ಶಿವಮೊಗ್ಗ

ಬಡವರಿಗೆ ನಿವೇಶನ ಗಗನ ಕುಸುಮ

Published On :

ಶಿವಮೊಗ್ಗ: ಭೂಮಿ ಬೆಲೆ ಗಗನಕ್ಕೇರಿದ ನಡುವೆಯೇ ಹಾಗೂ ಹೀಗು ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಒಂದು ಸೈಟು ಅಪೇಕ್ಷಿಸಿದ ನಗರದ ನಿವಾಸಿಗಳು ಅರ್ಜಿ ಸಲ್ಲಿಸಿದ್ದಕಷ್ಟೇ ತೃಪ್ತಿ ಪಡಬೇಕಾಗಿದೆ.
ಏಕೆಂದರೆ, ಸೈಟಿಗಾಗಿ ನಡೆಯುವ ಅದೃಷ್ಟ ಪರೀಕ್ಷೆ ಸದ್ಯಕ್ಕಂತೂ ನಡೆಯುವುದಿಲ್ಲ.
 ಅರ್ಥಾತ್, ತರಾತುರಿಯಲ್ಲಿ ಬಿಸಿಲ ಬೇಗೆಯಲ್ಲಿ ಬೆಂದು, ಪೊಲೀಸರ ಲಾಠಿ ಏಟು ತಿಂದು ನಗರಸಭೆಗೆ ಅರ್ಜಿ ಸಲ್ಲಿಸಿದ ಪ್ರಯತ್ನಕ್ಕೆ ಸದ್ಯಕ್ಕಂತೂ ಬೆಲೆ ಇಲ್ಲ. ಇದು ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗಬೇಕಾಗಿರುವ ವಾಜಪೇಯಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಸಂಬಂಧಿಸಿದ ಮಾತು.
ಆಗಿದ್ದಿಷ್ಟು: ಶಿವಮೊಗ್ಗ ನಗರಸಭೆ ವಾಜಪೇಯಿ ವಸತಿ ಯೋಜನೆ ಅಡಿ ಅರ್ಹ ಬಿಪಿಎಲ್ ಕಾರ್ಡುದಾರರಿಂದ ಅರ್ಜಿ ಆಹ್ವಾನಿಸಿತ್ತು. ಗೋವಿಂದಾಪುರ ಹಾಗೂ ಗೋಪಿಶೆಟ್ಟಿ ಕೊಪ್ಪದಲ್ಲಿ ಕ್ರಮವಾಗಿ 48.13 ಎಕರೆ ಹಾಗೂ 19.23 ಎಕರೆಯಲ್ಲಿ ವ್ಯವಸ್ಥಿತ ಬಡಾವಣೆ ನಿರ್ಮಿಸಿ, ಚುನಾವಣೆಗೂ ಮುನ್ನ ನಿವೇಶನ ಹಂಚಿ ಮತದಾರರನ್ನು ಸೆಳೆಯುವುದು ಶಾಸಕರಾದಿಯಾಗಿ, ಸ್ಥಳೀಯ ಸಂಸ್ಥೆ  ಜನಪ್ರತಿನಿಧಿಗಳ ಉದ್ದೇಶವಾಗಿತ್ತು.
 ಸುಮಾರು 1800 ಸೈಟುಗಳನ್ನು ಹಂಚಿಕೆ ಮಾಡಬಹುದೆಂದು ಒಂದು ಅಂದಾಜು ಲೆಕ್ಕವೂ ಸಿದ್ಧವಾಯ್ತು. ಈ ಮಧ್ಯೆ ಅರ್ಜಿ ಆಹ್ವಾನ ಮಾಡುತ್ತಿದ್ದಂತೆ 20 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಪಡೆದುಕೊಂಡರು, 16 ಸಾವಿರ ಜನ ಭರ್ತಿ ಮಾಡಿದ ಅರ್ಜಿಯನ್ನು ನಗರಸಭೆಗೆ ಪುನಾ ಸಲ್ಲಿಸಿದರು.
ಮುಂದೇನು? ಅರ್ಜಿ ಸ್ವೀಕರಿಸಿದ ನಗರಸಭೆ ಇಷ್ಟರಲ್ಲಾಗಲೇ ಅರ್ಜಿ ಪರಿಶೀಲನಾ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿತ್ತು. ಆದರೆ ಈ ವರೆಗೆ  ಈ ಕಾರ್ಯ ನಡೆದಿಲ್ಲ. ಇದೆಲ್ಲದರ ನಡುವೆ, ಸದ್ಯವೇ ನಗರಸಭೆ ಹಾಗೂ ವಿಧಾನಸಭೆ ಚುನಾವಣೆ ಎದುರಾಗಲಿರುವುದರಿಂದ ಅಷ್ಟರೊಳಗೆ ತಮ್ಮ ಆಪ್ತರಿಗೆ ಆಶ್ರಯ ನಿವೇಶನ ದೊರಕಿಸಿಕೊಡಬೇಕೆಂದು ಜನಪ್ರತಿನಿಧಿಗಳು ಮುಂದಾದರು.
 35 ನಗರಸಭೆ ಸದಸ್ಯರು, ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ತಲಾ 15 ಆಶ್ರಯ ಸೈಟುಗಳ ಅರ್ಜಿ ನೀಡಲಾಗಿತ್ತು. ಇವರಿಂದ ಪಡೆದ ಅರ್ಜಿಯನ್ನು ಭರ್ತಿ ಮಾಡಿಕೊಟ್ಟವರಿಗೆ ಸೈಟು ಕಾಯಂ.
ಆದರೆ, ನಗರಸಭೆ ಈ ವರೆಗೆ ಅರ್ಜಿ ಪರಿಶೀಲನಾ ಕಾರ್ಯಕ್ಕೇ ಅಡಿ ಇಟ್ಟಿಲ್ಲ. ಸುಮಾರು 15 ಸಾವಿರ ಮಂದಿಯ ಅರ್ಜಿಯನ್ನು ಪರಿಶೀಲಿಸಿ ಅರ್ಹರನ್ನು ಮೊದಲು ಆಯ್ಕೆ ಮಾಡಬೇಕು. ಅರ್ಹತಾ ಪಟ್ಟಿಯಾದ ನಂತರ ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಂಗವಿಕಲರು, ಸೈನಿಕರು, ಹಿರಿಯ ನಾಗರಿಕರಿಗೆಂದು ಮೀಸಲು ನಿಗದಿಮಾಡಬೇಕು. ನಂತರವಷ್ಟೇ ಸೈಟು ಹಂಚಲು ಸಾಧ್ಯ.
ಸದ್ಯದ ಪರಿಸ್ಥಿತಿ ನೋಡಿದರೆ, ಯಾವುದೇ ಕಾರಣಕ್ಕೂ ಇನ್ನಾರು ತಿಂಗಳು ಈ ಪ್ರಕ್ರಿಯೆಯೇ ಆರಂಭವಾಗುವುದಿಲ್ಲ.
 ಸ್ಥಳೀಯ ಸಂಸ್ಥೆ ಚುನಾವಣೆಯ ದಿನಾಂಕ ಘೋಷಣೆ, ಚುನಾವಣೆ ನಂತರ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಘೋಷಣೆಯಾದರೆ, ಈ ಪ್ರಕ್ರಿಯೆ ನಡೆಸಲು ಅವಕಾಶವಿರುವುದಿಲ್ಲ. ಹೀಗಾಗಿ ಸೈಟಿಗೆ ಅರ್ಜಿ ಸಲ್ಲಿಸಿದವರ ಕನಸು ಸದ್ಯಕ್ಕಂತೂ ನನಗಾಸುವ ಅವಕಾಶವಿಲ್ಲವಾಗಿದೆ.
ನಿರ್ಗಮಿತ ಡಿಸಿ ಬಾಂಬ್: ಸೈಟುಗಳಲ್ಲಿ ಜನಪ್ರತಿನಿಧಿಗಳ ಕೋಟಾ ಮಾಡಿಕೊಳ್ಳುವ ಸ್ಥಳೀಯ ಪ್ರಭಾವಿ ರಾಜಕೀಯ ನಾಯಕರ ಆಕಾಂಕ್ಷೆಗೆ ನಿರ್ಗಮಿತ ಡಿಸಿ ಸರಿಯಾದ ಪೆಟ್ಟುಕೊಟ್ಟಿದ್ದಾರೆ. ವರ್ಗಾವಣೆಯಾಗುವ ಕೆಲವೇ ದಿನಗಳ ಮುಂಚೆ ಆದೇಶವೊಂದನ್ನು ಹೊರಡಿಸಿ, ಕಾನೂನು ಬದ್ಧವಾಗಿ, ನಿಯಮಬದ್ಧವಾಗಿ ಸೈಟು ಹಂಚಿಕೆ ಮಾಡುವಂತೆ ಕಟ್ಟಾಜ್ಞೆ ಹೊರಡಿಸಿದ್ದಾರೆ.
 ಆದೇಶದಲ್ಲಿ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡುವುದು, ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಸಾರ್ವಜನಿಕ ಪ್ರಕಟಣೆ ಮಾಡುವುದು, ಆಕ್ಷೇಪಣೆ ಸ್ವೀಕರಿಸುವುದು, ಪರಿಷ್ಕೃತ ಅರ್ಜಿದಾರರ ಪಟ್ಟಿ ಸಿದ್ಧಪಡಿಸಿ ಪ್ರಕಟಿಸುವುದು ಸೇರಿದಂತೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ.
 ಇಷ್ಟೇ ಅಲ್ಲದೆ, ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಹಾಗೂ ಛಾಯಾ ಚಿತ್ರಗಳನ್ನು ಕಡ್ಡಾಯವಾಗಿ ತೆಗೆಸುವುದು, ಅರ್ಹ ವ್ಯಕ್ತಿಗಳ ಪಟ್ಟಿಯನ್ನು ಲಾಟರಿ ಮುಖಾಂತರ ಆಯ್ಕೆ ಮಾಡುವುದು, ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸುವುದೂ ಸಹ ಸೇರಿದೆ.
ಕೊನೆಯದಾಗಿ ಸಾರ್ವಜನಿಕರಲ್ಲಿ ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ, ಅರ್ಹರಿಗೆ ಮಾತ್ರ ನಿವೇಶನ ಸಿಕ್ಕಿದೆ ಎಂಬ ಭಾವನೆ ಬರಬೇಕು ಎಂಬ ಹೇಳಿಕೆಯನ್ನು ಮಾರ್ಮಿಕವಾಗಿ   ಆದೇಶದಲ್ಲಿ ಹೇಳಿದ್ದಾರೆ.
 ಹೀಗಾಗಿ ತರಾತುರಿಯಲ್ಲಿ ನಿವೇಶನ ಹಂಚಿ ಹಿರೋ ಎನಿಸಿಕೊಳ್ಳಬೇಕೆಂದುಕೊಂಡವರಿಗೆ ಹಾಗಲಕಾಯಿ ತಿಂದ ಅನುಭವವಾಗಿದೆ.
-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.