ಶಿವಮೊಗ್ಗ

ಆರೋಗ್ಯ ಸೇವೆಗೆ 'ನಗು ಮಗು'

Published On :

ಶಿವಮೊಗ್ಗ: ಸುರಕ್ಷಿತ ಹೆರಿಗೆಗಾಗಿ ಸರ್ಕಾರ ಈಗಾಗಲೇ 108 ಅಂಬ್ಯುಲೆನ್ ಸೇವೆ ಆರಂಭಿಸಿದೆ. ಇದಕ್ಕೆ ಸೇರ್ಪಡೆಯಾಗಿ ಹೆರಿಗೆಯ ನಂತರ ತಾಯಿ ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಯೋಜನೆಯನ್ನೂ ರಾಜ್ಯ ಸರ್ಕಾರ ಆರಂಭಿಸಲಿದ್ದು, ಅದಕ್ಕೆ 'ನಗು ಮಗು'ಎಂದು ಹೆಸರಿಟ್ಟಿದೆ.
   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಅವರು ಭಾನುವಾರ ನಗರದಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
   ಈ ರೀತಿಯ ಯೋಜನೆ ಗುಜರಾತ್, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ. ರಾಜ್ಯದಲ್ಲಿಯೂ ಸಹ ಜಾರಿಗೆ ತರಲಾಗುವುದು ಎಂದರು. ಹೆರಿಗೆಯ ನಂತರ ತಾಯಿಮಗುವನ್ನು ಮನೆಗೆ ಬಿಡುವುದಕ್ಕಾಗಿಯೇ ಹೊಸ ವಾಹನಗಳನ್ನು ಖರೀದಿಸಲಾಗುವುದು ಎಂದು ಅವರು ಹೇಳಿದರು.
104ಕ್ಕೆ ಕರೆ ಮಾಡಿ: ತಲೆನೋವು, ಹೊಟ್ಟೆನೋವು ಇತ್ಯಾದಿ ಖಾಯಿಲೆಗಳಿಗೆ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಾಣುವ ಬದಲು ದೂರವಾಣಿ 104ಕ್ಕೆ ಕರೆ ಮಾಡಿ ವೈದ್ಯರಿಗೆ ರೋಗ ಲಕ್ಷಣಗಳನ್ನು ಹೇಳಿದರೆ ಸಣ್ಣಪುಟ್ಟ ಪರಿಹಾರವನ್ನು, ಸೇವಿಸಬಹುದಾದ ಔಷಧ ವಿವರ ಪಡೆಯುವ ಯೋಜನೆಯನ್ನೂ ಸಹ ರೂಪಿಸಲಾಗಿದೆ.
 ರೋಗಲಕ್ಷಣವನ್ನು ವೈದ್ಯರಿಗೆ ಹೇಳಿದ ನಂತರ ಅಗತ್ಯವಿದ್ದರೆ 108 ಅಂಬ್ಯೂಲೆನ್ಸ್ ಸಹ ರೋಗಿಯ ಬಳಿ ಕಳುಹಿಸಬಹುದು ಎಂದರು.
ಆರೋಗ್ಯಶ್ರೀ ಯೋಜನೆ ವಿಸ್ತರಣೆ: ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಕಾರ್ಯ ಶಿವಮೊಗ್ಗದಿಂದ ಆಗುತ್ತಿದೆ ಎಂದರು.
  ಸಂಸದ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಹೇಮಪಾವನಿ, ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಜಿಲ್ಲಾ ಪಂಚಾಯ್ತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರಿ ಷಣ್ಮುಖಪ್ಪ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ದೇವಿಭಾಯಿ ಧರ್ಮಾನಾಯ್ಕ್, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಂಜಯ್ ಬಿಜ್ಜೂರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ವಿ.ಬಿ. ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಎನ್. ಶಿವಣ್ಣ ರೆಡ್ಡಿ, ಜಿಲ್ಲಾ ಸರ್ಜನ್ ಎನ್. ತಿಪ್ಪೇಶ್ ಮತ್ತಿತ್ತರರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.