ಕಾಡಾನೆ ದಾಳಿ: ಆನೆ ಸಾವು
ಶಿವಮೊಗ್ಗ: ಕಾಡಾನೆಗಳ ದಾಳಿಯಿಂದ ಸಕ್ರೆಬೈಲು ಆನೆ ಬಿಡಾರದ ಸದಸ್ಯ ರಾಜೇಂದ್ರ (33) ಎಂಬ ಗಂಡಾನೆ ದುರಂತ ಸಾವು ಕಂಡ ಘಟನೆ ಅರಣ್ಯದೊಳಗೆ ನಡೆದಿದೆ. ಭಾನುವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಬೆಳಿಗ್ಗೆ ಎಂದಿನಂತೆ ಗಂಡಾನೆ ರಾಜೇಂದ್ರ ಸೇರಿದಂತೆ ಬಿಡಾರದಲ್ಲಿರುವ ಇತರೆ ಆನೆಗಳಿಗೆ ಬಿಡಾರದ ಸಿಬ್ಬಂದಿ ತುಂಗಾ ನದಿಯಲ್ಲಿ ಸ್ನಾನ ಮಾಡಿಸಿ, ಆಹಾರ ನೀಡಿ ಸಮೀಪದ ಕಾಡಿನಲ್ಲಿ ಮೇವಿಗಾಗಿ ಬಿಟ್ಟಿದ್ದರು. ಭಾನುವಾರ ಬೆಳಿಗ್ಗೆ ಕಾಡಿನಿಂದ ಸಾಕಾನೆಗಳನ್ನು ಮತ್ತೆ ಬಿಡಾರಕ್ಕೆ ಕರೆತರಲು ಹೋದ ವೇಳೆ ಜೇನುಕಲ್ಲುಸರ ಪ್ರದೇಶದಲ್ಲಿ ರಾಜೇಂದ್ರ ಮೃತಪಟ್ಟಿರುವುದು ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಈ ವಿಷಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮುಟ್ಟಿಸಿದರು.
ಕಾಡಾನೆ ದಾಳಿ: ಸಾಕಾನೆಗಳು ಕಾಡಿನಲ್ಲಿ ಮೇವು ಅರಸಿ ತೆರಳಿದ ವೇಳೆ ಆಗಾಗ್ಗೆ ಕಾಡಾನೆಗಳು ಅಡ್ಡಿಪಡಿಸುವುದು ಸಾಮಾನ್ಯ ಸಂಗತಿ. ಇದೇ ರೀತಿ ಶನಿವಾರ ಅಥವಾ ಭಾನುವಾರ ಮುಂಜಾನೆ ರಾಜೇಂದ್ರ ಹಾಗೂ ಕಾಡಾನೆಗಳು ಮುಖಾಮುಖಿಯಾಗಿರುವ ಸಾಧ್ಯತೆಯಿದೆ. ಈ ವೇಳೆ ಎರಡು ಸಲಗಗಳ ನಡುವೆ ಕಾಳಗ ಏರ್ಪಟ್ಟು ಕಾಡಾನೆಯ ದಾಳಿಗೆ ಗುಡ್ಡದ ಮೇಲ್ಭಾಗದಿಂದ ಆನೆ ರಾಜೇಂದ್ರ ಕೆಳಕ್ಕೆ ಪಲ್ಟಿಯಾಗಿ ಬಿದ್ದಿದೆ.
ಬಿದ್ದ ರಭಸಕ್ಕೆ ಗುಡ್ಡದ ಸಣ್ಣಪುಟ್ಟ ಮರಗಳು ಜರಿದು ಹೋಗಿವೆ. ಆನೆಯ ತಲೆಯ ಮೂಳೆ ಮುರಿದು ಹೋಗಿದ್ದು, ದೇಹ ಅಲ್ಲಲ್ಲಿ ನಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.
ಆನೆಯ ತಲೆ ಹಾಗೂ ಹಿಂಭಾಗದಲ್ಲಿ ದಂತದಿಂದ ತಿವಿದ ಗಾಯಗಳು ಕಂಡುಬಂದಿವೆ. ಈ ಗುರುತಿನ ಆಧಾರದ ಮೇಲೆ ಕಾಡಾನೆಗಳು ದಾಳಿ ಮಾಡಿರುವ ಸಾಧ್ಯತೆಯಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಯ ನಂತರ ಕಾಡಿನಲ್ಲಿಯೇ ಸಾಂಪ್ರದಾಯಿಕ ವಿಧಿ ವಿಧಾನದ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಯಿತು.
ರಾಜೇಂದ್ರ ಈ ಮೊದಲು ಕೊಲ್ಲೂರು ದೇವಾಲಯದಲ್ಲಿದ್ದ ಆನೆ. ಪಳಗಿಸುವ ಉದ್ದೇಶದಿಂದ 2006ರರಲ್ಲಿ ಸಕ್ರೆಬೈಲು ಆನೆ ಬಿಡಾರಕ್ಕೆ ಒಂದು ವರ್ಷದ ಅವಧಿಗೆ ಬಿಡಲಾಗಿತ್ತು. ಆದರೆ ನಂತರ ದೇವಾಲಯದವರು ಅರಣ್ಯ ಇಲಾಖೆಗೆ ಹಸ್ತಾಂತರಿಸಿಬಿಟ್ಟರು. ಕಳೆದ 17 ವರ್ಷಗಳಿಂದ ರಾಜೇಂದ್ರ ಈ ಬಿಡಾರದಲ್ಲಿಯೇ ಸದಸ್ಯನಾಗಿತ್ತು.
ಸೂತಕದ ಛಾಯೆ: ರಾಜೇಂದ್ರನನ್ನು ಮಾವುತ ಗೌಸ್ಖಾನ್ ಹಾಗೂ ಕಾವಾಡಿ ಅನ್ವರ್ ಪೋಷಿಸುತ್ತಿದ್ದರು. ಪ್ರತಿದಿನ ಸ್ನಾನ, ಆಹಾರ, ತರಬೇತಿಯನ್ನು ಇವರೇ ನೋಡಿಕೊಳ್ಳುತ್ತಿದ್ದರು. ಸಾವು ಗೌಸ್ ಹಾಗೂ ಅನ್ವರ್ ಅವರನ್ನು ಶೋಕದಲ್ಲಿ ಮುಳುಗಿಸಿದೆ.
ಘಟನೆಯಿಂದಾಗಿ ಇಡೀ ಆನೆ ಬಿಡಾರದ ಸಿಬ್ಬಂದಿಯಲ್ಲಿ ಸೂತಕದ ಛಾಯೆ ಆವರಿಸಿದೆ. ಕಳೆದ ವರ್ಷವಷ್ಟೇ ಬಿಡಾರದ ಹಿರಿಯ ಆನೆ ಮೃತಪಟ್ಟಿದ್ದು, ಆ ವಿಚಾರ ಸುಧಾರಿಸಿಕೊಳ್ಳುವಾಗಲೇ ರಾಜೇಂದ್ರನ ಸಾವು ಅರಗಿಸಿಕೊಳ್ಳುವುದು ಇಲ್ಲಿನ ಸಿಬ್ಬಂದಿಗೆ ಕಷ್ಟವಾಗಿದೆ. ರಾಜೇಂದ್ರ ಹೆಚ್ಚು ತೊಂದರೆ ಕೊಡದೇ ಶಾಂತಿಯಿಂದ ವರ್ತಿಸುವ ಸ್ವಭಾವದವನಾಗಿದ್ದ. ಸಾವಿಗೆ ಈ ಅಂಶವೇ ಕಾರಣವಾಗಿರಬಹುದೆಂದು ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

