ಮಳೆ, ಮಳೆ, ಮಳೆ...
ಶಿವಮೊಗ್ಗ: ಶುಕ್ರವಾರ ಸಂಜೆ ವೇಳೆಗೆ ಮಳೆಯ ಅಬ್ಬರ ಕಡಿಮೆಯಾಯಿತಾದರೂ, ಕಳೆದ ಎರಡು ದಿನ ಸುರಿದ ಜಡಿ ಮಳೆಗೆ ಜಿಲ್ಲೆಯ ವಿವಿಧ ಕಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಎಡಬಿಡದೆ ಒಂದೇಸಮನೆ ಸುರಿದ ವರ್ಷಧಾರೆಯಿಂದ ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದರೆ ಹಳ್ಳಕೊಳ್ಳ, ಕೆರೆಕಟ್ಟೆಗಳು ಉಕ್ಕಿ ಹರಿದಿವೆ. ಇದರಿಂದ ಹಲವೆಡೆ ಪ್ರವಾಹ ಉಂಟಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿ ಅತಿವೃಷ್ಟಿ ಭೀತಿ ಎದುರಾಗಿದೆ.
ಮಳೆಯ ಆರ್ಭಟದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಶಾಲಾ- ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಆದೇಶ ಹೊರಡಿಸಿದ್ದರು. ಜೊತೆಗೆ ಪ್ರವಾಹ ಪೀಡಿತ ಸ್ಥಳಗಳು ಸೇರಿದಂತೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತುಂಗಾ ಪ್ರವಾಹ: ಧಾರಾಕಾರವಾಗಿ ಸುರಿದ ಮಳೆಯಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಶಿವಮೊಗ್ಗದಲ್ಲಿ ಪ್ರವಾಹ ಮಟ್ಟದಲ್ಲಿ ಹರಿಯುತ್ತಿದೆ. ಶಿವಮೊಗ್ಗ ನಗರದ ವಿವಿಧ ತಗ್ಗುಪ್ರದೇಶಗಳು ಬುಧವಾರ ಸಂಜೆಯಿಂದಲೇ ಜಲಾವೃತವಾಗಿದ್ದು ಶುಕ್ರವಾರ ಸಂಜೆ ವರೆಗೆ ಸಹಜ ಸ್ಥಿತಿಗೆ ಬಂದಿರಲಿಲ್ಲ.
ಮಂಡಗದ್ದೆ ಗ್ರಾಮದಲ್ಲಿಯೇ ಹಾದು ಹೋಗಿರುವ ಶಿವಮೊಗ್ಗ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 13ರ ಮೇಲೆ ತುಂಗಾ ನದಿಯ ನೀರು ಹರಿಯುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿತ್ತು. ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡ್ಯಾಂಗೆ ನೀರು: ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿರುವ ಪರಿಣಾಮ ಜಿಲ್ಲೆಯ ಜಲಾಶಯಗಳ ನೀರಿನಮಟ್ಟದಲ್ಲಿ ಗಂಭೀರ ಏರಿಕೆ ಕಂಡುಬಂದಿದೆ. ಹೊಸನಗರ ತಾಲೂಕಿನ ಹುಲಿಕಲ್ಲು ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಅಂದರೆ 346 ಮಿ.ಮೀ. ಮಳೆಯಾಗಿದೆ. ಯಡೂರಿನಲ್ಲಿ 298 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 310 ಮಿ.ಮೀ., ಮಾಣಿ ಡ್ಯಾಂ ವ್ಯಾಪ್ತಿಯಲ್ಲಿ 312 ಮಿ.ಮೀ. ಮಳೆ ಸುರಿದಿದೆ.
ಶಿವಮೊಗ್ಗದಲ್ಲಿ 52.40 ಮಿ.ಮೀ., ಭದ್ರಾವತಿಯಲ್ಲಿ 63.60 ಮಿ.ಮೀ., ತೀರ್ಥಹಳ್ಳಿಯಲ್ಲಿ 185.20 ಮಿ.ಮೀ., ಸಾಗರದಲ್ಲಿ 142.80 ಮಿ.ಮೀ., ಶಿಕಾರಿಪುರದಲ್ಲಿ 41.40 ಮಿ.ಮೀ., ಸೊರಬದಲ್ಲಿ 72.20 ಮಿ.ಮೀ. ಹಾಗೂ ಹೊಸನಗರದಲ್ಲಿ 160.40 ಮಿ.ಮೀ. ಮಳೆಯಾಗಿದೆ.
ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಒಂದೇ ದಿನದಲ್ಲಿ ಮೂರು ಅಡಿಯಷ್ಟು ನೀರು ಹೆಚ್ಚಾಗಿದೆ. ಸದ್ಯ 1797.35 ಅಡಿ ನೀರು ಇದ್ದು, ಇನ್ನೆರಡು ದಿನದಲ್ಲಿ ಗಣನೀಯ ಏರಿಕೆ ಸಾಧ್ಯತೆ ಇದೆ.
ಭದ್ರಾ ಡ್ಯಾಂನ ಜಲಾನಯನ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಚುರುಕುಗೊಂಡಿದ್ದು, ಜಲಾಶಯದಲ್ಲಿ 177.30 ಅಡಿ ನೀರಿದ್ದು, ಜಲಾಶಯ ಭರ್ತಿಯಾಗಲು 9 ಅಡಿ ಬಾಕಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

