ನೋಡ್ತಾ ಇರಿ ಯಾರ್ಯಾರು ಬರ್ತಾರೆ...!
ಶಿವಮೊಗ್ಗ: ಸದ್ಯದಲ್ಲೇ ಯಾರೆಲ್ಲಾ ನಮ್ಮ ಪಕ್ಷ ಸೇರ್ತಾರೆ ಎಂದು ನೋಡ್ತಾ ಇರಿ ಎಂದು ಕೆಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಕುಮಾರ್ ಬಿಎಸ್ವೈ ಪಾಳಯದ ಮುಂದಿನ ಆಪರೇಷನ್ ಕಾರ್ಯಾಚರಣೆಯ ಸುಳಿವು ನೀಡಿದ್ದಾರೆ.
ಬಿಎಸ್ವೈ ಜೊತೆಗೆ 70 ಶಾಸಕರು ಇದ್ದಾರೆಂದು ಹೇಳಲಾಗುತ್ತಿತ್ತು, ಈಗ ಕನಿಷ್ಠ ಸಂಖ್ಯೆಯಲ್ಲಿ ಶಾಸಕರು ಬಂದಿದ್ದಾರೆ, ರೇಣುಕಾಚಾರ್ಯ, ನಿರಾಣಿ ಯಾರೂ ಕೆಜೆಪಿಗೆ ಬಂದಿಲ್ಲ, ಏನಿದರ ಮರ್ಮ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮಗೇಕೆ ಆತುರ, ಕೆಲವೇ ದಿನಗಳಲ್ಲಿ ಯಾರೆಲ್ಲಾ ನಮ್ಮ ಜೊತೆ ಸೇರ್ತಾರೆ ನೋಡ್ತಾ ಇರಿ ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಅಭೂತಪೂರ್ವ ಪ್ರತಿಕ್ರಿಯೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಯಾವುದೇ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ತಾವು ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳುತ್ತಿದ್ದು ಎಲ್ಲೆಡೆಯೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಲ್ಲಿಯವರೆಗೂ 10 ಲಕ್ಷ ಸದಸ್ಯರ ನೊಂದಾವಣೆಯಾಗಿದ್ದು 25 ಲಕ್ಷ ಸದಸ್ಯರ ಗುರಿ ಇದೆ ಮಾಹಿತಿ ನೀಡಿದರು.
ಶಾಸಕರ ರಾಜಿನಾಮೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದು, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ರಾಜಿನಾಮೆ: ಈಗಾಗಲೇ ಬಿಜೆಪಿಯ 12 ಶಾಸಕರು ರಾಜಿನಾಮೆ ನೀಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ನ 71, ಜೆಡಿಎಸ್ 26, ಪಕ್ಷೇತರ ಏಳು ಸದಸ್ಯರಿದ್ದಾರೆ. ಬಿಎಸ್ಆರ್ ಪಕ್ಷದೊಂದಿಗೆ ಬಿಜೆಪಿಯ ಮೂವರು ಸದಸ್ಯರು ಗುರುತಿಸಿಕೊಂಡಿದ್ದಾರೆ. ಇದರಿಂದ ಸರ್ಕಾರದ ಸಂಖ್ಯಾಬಲ 103ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ರಾಜಿನಾಮೆ ನೀಡುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಶಾಸಕರಿಂದ ಬಲವಂತವಾಗಿ ರಾಜಿನಾಮೆ ಕೊಡಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ರಾಜಿನಾಮೆ ನೀಡಿದ ಯಾವೊಬ್ಬ ಶಾಸಕರು ಯಡಿಯೂರಪ್ಪ ತಮ್ಮಿಂದ ಬಲವಂತವಾಗಿ ರಾಜಿನಾಮೆ ಕೊಡಿಸಿದ್ದಾರೆ ಎಂದು ಹೇಳಿಲ್ಲ. ಈ ಕುರಿತಂತೆ ಪ್ರತಿಕ್ರಿಯೆ ನೀಡುವ ಅಗತ್ಯವೂ ಇಲ್ಲ ಎಂದು ತಿಳಿಸಿದರು.
ಅತಂತ್ರ ಸ್ಥಿತಿ: ಒಂದೆಡೆ ಬಹುಮತ ಕಳೆದುಕೊಂಡು ಅತಂತ್ರ ಸ್ಥಿತಿಗೆ ತಲುಪಿರುವ ಬಿಜೆಪಿ ಸರ್ಕಾರ ಮತ್ತೊಂದೆಡೆ ಬಜೆಟ್ ಮಂಡಿಸಲು ಸಿದ್ದತೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಆ ಪಕ್ಷ ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆ ಹೇಳಲು ಹೊರಟಿದೆ ಎಂದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕೆಜೆಪಿ ಆಂತರಿಕ ವ್ಯವಹಾರದಲ್ಲಿ ಕೈ ಹಾಕಲು ಯತ್ನಿಸುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ಎಲ್ಲಾ ವ್ಯವಹಾರ, ಅಕ್ರಮಗಳನ್ನು ಬಯಲು ಮಾಡಬೇಕಾಗುತ್ತದೆ ಎಂದು ಧನಂಜಯ ಕುಮಾರ್ ಎಚ್ಚರಿಕೆ ನೀಡಿದರು.
ಎಚ್.ಡಿ. ಕುಮಾರಸ್ವಾಮಿ ಮೊದಲಿನಿಂದಲೂ ಅನ್ಯ ಪಕ್ಷಗಳ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ. ಕೆಜೆಪಿ ವಿಷಯದಲ್ಲಿಯೂ ಇದೇ ಕೆಲಸ ಮಾಡುತ್ತಿದ್ದಾರೆ. ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ತಕ್ಕ ತಿರುಗೇಟು ನೀಡಬೇಕಾಗುತ್ತದೆ. ಅವರ ಅಕ್ರಮ ಅವ್ಯವಹಾರಗಳನ್ನು ಬಯಲಿಗೆ ತರಬೇಕಾಗುತ್ತದೆ ಎಂದು ತಿಳಿಸಿದರು.
ಕೆಜೆಪಿ ಸಂಸ್ಥಾಪಕ ಪ್ರಸನ್ನಕುಮಾರ್ಗೆ ತಾವು ಹಾಗೂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಜೀವ ಬೆದರಿಕೆ ಹಾಕಿದ್ದೇವೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರಸ್ತುತ ಪ್ರಸನ್ನಕುಮಾರ್ ಎಚ್.ಡಿ. ಕುಮಾರಸ್ವಾಮಿಯವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಯಡಿಯೂರಪ್ಪ ವಿರುದ್ಧ ಪ್ರಸನ್ನ ಕುಮಾರ್ ಚುನಾವಣಾ ಆಯೋಗಕ್ಕೆ ಬರೆದ ಪತ್ರಗಳ ಪ್ರತಿಗಳು ಪತ್ರಕರ್ತರಿಗೆ ಎಚ್.ಡಿ. ಕುಮಾರಸ್ವಾಮಿಯವರ ಬೆಂಗಳೂರಿನ ಅತಿಥಿ ಗೃಹದಿಂದಲೇ ಬಿಡುಗಡೆಯಾಗಿದೆ. ಇದನ್ನು ಸ್ವತ- ಪತ್ರರ್ಕರೇ ತಮಗೆ ತಿಳಿಸಿದ್ದಾರೆ ಎಂದು ಹೇಳಿದರು.
ಯಾರು ಕೋಮುವಾದಿ ಸ್ವಾಮಿ?
ಹೀಗೆಂದು ಪ್ರಶ್ನೆ ಎತ್ತುವ ಮೂಲಕ ಬಿಜೆಯನ್ನು ತಿವಿದವರು ಧನಂಜಯಕುಮಾರ್.
ಲಿಂಗಾಯತ ಸಮುದಾಯಕ್ಕೆ ಸೇರಿದ ಜಗದೀಶ್ ಶೆಟ್ಟರ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಮುಖಂಡ ಅನಂತ ಕುಮಾರ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯ ಬಣ್ಣ ಬಯಲಾಗಿದೆ ಎಂದ ಅವರು, ಯಾರು ಕೋಮುವಾದಿಗಳು ಎಂಬುದಕ್ಕೆ ಸರ್ಟಿಫಿಕೆಟ್ ಸಿಕ್ಕಂತಾಗಿದೆ ಎಂದು ತಿಳಿಸಿದರು. ನಮ್ಮನ್ನು ಬಿಜೆಪಿಯೊಂದಿಗೆ ಹೋಲಿಕೆ ಮಾಡುವುದು ಬೇಡ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಆರ್ಎಸ್ಎಸ್ ಕಾರ್ಯಕರ್ತನಾಗಿದ್ದೆ, ಎಂದೂ ಆರ್ಎಸ್ಎಸ್ ಅಲ್ಪಸಂಖ್ಯಾತರ ವಿರುದ್ಧವಾಗಿ ಪಾಠ ಮಾಡಿಲ್ಲ. ಈಗ ಪಾಠ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

