ರಾಯಚೂರು

ರೈತ ಸಮುದಾಯದಲ್ಲಿ ಕಾರ್ಮೋಡ

Published On :

  ಅಮರೇಶಸ್ವಾಮಿ ಬಲ್ಲಟಗಿ
ಲಿಂಗಸ್ಗೂರು: ಮುಂಗಾರು ಮಳೆ ನಂಬಿದ್ದ ರೈತ ಸಮುದಾಯದಲ್ಲಿ ಕಾರ್ಮೋಡ ಕವಿದಿದೆ. ಜೂನ್ ಮೊದಲ ವಾರದಲ್ಲಿ ಸುರಿಯಬೇಕಿದ್ದ ಮಳೆ ತಿಂಗಳಾದರೂ ಕಾಣಿಸಿಲ್ಲ. ಪರಿಣಾಮ ಕೃಷಿ ಕಾರ್ಯಕ್ಕೆ ಮಂಕು ಕವಿದಿದ್ದು, ರೈತ ವಿಚಲಿತನಾದ್ದಾನೆ. ದಾಸ್ತಾನು ಮಾಡಿದ ಬಿತ್ತನೆ ಬೀಜ, ರಸಗೊಬ್ಬರ ವ್ಯಾಪಾರ ನೀರಸಗೊಂಡು ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಅಂಗಡಿಗಳು ಖರೀದಿದಾರರಿಲ್ಲದೆ ಬೀಕೋ ಎನ್ನುತ್ತಿವೆ.
ತಾಲೂಕಿನಲ್ಲಿ ಕಳೆದ ಬೇಸಿಗೆಯಲ್ಲಿ ಅಕಾಲಿಕ ಆಲಿಕಲ್ಲು ಮಳೆ ಸುರಿದು ಕೃಷಿ ಉತ್ಪನ್ನಗಳು ಹಾನಿಗೀಡಾಗಿ ಕಾಂಗಾಲಾದ ರೈತರು ಜೂನ್ ತಿಂಗಳಲ್ಲಿ ಮೃಗಶಿರಾ ಮಳೆ ಸುರಿಯುವ ನಿರೀಕ್ಷೆಯಿಂದ ಭೂಮಿ ಹದಗೊಳಿಸಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಮತ್ತೆ ಕೆಲವರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದ್ದರು. ಆದರೆ ತಿಂಗಳಾಂತ್ಯ ಸಮೀಪಿಸಿದರೂ ಸಮರ್ಪಕ ಮಳೆಯಾಗದೆ ರೈತರಲ್ಲಿ ಭೀತಿ ಮೂಡಿಸಿದೆ.
ನಿರೀಕ್ಷೆಯಂತೆ ಮುಂಗಾರು ಮಳೆ ಸುರಿಯದೆ ವಿಳಂಬವಾದ ಪರಿಣಾಮ ಕೃಷಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿ ರೈತರು ಆಕಾಶದತ್ತ ಮುಖ ಮಾಡಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ಹಳ್ಳಿಗಳಲ್ಲಿ ಮಳೆ ವಿಳಂಬದಿಂದ ನೀರಿನ ಅಭಾವ ಎದುರಾಗಿದೆ.
ವ್ಯಾಪಾರ ವಹಿವಾಟಿಗೆ ಹಿನ್ನಡೆ: ಮುಂಗಾರು ಹಂಗಾಮು ಬಿತ್ತನೆ ಪ್ರಯುಕ್ತ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆ ಅನುಸಾರ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದ್ದು, ಆದರೆ ಮುಂಗಾರು ಮಳೆ ವಿಳಂಬದಿಂದ ವ್ಯಾಪಾರ ವಹಿವಾಟಿಗೆ ಹಿನ್ನಡೆ ಉಂಟಾಗಿದೆ. ಕೃಷಿ ಇಲಾಖೆಯ ಜೂ.23ರ ವರೆಗಿನ ಮಾಹಿತಿ ಪ್ರಕಾರ- ಲಿಂಗಸ್ಗೂರು, ಗುರುಗುಂಟಾ, ಮುದಗಲ್, ಮಸ್ಕಿ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ- 20.00 ಕ್ವಿಂ. ದಾಸ್ತಾನಿನಲ್ಲಿ 5.60 ಕ್ವಿಂ. ಮಾರಾಟವಾದರೆ 14.40 ಕ್ವಿಂ. ಉಳಿಕೆ ಕಂಡು ಬಂದಿದೆ. ಬತ್ತ- 643.75 ಕ್ವಿಂ. ದಾಸ್ತಾನಿನಲ್ಲಿ 382.50 ಕ್ವಿಂ. ಮಾರಾಟ, 261.25 ಕ್ವಿಂ. ಉಳಿಕೆ. ಹೆಸರು- 3.20 ಕ್ವಿಂ. ದಾಸ್ತಾನಿನಲ್ಲಿ 1.10 ಕ್ವಿಂ. ಮಾರಾಟ, 2.10 ಕ್ವಿಂ. ಉಳಿಕೆ. ಸಜ್ಜೆ- 214.83 ಕ್ವಿಂ. ದಾಸ್ತಾನಿನಲ್ಲಿ 18.48 ಕ್ವಿಂ. ಮಾರಾಟ, 200.34 ಕ್ವಿಂ. ಉಳಿಕೆ. ಸೂರ್ಯಕಾಂತಿ-17.50 ಕ್ವಿಂ. ದಾಸ್ತಾನಿನಲ್ಲಿ 13.30 ಕ್ವಿಂ. ಮಾರಾಟವಾಗಿ 4.20 ಕ್ವಿಂಟಲ್ ಉಳಿಕೆ ಕಂಡು ಬಂದಿದೆ.
ಆದರೆ ಕಳೆದ ವರ್ಷ ಜೂನ್ನಲ್ಲಿ ಸಮರ್ಪಕ ಮುಂಗಾರು ಮಳೆಯಾದ ಪ್ರಯುಕ್ತ ರೈತ ಸಂಕರ್ಪಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ಅಗತ್ಯ ಬೇಡಿಕೆಗೆ ಅನುಸಾರ ಮಾರಾಟವಾಗಿದೆ. 2013- 14ನೇ ಸಾಲಿನ ಮಾಹಿತಿ ಪ್ರಕಾರ ಬತ್ತ- 93.30 ಕ್ವಿಂ. ದಾಸ್ತಾನಿನಲ್ಲಿ 34.10 ಕ್ವಿಂ. ಮಾರಾಟವಾಗಿತ್ತು. ಅದೇ ರೀತಿ ಹೆಸರು- 78.45 ಕ್ವಿಂ. ದಾಸ್ತಾನಿನಲ್ಲಿ 24.50 ಕ್ವಿಂ, ಸಜ್ಜೆ- 251.38 ಕ್ವಿಂ. ದಾಸ್ತಾನಿನಲ್ಲಿ 113.200 ಕ್ವಿಂ, ಸೂರ್ಯಕಾಂತಿ- 218.38 ಕ್ವಿಂ. ದಾಸ್ತಾನಿನಲ್ಲಿ 106.93 ಕ್ವಿಂಟಲ್ ಮಾರಾಟವಾಗಿತ್ತು.
ಅಂದರೆ ಕಳೆದ ಸಾಲಿನ ಜೂನ್ ಮಾಹೆಯಲ್ಲಿ ಸಮರ್ಪಕ ಮಳೆಯಾದ ಪ್ರಯುಕ್ತ ಬಿತ್ತನೆ ಬೀಜ ಮಾರಾಟ ಉತ್ತಮ ಕಂಡುಬಂದರೆ, ಪ್ರಸಕ್ತ ವರ್ಷ ಮುಂಗಾರು ಮಳೆ ವಿಳಂಬದಿಂದ ಬಿತ್ತನೆ ಬೀಜ ಮಾರಾಟದಲ್ಲಿ ಹಿನ್ನೆಡೆ ಕಾಣಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.