ಶಿವಮೊಗ್ಗ

ಆಧಾರಕ್ಕೆ ಏಕೆ ಸರತಿ ಸಾಲು?

Published On :

ಶಿವಮೊಗ್ಗ: ಭಾರತದ ಪ್ರಜೆಗಳನ್ನು ಒಂದೇ ರೂಪದಲ್ಲಿ ಗುರುತಿಸುವ ಸಲುವಾಗಿ ಕೇಂದ್ರ ಸರ್ಕಾರ ಕೊಡಮಾಡುತ್ತಿರುವ 16 ಅಂಕಿಯುಳ್ಳ ಆಧಾರ್ ವಿಶಿಷ್ಟ ಸಂಖ್ಯೆ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಲು ಜನ ಎದ್ನೋಬಿದ್ನೋ ಎಂದು ವಿತರಣ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.
ನೀವು ಅಷ್ಟು ತರಾತುರಿ ಮಾಡುವ ಅಗತ್ಯವಿಲ್ಲ. ಅಂಚೆ ಕಚೇರಿ ಮತ್ತು ನಗರಸಭೆಗಳು ಪ್ರತ್ಯೇಕ ಕೇಂದ್ರಗಳಲ್ಲಿ ಈ ನೋಂದಣಿ ಪ್ರಕ್ರಿಯೆ ನಡೆಸುತ್ತಿವೆ. ಈ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಿಲ್ಲ. ಇದು ನಿರಂತರ. ಮತದಾರರ ಗುರುತಿನ ಪತ್ರದ ಹಾಗೆ ಕಟ್ಟಕಡೆಯ ವ್ಯಕ್ತಿಗೂ ಈ ವಿಶಿಷ್ಟ ಸಂಖ್ಯೆ ನೀಡುವುದು ಸರ್ಕಾರದ ಕರ್ತವ್ಯ.
ಇಂದು ಅರ್ಜಿ ಸಲ್ಲಿಸಿದರೆ ನಾಳೆಯೇ ಎಲ್ಲಾ ಸೌಕರ್ಯಗಳು ಸಿಗುತ್ತವೆ ಎಂದೇನೂ ಇಲ್ಲ. ಸುಮ್ಮನೆ ಕೇಂದ್ರಗಳ ಮುಂದೆ ದಿನವಿಡಿ ಕಾದು ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ನಿಮಗೆ ಪುರುಸೊತ್ತಿದ್ದಾಗ ಹೋಗಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಿರಿ.
 ಅಷ್ಟಕ್ಕೂ ಇವತ್ತಲ್ಲದಿದ್ದರೆ ನಾಳೆ ಪಡೆಯಬಹುದು. ಒಂದು ದಿನ, ತಿಂಗಳಿಗೆ ಸಿಮೀತವಾಗಿರುವ ಯೋಜನೆಯಲ್ಲ. ರಾಷ್ಟ್ರದ ಕಟ್ಟಕಡೇಯ ಪ್ರಜೆಗೂ ನೀಡಬೇಕು ಎನ್ನುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಆದ್ದರಿಂದ ಇಂದೇ ಪಡೆಯುವ  ಧಾವಂತ ಅವಶ್ಯವಿಲ್ಲ. ಆದರೂ ಆಧಾರ್ ಕಾರ್ಡ್ ಪಡೆಯುವುದು ಒಳ್ಳೆಯದೇ. ಅದು ಕಡ್ಡಾಯವೂ ಆಗಲಿದೆ.
ನೋಂದಣಿ ವಿಧಾನ: ಅಂಚೆ ಕಚೇರಿ ಮತ್ತು ನಗರಸಭೆ ಯೋಜಿಸಿರುವ ಆಧಾರ್ ಕೇಂದ್ರಗಳಲ್ಲಿ ನಿಮ್ಮ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಮೂಲ ದಾಖಲೆಗಳ ದೃಢಿಕರಣಕ್ಕಾಗಿ ಗುರುತಿನ ಚೀಟಿ, ವಿಳಾಸ ಹಾಗೂ ಜನ್ಮ ದಿನಾಂಕದ ದಾಖಲೆಗಳ ಮೂಲ ಪ್ರತಿಗಳನ್ನು ನೀಡಬೇಕು.
ದಾಖಲೆ ಪರಿಶೀಲಿಸಿದ ನಂತರ ಬಯೋವುಟ್ರಿಕ್ ವ್ಯವಸ್ಥೆಯಡಿ 10 ಬೆರಳುಗಳು ರೇಖೆಗಳು, ಕಣ್ಣಿನ ಅಕ್ಷಿಪಟಲ ಹಾಗೂ ಭಾವಚಿತ್ರ ತೆಗೆಯಲಾಗುತ್ತದೆ.
ಕಂಪ್ಯೂಟರ್‌ಗೆ ಮಾಹಿತಿ ಅಳವಡಿಸಿದ ನಂತರ ಮೂಲ ದಾಖಲೆ ಪತ್ರಗಳನ್ನು ತಕ್ಷಣವೆ ವಾಪಸು ನೀಡಲಾಗುತ್ತದೆ. ನೋಂದಣಿ ಪ್ರಕ್ರಿಯೆ ಮುಗಿದ ನಂತರ ಸಂಬಂಧಪಟ್ಟವರಿಗೆ ಸ್ವೀಕೃತಿ ರಸೀದಿ ನೀಡಲಾಗುತ್ತದೆ. ಆಮೇಲೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನಿಮಗೊಂದು 16 ಅಂಕಿಗಳ ಸಂಖ್ಯೆಗಳನ್ನು ನೀಡಿ, ನಿಮ್ಮ ವಿಳಾಸಕ್ಕೆ ಪೋಸ್ಟ್ ಮೂಲಕ ನೇರವಾಗಿ ಮನೆಗೆ ಕಳುಹಿಸುವ ಯೊಜನೆ ಇದಾಗಿದೆ.
ಇನ್ನೂ ಸಿಕ್ಕಿಲ್ಲ; ನಗರದ ಪ್ರಧಾನ ಅಂಚೆ ಕಚೇರಿ ಹಾಗೂ ಸ್ಥಳೀಯ ನಗರಸಭೆ ಆಯೋಜಿಸಿರುವ ಕೇಂದ್ರಗಳಲ್ಲಿ ಈಗಾಗಲೇ ನಗರದಲ್ಲಿ ನಗರಸಭೆಯಿಂದ 36 ಸಾವಿರ, ಅಂಚೆ ಕಚೇರಿಯಿಂದ 48 ಸಾವಿರ ಅರ್ಜಿಗಳನ್ನು ವಿತರಿಸಲಾಗಿದೆ. ಆದರೆ ಅರ್ಜಿ ಪಡೆದು ಹಿಂತಿರುಗಿಸಿದ ಯಾವೊಬ್ಬರಿಗೂ ಕಾರ್ಡ್ ಸಿಕ್ಕಿಲ್ಲ. ಏಕೆಂದರೆ, ನಿಮ್ಮ ಅರ್ಜಿ ಕೇಂದ್ರದ ವಿಶಿಷ್ಟ ಗುರುತಿನ ಸಂಖ್ಯಾ ಪ್ರಾಧಿಕಾರಕ್ಕೆ ಹೋಗಿ ಅವರು ನೀಡುವ 16 ಸಂಖ್ಯೆಯನ್ನು ದೃಢಿಕರಿಸಿ ಸುಮಾರು ಎರಡು ತಿಂಗಳ ನಂತರ ನಿಮ್ಮ ಮನೆಗೆ ಬರಲಿದೆ.
ಏನೆಲ್ಲಾ ಪ್ರಯೋಜನ: ಈ ಆಧಾರ್ ಕಾರ್ಡ್ ಎಲ್ಲರಿಗೂ ದೊರೆತ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಎಲ್ಲಾ ಸೌಲಭ್ಯಗಳನ್ನು ಇದರ ಅಡಿಗೆ ತರಲಿವೆ. ರೇಷನ್ ಕಾರ್ಡ್‌ಗೆ ಲಿಂಕ್ ನೀಡಲಿದೆ. ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆಯಲು ಈ ಕಾರ್ಡ್ ಇದ್ದರೆ ಸಾಕು, ಬೇರೆ ಯಾವುದೇ ಪ್ರಮಾಣ ಪತ್ರದ ಅವಶ್ಯಕತೆ ಇರುವುದಿಲ್ಲ.
ನಿವೃತ್ತ ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಓ) ನಿರ್ವಹಿಸುವ ಇಪಿಎಫ್ ಯೋಜನೆಯಡಿ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಪ್ರಸಕ್ತ ಇರುವ 5 ಕೋಟಿಗೂ ಹೆಚ್ಚು ಇಪಿಎಫ್‌ಓನ ಕಾರ್ಮಿಕರು ಈ ವರ್ಷದ ಜೂನ್ 30ರೊಳಗೆ ಸಂಸ್ಥೆಗೆ ತಮ್ಮ ಆಧಾರ್ ಸಂಖ್ಯೆಗಳನ್ನು ಒದಗಿಸಬೇಕಾಗಿದೆ. ಹೊಸ ಸದಸ್ಯರು ಕೂಡ ಮಾ.1ರೊಳಗೆ ಆಧಾರ್ ಕಾರ್ಡ್ ಸಂಖ್ಯೆಗಳನ್ನು ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಪಿಎಫ್ ಹಣ ಪಡೆಯುವ ವೇಳೆ ಸಮಸ್ಯೆ ಆಗಬಹುದು.
ಮುಂದಿನ ದಿನಗಳಲ್ಲಿ ಆಧಾರ್ ಸಂಖ್ಯೆ ಎಲ್ಲರಿಗೂ ಕಡ್ಡಾಯವಾಗಲಿದೆ. ತುರ್ತು ಇದ್ದವರು ಮೊದಲೇ ಹೋಗುತ್ತಾರೆ. ನೀವು ಸಮಯವಾದಾಗ ಹೋಗಿ, ಆದರೆ ಖಂಡಿತಾ ಹೋಗಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.