂಗ್ರೆಸ್ನ 13, ಜೆಡಿಎಸ್ನ ಇಬ್ಬರು ಸದಸ್ಯರಿದ್ದಾರೆ. ಬಹುಮತಕ್ಕೆ ಒಂದೇ ಮತದ ಕೂದಲೆಳೆಯ ಅಂತರವಿತ್ತು.
ಶುಕ್ರವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಬಿಜೆಪಿಯ ಅತೃಪ್ತ ಸದಸ್ಯೆ ಗಾಯತ್ರಿ ಷಣ್ಮುಖಪ್ಪ ಅವರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಬಿಜೆಪಿಗೇ ಆಪರೇಷನ್ ಮಾಡಿ ಅಧಿಕಾರವನ್ನು ತನ್ನದಾಗಿಸಿ ಕೊಂಡಿತು. ಬೆಂಬಲ ನೀಡಿದ ಫಲವಾಗಿ ಗಾಯತ್ರಿ ಷಣ್ಮುಖಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಕಾಂಗ್ರೆಸ್ ಹಾಗೂ ಜೆಡಿಎಸ್ ಸಹಕರಿಸಿದರು.
ತಡವಾಗಿ ಬಂದರು: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಕಲಗೋಡು ರತ್ನಾಕರ್, ಬಿಜೆಪಿಯ ಎಚ್. ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದರು. ಈ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಬಿಜೆಪಿಯ ಮೂವರು ಸದಸ್ಯರಾದ ಹುಣವಳ್ಳಿ ಗಂಗಾಧರಪ್ಪ, ದಾನೇರ ರುದ್ರಪ್ಪ, ಹಾಗೂ ಯಲ್ಲಪ್ಪ ಮತದಾನದಲ್ಲಿ ಭಾಗವಹಿಸಲು ಆಗಲೇ ಇಲ್ಲ. ಹಾಲಿ ಸಭೆಯಲ್ಲಿದ್ದ 28 ಸದಸ್ಯರಲ್ಲಿ ಕಲಗೋಡು ರತ್ನಾಕರ್ 16 ಹಾಗೂ ಈಶ್ವರಪ್ಪ 12 ಸದಸ್ಯರ ಬೆಂಬಲ ಪಡೆದರು. ಸುಲಭವಾಗಿ ಕಲಗೋಡು ಆಯ್ಕೆಯಾದರು. ಈ ಸಂದರ್ಭದಲ್ಲಿಯೇ ಬಿಜೆಪಿಯ ಗಾಯತ್ರಿ ಷಣ್ಮುಖಪ್ಪ ಅವರು ಕಲಗೋಡು ಪರ ಮತ ಚಲಾಯಿಸಿ ತಮ್ಮ ಬೆಂಬಲ ಯಾರಿಗೆಂದು ಸ್ಪಷ್ಟಪಡಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಗಾಯತ್ರಿ ಷಣ್ಮುಖಪ್ಪ ಹಾಗೂ ಅಶೋಕ್ ನಾಯ್ಕ್ ಕಣದಲ್ಲಿದ್ದರು. ತಡವಾಗಿ ಬಂದ ಬಿಜೆಪಿಯ ಮೂವರು ಸದಸ್ಯರು ಮತ ಚಲಾಯಿಸಿದರೂ ಫಲ ನೀಡಲಿಲ್ಲ. ಬಂಡಾಯ ಅಭ್ಯರ್ಥಿ ಗಾಯತ್ರಿ ಷಣ್ಮುಖಪ್ಪ ಅವರು ಕಾಂಗ್ರೆಸ್-ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ 16 ಮತ ಪಡೆದರು. ಅಶೋಕ್ ನಾಯ್ಕ್ 15 ಮತಕ್ಕೆ ತೃಪ್ತಿ ಪಡಬೇಕಾಯಿತು. ಬಂಡಾಯದ ಫಲ ಗಾಯತ್ರಿ ಷಣ್ಮುಖಪ್ಪ ಅವರಿಗೆ ಸಿಕ್ಕಿತು. ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪ್ರಾದೇಶಿಕ ಆಯುಕ್ತ ಗೌರವಗುಪ್ತ ಅವರು ಚುನಾವಣಾಧಿಕಾರಿಯಾಗಿದ್ದರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ಸಸಿಕಾಂತ್ ಸೆಂಥಿಲ್ ಹಾಜರಿದ್ದರು.
ಹೈಡ್ರಾಮ...
ಶಿಕಾರಿಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನಲೆಯಲ್ಲಿ ಶಿಕಾರಿಪುರದವರೇ ಜಿಪಂ ಅಧ್ಯಕ್ಷರಾಗ ಬೇಕೆಂಬುದು ಯಡಿಯೂರಪ್ಪ ಅವರ ಆಶಯವಾಗಿತ್ತು. ಇದನ್ನು ನಿರ್ಧರಿಸಲು ಶುಕ್ರವಾರ ಬೆಳಿಗ್ಗೆ ಜಿಪಂ ಸದಸ್ಯರೊಂದಿಗೆ ಬಿಜೆಪಿ ಪ್ರಮುಖರ ಸಭೆ ನಡೆದಿತ್ತು. ಸಭೆಯಲ್ಲಿ ಮುಖಂಡರು ಈಶ್ವರಪ್ಪ ಅವರನ್ನು ಕಣಕ್ಕಿಳಿಸುವ ತೀರ್ಮಾನ ತಿಳಿಸಿದರು. ಹಿಂದಿನ ಎರಡು ಅವಧಿಯಲ್ಲಿಯೂ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿದ್ದ ಗಾಯತ್ರಿ ಷಣ್ಮುಖಪ್ಪ ಅವರು ತಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಲು ಒತ್ತಾಯಿಸಿದ್ದಾರೆ. ಆದರೆ ಮುಖಂಡರು ಒಪ್ಪಿಲ್ಲ. ಇದರಿಂದ ಮುನಿಸಿಕೊಂಡ ಅವರು ಸೀದಾ ಕಾಂಗ್ರೆಸ್ ಪಾಳೆಯ ಸಂಪರ್ಕಿಸಿದ್ದಾರೆ. ಅವರು ಸಭೆ ನಡೆಸುತ್ತಿದ್ದ ಪ್ರವಾಸಿ ಮಂದಿರಕ್ಕೆ ಹೋಗಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಅವರೊಂದಿಗೇ ಜಿಪಂ ಸಭೆಗೆ ಆಗಮಿಸಿದ್ದಾರೆ.
ಗಾಯತ್ರಿ ಷಣ್ಮುಖಪ್ಪ ಬಂಡಾವೆದ್ದಿರುವುದು ತಿಳಿಯುತ್ತಿದ್ದಂತೆ ಬಿಜೆಪಿ ನಾಯಕರು ವರಿಷ್ಠರ ಮೂಲಕ ಜೆಡಿಎಸ್ ವರಿಷ್ಠರನ್ನು ಸಂಪರ್ಕಿಸಿ ಅವರನ್ನು ಸೆಳೆಯುವ ಪ್ರಯತ್ನ ಮಾಡಿದ್ದು ಫಲ ನೀಡಲಿಲ್ಲ.
ಗಾಯತ್ರಿ ಉಚ್ಚಾಟನೆಗೆ ಬಿಜೆಪಿ ಶಿಫಾರಸು
ಹೊಳಲೂರು ಜಿಪಂ ಸದಸ್ಯೆ ಗಾಯಿತ್ರಿ ಷಣ್ಮುಖಪ್ಪ ಅವರಿಗೆ ವಿಪ್ ಜಾರಿಗೊಳಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಸೂಚಿಸಿದ್ದರೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಕ್ಕೆ ಅವರನ್ನು ಪಕ್ಷದಿಂದ ತಕ್ಷಣವೇ ಉಚ್ಚಾಟಿಸಲು ರಾಜ್ಯ ಬಿಜೆಪಿ ಘಟಕಕ್ಕೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ತಿಳಿಸಿದ್ದಾರೆ. ವಿಪ್ ಜಾರಿಗೊಳಿಸಿದರೂ ಉಲ್ಲಂಘಿಸಿದ ಕಾರಣಕ್ಕಾಗಿ ಪಕ್ಷಾಂತರ ವಿರೋಧಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬಿಜೆಪಿಯೇ ಮೋಸ ಮಾಡಿತು
ಬಿಜೆಪಿಗೆ ನಾನೆಂದೂ ಮೋಸ ಮಾಡಿಲ್ಲ. ಆದರೆ ಪಕ್ಷವೇ ತಮಗೆ ಮೋಸ ಮಾಡಿತು ಎಂದು ಜಿಪಂ ಉಪಾಧ್ಯಕ್ಷೆ ಗಾಯತ್ರಿ ಷಣ್ಮುಖಪ್ಪ ಹೇಳಿದ್ದಾರೆ. ಚುನಾವಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೆ. ಆದರೆ ಗೀತಾ ಮಲ್ಲಿಕಾರ್ಜುನ್ ಅವರನ್ನು ಆಯ್ಕೆ ಮಾಡಿ, ಮುಂದಿನ 10 ತಿಂಗಳ ಅವಧಿಗೆ ತಮಗೆ ಹುದ್ದೆ ನೀಡುವ ಭರವಸೆ ನೀಡಲಾಗಿತ್ತು. ಆದರೆ ಸ್ಥಾನ ನೀಡದೆ ಮೋಸ ಮಾಡಿದರು ಎಂದು ಅಲವತ್ತುಕೊಂಡರು.
ಮೂರನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಇದ್ದು, ಈ ಬಾರಿಯೂ ಸಹ ಅವಕಾಶ ಕೊಡದೇ ಮಾತು ತಪ್ಪಿದರು. ಗುರುವಾರ ಸಂಜೆಯ ವರೆಗೆ ಗಡವು ಕೊಟ್ಟಿದ್ದೆವು. ಪಕ್ಷದ ಮುಖಂಡರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಇದರಿಂದ ನನಗೆ ನೋವಾಗಿದೆ. ಒಪ್ಪದ ಕಾರಣ ಕಾಂಗ್ರೆಸ್ ಬೆಂಬಲಿಸಿ ಉಪಾಧ್ಯಕ್ಷ ಸ್ಥಾನ ಪಡೆದಿದ್ದೇನೆ ಎಂದರು.
ಕುಡಿವ ನೀರಿಗೆ ಆದ್ಯತೆ: ಕಲಗೋಡು
ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೊಂದಿಗೆ ಸೇರಿ ಸಹಕರಿಸುತ್ತೇನೆ. ಕುಡಿಯುವ ನೀರು ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇನೆ ಎಂದು ನೂತನ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗ್ರಾಪಂ, ತಾಪಂ ಸದಸ್ಯನೂ ಆಗಿದ್ದೆ. ಮೂರು ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಜಿಲ್ಲೆಯ ಸಮಸ್ಯೆಗಳ ಅರಿವು ಇದೆ. ವಿಪಕ್ಷ ನಾಯಕನಾಗಿ ಜಿಲ್ಲಾದ್ಯಂತ ಪ್ರವಾಸ ಮಾಡಿದ್ದೇನೆ. ಜನರ ನಿರೀಕ್ಷೆಗಳಿಗೆ ಆದ್ಯತೆ ನೀಡುತ್ತೇನೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು. ಅಧಿಕಾರಿಗಳು ಹಾಗೂ ಸದಸ್ಯರ ಸಹಕಾರದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸುತ್ತೇನೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

