ಮಲೆನಾಡಲ್ಲಿ ಮಳೆಯಬ್ಬರ
ಶಿವಮೊಗ್ಗ: ಇದೀಗ ಮಲೆನಾಡು ಹೆಸರಿಗೆ ತಕ್ಕಂತೆ ಕಳೆಗಟ್ಟಿದೆ. ಕಳೆದ ಮೂರು ದಿನಗಳಿಂದ ಚೇತರಿಸಿ ಕೊಂಡಂತೆ ಕಂಡುಬಂದ ಮಳೆ ಭಾನುವಾರದ ಮಟ್ಟಿಗೆ ಸಂಪೂರ್ಣವಾಗಿ ಆವರಿಸಿಕೊಂಡಿತು.
ಜಿಲ್ಲೆಯ ಬಹುತೇಕ ಎಲ್ಲಾ ಕಡೆಯೂ ಶನಿವಾರ ಹಾಗೂ ಭಾನುವಾರ ಬೆಳಗಿನಿಂದ ಎಡಬಿಡದೆ ಸೇರಿದಿದೆ. ತೀರ್ಥಹಳ್ಳಿ ತಾಲೂಕಿನ ಅನೇಕ ಕಡೆ ಚಿತ್ರಣವೇ ಬದಲಾಗಿದೆ. ಜೂನ್ನಲ್ಲಿದ್ದ ವಾತಾವರಣಕ್ಕೂ ಈಗಿನ ವಾತಾವರಣಕ್ಕೂ ಸಂಪೂರ್ಣ ಬದಲಾಗಿದೆ. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮಳೆ ಮೇಳೈಸಿದ್ದು, ಮಲೆನಾಡು ಭಾಗದ ಊರುಗಳು ತೊಯ್ದು ತೊಪ್ಪೆಯಾಗಿವೆ.
ಮಳೆಯ ಪ್ರಮಾಣ ಹೇಗಿದೆ ಎಂದರೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಶನಿವಾರ ಮಧ್ಯಾಹ್ನದ ನಂತರ ಹಾಗೂ ಭಾನುವಾರ ಇಡೀ ದಿನ ಸೂರ್ಯನ ದರ್ಶನವೇ ಇಲ್ಲ. ಮಳೆಯಲ್ಲಿ ಅಬ್ಬರ ಎನಿಸದೇ ಇದ್ದರೂ ಗಾಳಿ ಸಹಿತ ಮಳೆ ನಿರಂತರತೆ ಕಾಯ್ದುಕೊಂಡಿದೆ. ಶಿವಮೊಗ್ಗ ನಗರದಲ್ಲಿ ಮಳೆಯಿಂದಾಗಿ ವೆಂಕಟೇಶ ನಗರದ 3ನೇ ತಿರುವಿನ ಗೋವಿಂದಸ್ವಾಮಿ ಎಂಬುವರ ಮನೆ ಕುಸಿದಿದೆ.
ಜಲಾಶಯ ಮಟ್ಟ: ಜಿಲ್ಲೆಯ ಬಹುತೇಕ ಜಲಾಶಯಗಳ ನೀರಿನ ಮಟ್ಟ ಕಳೆದ ಎರಡು ದಿನಗಳಿಂದ ಗಣನೀಯವಾಗಿ ಏರಿಕೆಯಾಗುತ್ತಿದೆ. ತುಂಗಾ ನದಿ ಮಂಡಗದ್ದೆ ಭಾಗದಲ್ಲಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ಜಲಾಶಯದ ಗೇಟ್ ತೆಗೆದು ನೀರನ್ನು ಹೊರ ಬಿಡಲಾಗುತ್ತಿದೆ.
ವಿದ್ಯುತ್ ಉತ್ಪಾದನೆಗೆ ಅಡಚಣೆಯಾಗುವ ಭೀತಿ ಎದುರಿಸುತ್ತಿದ್ದ ಲಿಂಗನಮಕ್ಕಿ ಜಲಾಶಕ್ಕೆ ನೀರಿನ ಒಳಹರಿವು ಪ್ರಮಾಣ ಹೆಚ್ಚಳವಾಗಿದೆ. ಸದ್ಯ 1750 ಅಡಿಯಷ್ಟು ನೀರಿದೆ. ಭದ್ರಾ ಜಲಾಶಯ ತುಂಬಲು ಇನ್ನು 45 ಅಡಿಗಳಷ್ಟು ನೀರಿನ ಅಗತ್ಯವಿದ್ದು, ಕಳಸ ಭಾಗದಲ್ಲಿ ಮಳೆಯ ಹೆಚ್ಚಾಗುತ್ತಿದ್ದಂತೆಯೇ ಇನ್ನೊಂದು ವಾರದೊಳಗೆ ಭದ್ರಾ ಜಲಾಶಯ ಒಂದು ಪ್ರಮಾಣದಲ್ಲಿ ತುಂಬುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗರಿಗೆದರಿದ ಕೃಷಿ: ಮೇ ತಿಂಗಳಲ್ಲಿ ಬಿದ್ದ 3-4 ಮಳೆಯಿಂದ ಕೃಷಿಕರು ಭೂಮಿಯನ್ನು ಹಸನ ಮಾಡಿಕೊಂಡು ಕೃಷಿಗೆ ತಯಾರಿ ನಡೆಸಿದ್ದರು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಬತ್ತ, ಜೋಳದ ನಾಟಿ ಕೂಡಾ ನಡೆದಿತ್ತು. ಆದರೆ, ಜೂನ್ ತಿಂಗಳಲ್ಲಿ ನಿರೀಕ್ಷೆಯಷ್ಟು ಮಳೆಬಾರದ ಕಾರಣ ಕೃಷಿಕರು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಶಿಕಾರಿಪುರ, ಸೊರಬ ಭಾಗದಲ್ಲಿ ಮರು ಬಿತ್ತನೆ ಮಾಡುವ ಅನಿವಾರ್ಯತೆ ಎದುರಾಗಿತ್ತು. ಆದರೀಗ ನಿರಂತರ ಮಳೆಯಿಂದಾಗಿ ಕೃಷಿಕರಲ್ಲಿ ಆವರಿಸಿದ್ದ ಆತಂಕ ಕರಗಿದೆ. ಮತ್ತೆ ಕೃಷಿ ಚಟುವಟಿಕೆ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.
ತೀರ್ಥಹಳ್ಳಿ
ಆಗುಂಬೆಯಲ್ಲಿ ಶುಕ್ರವಾರದಿಂದೀಚೆಗೆ ಹಳೆಯ ವೈಭವ ಮರುಕಳಿಸಿದೆ. ಸೂರ್ಯ ಇಣುಕಿ ಹಾಕುವುದಕ್ಕೂ ಅವಕಾಶ ಕೊಡದಂತೆ ಮಳೆ ಸುರಿಯುತ್ತಿದೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ದಾಖಲಾದ ಅಂಕಿಅಂಶದಂತೆ 25 ಸೆಂಟಿಮೀಟರ್ ಮಳೆಯಾಗಿದೆ. ಭಾನುವಾರ ಸಹ ದಿನವಿಡೀ ಮಳೆಯಾಗಿದ್ದು, ಇದೇ ಪ್ರಮಾಣದಲ್ಲಿ ಮಳೆ ಮುಂದುವರಿಯುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ.
ಇನ್ನು ತುಂಗಾ ನದಿ ತುಂಬಿ ಹರಿಯುತ್ತಿದ್ದು ಮಂಡಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಒಂದೂವರೆ ಅಡಿಯಷ್ಟು ನೀರು ಹರಿಯುತ್ತಿದೆ. ಸಂಜೆ 6.30ರ ಸುಮಾರಿಗೆ ಸಂಚಾರ ಅಸ್ತವ್ಯಸ್ತವಾಯಿತು. ರಸ್ತೆ ಮೇಲೆ ನೀರಿದ್ದರೂ ಸಂಚರಿಸಿದ ವಾಹನ ಮಧ್ಯದಲ್ಲಿಯೇ ಕೆಟ್ಟು ನಿಂತಿದ್ದರಿಂದ ಉಳಿದ ವಾಹನ ಸವಾರರು ಅದೇ ರಸ್ತೆಯಲ್ಲಿ ಮುಂದುವರಿಯಲು ಧೈರ್ಯತೋರಲಿಲ್ಲ.
ಅದೇ ರೀತಿ ಆಗುಂಬೆಯ 9ನೇ ತಿರುವಿನಲ್ಲಿ ಮಣ್ಣು ಕುಸಿದಿದ್ದು ಸಂಚಾರಕ್ಕೆ ಅಡಚಣೆಯಾಯಿತು. ತಕ್ಷಣವೇ ಜೆಸಿಬಿ ಮೂಲಕ ಮಣ್ಣು ತೆಗೆದು ಹಾಕಲಾಗಿದ್ದು, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಸಾಗರ
ತಾಲೂಕಿನಾದ್ಯಂತ ಭಾನುವಾರ ಇಡೀ ದಿನ ಸುರಿದ ಮಳೆಯಿಂದ ರೈತರು ಹಾಗೂ ಜನರಲ್ಲಿ ಸಂತಸ ಉಂಟಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ಚುರುಕುಗೊಂಡ ಮಳೆ ಭಾನುವಾರ ಬೆಳಗಿನಿಂದ ಬಿರುಸುಗೊಂಡು ಇಡೀ ದಿನ ಸತತ ಸುರಿಯಿತು.
ಜೂನ್ ಕಳೆದು ಜುಲೈ ತಿಂಗಳಲ್ಲಿ ಹತ್ತು ದಿನ ಕಳೆದರೂ ನಿರೀಕ್ಷಿತ ಮಳೆಯಾಗದೆ ಎಲ್ಲರಿಗೂ ಆತಂಕ ಉಂಟಾಗಿತ್ತು. ಎಲ್ಲರೂ ಮಳೆಗಾಗಿ ಹಪಹಪಿಸುತ್ತಿದ್ದರು. ರೈತರ ಸ್ನೇಹಿ ಆರಿದ್ರಾಮಳೆ ಈ ವರ್ಷ ಕೈಕೊಟ್ಟಿದ್ದರಿಂದ ಬಹಳ ನಷ್ಟ ಉಂಟಾಗಿತ್ತು. ಬಿತ್ತನೆಗಾಗಿ ಭೂಮಿ ಹದಮಾಡಿದ್ದ ರೈತರು ಮಳೆಯ ನಿರೀಕ್ಷೆಯಲ್ಲಿಯೇ ಆರಿದ್ರಾ ಮಳೆ ಹಬ್ಬ ಮಾಡಿದರೇ ಹೊರತು ಮಳೆ ಬಂದಿರಲಿಲ್ಲ.
ಈಗ ಪುನರ್ವಸು ಮಳೆ ಕೊಂಚ ನೆಮ್ಮದಿ ತಂದಿದೆ. ಎಡಬಿಡದೆ ಸುರಿದ ಮಳೆಯಿಂದ ಬಹುತೇಕ ಕೆರೆಕಟ್ಟೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶ ತುಮರಿ ಹೋಬಳಿಯಲ್ಲಿಯೂ ವ್ಯಾಪಕ ಮಳೆಯಾಗಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ಅಲ್ಪ ಪ್ರಮಾಣದ ನೀರು ಹರಿದುಬಂದಿದೆ.
ಪ್ರತಿ ವರ್ಷ ಈ ಹೊತ್ತಿಗಾಗಲೇ ಮೈದುಂಬಿಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಜೋಗ ಜಲಪಾತ ಮತ್ತೆ ಜೀವಂತಿಕೆ ಪಡೆದಿದೆ. ವ್ಯಾಪಕ ಮಳೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆನಂದಪುರಂ ಹೋಬಳಿಯ ಕೆಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು, ಕಂಬ ಮುರಿದು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ತೊಡಕುಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

