ಸಂಗೀತ, ಚಿತ್ರಕಲೆ, ಕ್ರಾಫ್ಟ್ ಕಟ್
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಮೂರು ದಶಕದಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಹುದ್ದೆ ಸೃಜಿಸಲು ಅವಕಾಶ ನೀಡದ ಸರ್ಕಾರ ಈಗ ಇನ್ನೊಂದು ಪೆಟ್ಟು ನೀಡಿದೆ. ಕಳೆದ ಜೂನ್ ತಿಂಗಳಲ್ಲಿ ಕರ್ನಾಟಕ ಶೈಕ್ಷಣಿಕ ಸಂಸ್ಥೆ ನೇಮಕಾತಿ ಸಂಬಂಧಿಸಿದ ಕಾಯ್ದೆಗೆ ಮತ್ತೊಂದು ತಿದ್ದುಪಡಿ ತಂದಿದ್ದು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿದ್ದ ಕ್ರಾಫ್ಟ್, ಚಿತ್ರಕಲೆ ಹಾಗೂ ಸಂಗೀತ ಶಿಕ್ಷಕರ ಹುದ್ದೆಗೆ ಕತ್ತರಿ ಹಾಕಿದೆ.
ಅಂದರೆ, ಹಾಲಿ ಇರುವ ಕ್ರಾಫ್ಟ್, ಚಿತ್ರಕಲೆ ಮತ್ತು ಸಂಗೀತ ಶಿಕ್ಷಕರು ತಮ್ಮ ಸೇವಾವಧಿ ವರೆಗೆ ಮುಂದುವರಿಯುತ್ತಾರೆ. ಇವರ ನಿವೃತ್ತಿ, ರಾಜೀನಾಮೆ ಅಥವಾ ಮತ್ಯಾವುದೇ ಕಾರಣದಿಂದ ಹುದ್ದೆ ತೆರವಾದರೆ ಹೊಸ ಶಿಕ್ಷಕರ ನೇಮಕ ಮಾಡಿಕೊಳ್ಳಲು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಅವಕಾಶವಿಲ್ಲ.
ಈ ಕುರಿತಂತೆ ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮ- 1999ಕ್ಕೆ ರಾಜ್ಯ ಸರ್ಕಾರವು ಇದೇ ಜೂನ್ ಮೊದಲ ವಾರದಲ್ಲಿ ತಿದ್ದುಪಡಿ ಪ್ರಸ್ತಾವನೆ ತಂದಿದ್ದು, ಅಧಿಸೂಚನೆ ಸಹ ಹೊರಡಿಸಿದೆ. ಈ ಕಾಯ್ದೆ ತಿದ್ದುಪಡಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ವಿಚಿತ್ರವೆಂದರೆ ಈ ಬಗೆಗಿನ ಮಾಹಿತಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿಯೂ ಇಲ್ಲ. ಇನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ತಲುಪುವುದಂತೂ ಸಾಧ್ಯವೇ ಇಲ್ಲದ ಮಾತು.
ಮೂಲ ಶಿಕ್ಷಣ ಎಂದರೆ ಬರೀ ಓದುವುದು-ಬರೆಯುವುದಷ್ಟೇ ಅಲ್ಲ. ಅವರ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ಲೋಕದ ಅಭಿವೃದ್ಧಿ ಎಂಬ ಅರ್ಥವಂತಿಕೆ ದೂರ ಸರಿಯುತ್ತಿದೆ. ಮಕ್ಕಳ ಸಮಷ್ಠಿ ಪ್ರಜ್ಞೆ ಬೆಳೆಯಲು ಅನುಕೂಲವಾಗಿದ್ದ ಹುದ್ದೆಗಳ ಮೇಲೆ ಈಗ ಸರ್ಕಾರದ ಕೆಂಗಣ್ಣು ಬಿದ್ದಿದೆ.
ಪರಿಣಾಮವೇನು?: ಕ್ರಾಫ್ಟ್, ಚಿತ್ರಕಲೆ ಹಾಗೂ ಸಂಗೀತ ಶಿಕ್ಷಕರು ಸರ್ಕಾರಿ ಶಾಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಅನುದಾನಿತ ಶಾಲೆಗಳಲ್ಲಿದ್ದಾರೆ. ಮಕ್ಕಳ ಸುಪ್ತ ಪ್ರತಿಭೆಯನ್ನು ಜಾಗೃತಗೊಳಿಸಿ, ಅವರಿಗೆ ವೇದಿಕೆ ಸಜ್ಜುಗೊಳಿಸುವ ಕೆಲಸವನ್ನು ಈ ಶಿಕ್ಷಕರು ಮಾಡುತ್ತಿದ್ದಾರೆ. ಅಲ್ಲದೇ, ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳನ್ನು ಸಮರ್ಥವಾಗಿ ತಯಾರು ಮಾಡುವ ಕೆಲಸವನ್ನೂ ಸಹ ಈ ಶಿಕ್ಷಕರು ಮಾಡುತ್ತಿದ್ದರು.
ಈಗ ಸಾಂಸ್ಕೃತಿಕ ಶಿಕ್ಷಕರ ಹುದ್ದೆಗಳನ್ನು ಕಡಿತ ಮಾಡುವ ಸರ್ಕಾರದ ಈ ಕ್ರಮದ ನೇರ ಪರಿಣಾಮ ಮಕ್ಕಳ ಮೇಲೆ ಆಗುತ್ತಿದೆ. ಅವರೀಗ ಅವಕಾಶ ವಂಚಿತರಾಗುತ್ತಿದ್ದಾರೆ. ಓದಿ ಓದಿ ಮರುಳಾಗುವುದಷ್ಟೇ ಅವರಿಗುಳಿದಿರುವ ಸಾಧ್ಯತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

