ಶಿವಮೊಗ್ಗ

ಜಾತಿ ವ್ಯವಸ್ಥೆ: ಆತಂಕ

Published On :

ಶಿವಮೊಗ್ಗ: ಕನಕದಾಸ, ಬಸವಣ್ಣ ಸೇರಿದಂತೆ ಮಹಾನ್ ಪುರುಷರನ್ನು ಯಾವುದೇ ಜಾತಿಗೆ ಸೀಮಿತಗೊಳಿಸದೇ ಎಲ್ಲ ವರ್ಗದವರು ಪೂಜ್ಯ ಭಾವನೆಯಿಂದ ಕಾಣಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
 ಕುವೆಂಪು ರಂಗಮಂದಿರದಲ್ಲಿ ವಿವಿಧ ಸಂಘ- ಸಂಸ್ಥೆ ಆಶ್ರಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಕನಕ ಜಯಂತಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ತಮ್ಮದೇ ಆದ ತತ್ವ, ಸಿದ್ಧಾಂತ ಪ್ರತಿಪಾದಿಸಿದ್ದ ಮಹಾನ್ ಪುರುಷರನ್ನು ಆಯಾ ಜಾತಿಯ ನಾಯಕರೆಂದು ಬಿಂಬಿಸಲಾಗುತ್ತಿದೆ. ಇದ್ದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ಜಾತಿ ವ್ಯವಸ್ಥೆಯ ಆತಂಕ: ಪ್ರಸ್ತುತ ಸಮಾಜದಲ್ಲಿ ಜಾತಿ ವ್ಯವಸ್ಥೆ ಉಂಟಾಗಿರುವುದು ಆತಂಕ ತಂದಿದೆ. ಆದರೆ, ಈ ಬಗ್ಗೆ ಶತಮಾನಗಳ ಹಿಂದೆಯೇ ಕನಕದಾಸರಂತ ಮಹಾನ್ ಪುರುಷರು ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ್ದರು. ಅಂದೇ ನಮಗೆಲ್ಲ ಮಾರ್ಗದರ್ಶನ ಮಾಡಿದ್ದರು. ಇದನ್ನು ತಿಳಿದು ನಾವೆಲ್ಲ ಕನಕದಾಸರ ತತ್ವ, ಆದರ್ಶಗಳಲ್ಲಿ ಸಮಾಜ ಮುನ್ನಡೆಸುವ ಕೆಲಸ ಮಾಡಬೇಕಾಗಿದೆ. ಯುವ ಸಮುದಾಯದ ಸುಧಾರಣೆಗೆ ಶ್ರಮಿಸಬೇಕಾಗಿದೆ ಎಂದು ಸಲಹೆ ನೀಡಿದರು.
  ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಪ್ರೊ. ಬಿ.ಎಲ್. ರಾಜು ಉಪನ್ಯಾಸ ನೀಡಿ, ಕನಕದಾಸರು ಕನ್ನಡ ಪ್ರಜ್ಞೆ, ಸಂಸ್ಕೃತಿಗಳ ಬಗ್ಗೆ ಅಪಾರವಾಗಿ ತಿಳಿದಿದ್ದ ಮಹಾನ್ ನಾಯಕರು. ವಿಜಯನಗರದ ಅಭಿವೃದ್ಧಿ ಆಗಲು ಕನಕದಾಸರು ಕೂಡ ಶ್ರಮಿಸಿದ್ದಾರೆ. ವಿಜಯನಗರದಲ್ಲಿ ನಡೆದ ಒಂದು ಯುದ್ಧದಲ್ಲಿ ಕಂಡ ಸೋಲಿನಿಂದ ಅಧ್ಯಾತ್ಮದ ಬಗ್ಗೆ ಒಲವು ಬೆಳೆಸಿಕೊಂಡು ನಂತರ ದಾಸ ದಿಕ್ಷೆ ಪಡೆಯುತ್ತಾರೆ ಎಂದರು.
ಕನಕದಾಸರು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಮೋಹನ ತರಂಗಿಣಿ ಎಂಬ ಪುಸ್ತಕ ಬರೆದರು. ನಂತರ ದಾಸರಾಗಿ ದಿಕ್ಷೆ ಪಡೆದಾಗ ನಳ ಚರಿತ್ರೆ, ಹರಿಭಕ್ತ ಚರಿತ್ರೆ, ನಳಭಕ್ತಸಾರ ಎಂಬ ಪುಸ್ತಕಗಳನ್ನು ಬರೆದರು. ಆದರೆ, ಅವರ ಜೀವನದಲ್ಲಿ ಹೆಚ್ಚಾಗಿ ಕಾಡಿದ ವಿಷಯವೆಂದರೆ ಜಾತಿಯತೆ. ಇದನ್ನು ಹೋಗಲಾಡಿಸಲು ಅವರು ಬಹಳಷ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದರು.
  ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಉಪವಿಭಾಗಧಿಕಾರಿ ವೈಶಾಲಿ, ನಗರ ಕೋಶಾಭಿವೃದ್ಧಿ ಅಧಿಕಾರಿ ರವಿ, ನಗರಸಭೆ ಅಧ್ಯಕ್ಷ ಚನ್ನಬಸಪ್ಪ, ಉಪಾಧ್ಯಕ್ಷ ರಾಮು, ಸೂಡಾ ಅಧ್ಯಕ್ಷ ದತ್ತಾತ್ರಿ, ಜಿಪಂ ಉಪಾಧ್ಯಕ್ಷೆ ಹೇಮಾ ಪಾವನಿ, ತಾಪಂ ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.