ಶಿವಮೊಗ್ಗ

ಆಯನೂರಿಗೆ ಪ್ರ.ದ. ಕಾಲೇಜು, ಪಾಲಿಟೆಕ್ನಿಕ್

Published On :

ಶಿವಮೊಗ್ಗ: ಆಯನೂರಿನಲ್ಲಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಾಲಿಟೆಕ್ನಿಕ್ ತೆರೆಯಬೇಕೆಂಬ ಸಂಸದ ಆಯನೂರು ಮಂಜುನಾಥ್ ಬೇಡಿಕೆಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸ್ತು ಎಂದಿದ್ದಾರೆ.
ಆಯನೂರಿನಲ್ಲಿ ತುಂಗಾ ಏತ ನೀರಾವರಿ ಯೋಜನೆ ಸೇರಿದಂತೆ ವಿವಿಧ ಯೋಜನೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಜಗದೀಶ್ ಶೆಟ್ಟರ್, ಈ ಘೋಷಣೆ ಮಾಡಿದರು.
ಬಜೆಟ್‌ನಲ್ಲಿ ಗ್ರಾಮೀಣ ಸರ್ಕಾರಿ ವ್ಯವಸ್ಥೆಗೆ ಸೇರಿದ ಕಟ್ಟಡ, ಮೂಲ ಸೌಕರ್ಯಕ್ಕೆಂದು ಹಣ ಮೀಸಲಿಟ್ಟಿದ್ದು, ಈ ಹಣದಲ್ಲಿ ಆಯನೂರು ಗ್ರಾಪಂಗೆ ನೂತನ ಕಟ್ಟಡ ಕಟ್ಟಿಸಿಕೊಳ್ಳಲು ಅವಕಾಶವಿದೆ ಎಂದೂ ಈ ಸಂದರ್ಭದಲ್ಲಿ ತಿಳಿಸಿದರು.
ಉತ್ತಮ ಪ್ರತಿಕ್ರಿಯೆ: ತಾವು ಮಂಡಿಸಿದ ಬಜೆಟ್ ಬಗ್ಗೆ ಮಾಧ್ಯಮ ಹಾಗೂ ಜನತೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ವರ್ಗ, ಎಲ್ಲಾ ಜಿಲ್ಲೆ, ಗ್ರಾಮೀಣ- ರೈತ, ನೀರಾವರಿ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೂ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ ಎಂದು ಹೇಳಿದರು.
 ಹೊಸ ತಾಲೂಕು ಘೋಷಣೆಯಂತೆ ಅತಿ ದೊಡ್ಡ ಗ್ರಾಪಂ ಗಳನ್ನೂ ವಿಂಗಡಿಸುವ ಯೋಚನೆ ಸರ್ಕಾರದ ಮುಂದಿದೆ. 20 ಸಾವಿರ, 30 ಸಾವಿರ, 40 ಸಾವಿರ ಜನಸಂಖ್ಯೆ ಇರುವ ಗ್ರಾಪಂಗಳೂ ಇವೆ. ಹೀಗಾಗಿ ಅವುಗಳನ್ನು ಆದ್ಯತೆ ಮೇಲೆ ವಿಂಗಡಿಸಿ, ಜೊತೆಗೆ ಪಪಂ, ನಗರಸಭೆಯಾಗಿಯೂ ಮೇಲ್ದರ್ಜೆಗೇರಿಸುವ ಕಾರ್ಯ ಮಾಡುತ್ತೇವೆ. ಈಗಾಗಲೇ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದರು.
ತುಂಗಾ ಮೇಲ್ದಂಡೆ ಸಾಕಾರ: ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂಸದ ಬಿ.ವೈ.ರಾಘವೇಂದ್ರ, ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಒತ್ತಾಸೆಯಂತೆ, ಬಿಎಸ್‌ವೈ, ಶೆಟ್ಟರ್ ಆದ್ಯತೆ ಕೊಟ್ಟ ಮೇರೆಗೆ ತುಂಗಾ ಏತ ನೀರಾವರಿ ಈ ಯೋಜನೆ ಸಾಕಾರಗೊಳ್ಳುತ್ತಿದೆ ಎಂದರು.
 ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ, ಆಹಾರ ಉತ್ಪಾದನೆ ಕುಂಠಿತವಾಗಿಲ್ಲ. ಇದಕ್ಕೆ ನೀರಾವರಿ ವ್ಯವಸ್ಥೆ ಕಾರಣ. ಸರ್ಕಾರದ ಯೋಜನೆಗಳ ವಿಸ್ತರಣೆ, ರೈತರ ವೈಯಕ್ತಿಕ ವ್ಯವಸ್ಥೆಗಳು ಇದಕ್ಕೆ ಕಾರಣ ಎಂದ ಅವರು, ಕಳೆದ ನಾಲ್ಕುವರೆ ವರ್ಷದಲ್ಲಿ 7 ಲಕ್ಷ ಎಕರೆಗೆ ನೀರಾವರಿ ಪ್ರದೇಶ ಸೃಷ್ಟಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ನೀರಾವರಿ ದಶಕ ಇದಾಗಿದ್ದು, ಅತಿ ಹೆಚ್ಚಿನ ಹಣ ನೀರಾವರಿಗೆ ಬಳಕೆ ಮಾಡಿ ಕ್ರಾಂತಿ ಮಾಡಲಾಗಿದೆ. ಈ ಹಿಂದೆ ಒಂದು ಸಾವಿರ ರುಪಾಯಿ ಹಣ ಮೀಸಲಿಟ್ಟು ರು. 3-4 ಕೋಟಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುತ್ತಿತ್ತು. ಆದರೆ, ಈಗ ವ್ಯವಸ್ಥೆಗೆ ತಿಲಾಂಜಲಿ ಹಾಡಲಾಗಿದೆ ಎಂದ ಅವರು, ತುಂಗಾ ಏತನೀರಾವರಿ ಯೋಜನೆಗೆ 15 ದಿನದಲ್ಲಿ ವರ್ಕ್ ಆರ್ಡರ್ ಕೊಡುವುದಾಗಿ ತಿಳಿಸಿದರು.
ಆದಾಯ ಆಯೋಗ: ಅನ್ನದಾತನ ಆದಾಯ ಪತ್ತೆಹಚ್ಚಿ ಯೋಜನೆಗಳನ್ನು ರೂಪಿಸುವ ಯೋಚನೆ ಸರ್ಕಾರದ್ದು. ಈ ಕಾರಣಕ್ಕಾಗಿಯೇ ಪ್ರತ್ಯೇಕ ರೈತರ ಆದಾಯ ಆಯೋಗ ರಚಿಸಲಾಗಿದೆ. ಇದರಿಂದ ರೈತರ ಬದುಕಿಗೆ ಶಕ್ತಿ ಬರುತ್ತದೆ ಎಂದು ಹೇಳಿದರು.
ಡಿಸಿಎಂ ಈಶ್ವರಪ್ಪ, ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸದ ಆಯನೂರು ಮಂಜುನಾಥ್, ಶಾಸಕ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ, ಶಿವಮೊಗ್ಗ ನಗರಸಭೆ ಅಧ್ಯಕ್ಷ ಚನ್ನಬಸಪ್ಪ, ಕಾಡಾ ಅಧ್ಯಕ್ಷ ಗಿರೀಶ್ ಪಟೇಲ್ ಸೇರಿದಂತೆ ತಾ. ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.