ರಾಯಚೂರು

ತೋಟದಲ್ಲಿ ಪಪಂ ರಾಜಕೀಯ!

Published On :

ಮುದಗಲ್: ಪಪಂ ಸದಸ್ಯ ವೀರೇಶ ವಡ್ಡರ, ಅಧ್ಯಕ್ಷ ರಜ್ಜವಲಿ ಟಿಂಗ್ರಿ ಅವರನ್ನು ಕೈಗೊಂಬೆ ಮಾಡಿಕೊಂಡು ಅಧಿಕಾರ ದುರುಪಯೋಗ ಮಾಡುತ್ತಿರುವುದನ್ನು ವಿರೋಧಿಸಿ 13 ಸದಸ್ಯರು ಅಧ್ಯಕ್ಷ ರಜಬಲಿ ವಿರುದ್ಧ ಅವಿಶ್ವಾಸಕ್ಕೆ ಮುಂದಾಗುವ ಮೂಲಕ ಪಪಂ ಸದಸ್ಯರಲ್ಲಿ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ.
ಪಪಂನಲ್ಲಿ ಒಟ್ಟು 19 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶನ ಸದಸ್ಯರನ್ನು ಒಳಗೊಂಡಿದ್ದು, ಕೆಲವು ಆಡಳಿತ ಸದಸ್ಯರು ಹಾಗೂ ಪ್ರತಿಪಕ್ಷದವರಿಗೆ ಅಧ್ಯಕ್ಷರ ಪರವಾಗಿ ಆಡಳಿತ ನಡೆಸುತ್ತಿರುವ ಸದಸ್ಯರಿಂದ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ 10 ಚುನಾಯಿತ ಸದಸ್ಯರು ಹಾಗೂ 3 ನಾಮ ನಿರ್ದೇಶನ ಸದಸ್ಯರು ಗುರುವಾರ ಪ.ಪಂ. ಸಭಾಂಗಣದಲ್ಲಿ ನಡೆಯಬೇಕಿದ್ದ ಬಜೆಟ್ ಮಂಡನೆ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ತೋಟದಲ್ಲಿ ಸಭೆ: ಅಧ್ಯಕ್ಷರ ಪರವಾಗಿ ಸರ್ವಾಧಿಕಾರಿ ಎಂಬಂತೆ ಪ.ಪಂ. ಸದಸ್ಯ ವೀರೇಶ ವಡ್ಡರ್ ವರ್ತಿಸುತ್ತಿರುವುದು ಇನ್ನುಳಿದ ಸದಸ್ಯರಿಗೆ ಬೇಸರ ಉಂಟು ಮಾಡಿದೆ. ಅಭಿವೃದ್ಧಿ ವಿಚಾರದಲ್ಲಿ ಕೆಲವು ಆಡಳಿತ ಸದಸ್ಯರನ್ನು ಹಾಗೂ ಮಹಿಳಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧ್ಯಕ್ಷರ ಪರವಾಗಿ ತಾವೇ ಸರ್ವಾಧಿಕಾರ ಚಲಾಯಿಸುತ್ತಿರುವುದರಿಂದ ಬೇಸತ್ತ 13 ಸದಸ್ಯರು ಸಭೆಗೆ ಹಾಜರಾಗಿಲ್ಲ. ಪಟ್ಟಣದ ಹೊರವಲಯದ ತೋಟವೊಂದರಲ್ಲಿ ಸಭೆ ಸೇರಿ ಮುಂದಿನ ರಾಜಕೀಯದ ಬೆಳವಣಿಗೆಯ ಬಗ್ಗೆ ಚಿಂತನೆ ನಡೆಸಿದ್ದಾರೆ.
ಅವ್ಯವಹಾರ: ಪ.ಪಂ. ಸದಸ್ಯರಿಗೆ ಸಭೆಯ ನಡೆವಳಿಕೆ ಪ್ರತಿ ನೀಡಲು ಕೂಡ ತಕರಾರು ಹಾಗೂ ಅಭಿವೃದ್ಧಿ ವಿಚಾರದಲ್ಲಿ ಮಾಡುತ್ತಿರುವ ತಾರತಮ್ಯ ಧೋರಣೆ ವಿರೋಧಿಸಿ ಸದಸ್ಯ ವೀರೇಶ ವಡ್ಡರ್ ಸರ್ವಾಧಿಕಾರಿ ಧೋರಣೆ ಖಂಡಿಸಿದರು.
ಒಳಜಗಳ: ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಉದ್ದೆಶವಿಲ್ಲ. ಆದರೆ ಅಧ್ಯಕ್ಷರನ್ನು ಕೈಗೊಂಬೆ ಮಾಡಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು ಅಸಮಾಧಾನಕ್ಕೆ ಕಾರಣ. ಅಲ್ಲದೆ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಬೇರೆ ದಾರಿ ಇಲ್ಲದೇ ಅವಿಶ್ವಾಸ ಮಂಡಿಸುವುದು ಅನಿವಾರ್ಯವಾಗಿದೆ ಎಂದು ಸದಸ್ಯರು ತಿಳಿಸಿದರು. ಮುಂದಿನ ಬಜೆಟ್ ಮಂಡನೆ ಸಭೆಗೆ ಹಾಜರಾಗಿ ಸರ್ವ ಸದಸ್ಯರ ಒಮ್ಮತದ ನಿರ್ಣಯ ಪಡೆದು ರಾಜಕೀಯದ ಹೆಜ್ಜೆ ಇಡಲಿದ್ದೇವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈಗಾಗಲೇ ಆಡಳಿತ ಮಂಡಳಿಯ ಸದಸ್ಯರ ಒಳಜಗಳ ಭುಗಿಲೆದ್ದಿದೆ ಎಂದು ಅಸಮಧಾನಗೊಂಡಿರುವ ಸದಸ್ಯರಾದ ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತ ನಾಗಲಾಪುರ, ಸದಸ್ಯರಾದ ವೀರಭದ್ರಪ್ಪ ಕೊಳ್ಳಿ, ಶಿವರಾಜ ತಳವಾರ, ಮಾಸೂಮ್ ಷರೀಫ್, ರಾಮಣ್ಣ ಹೊಸಮನಿ, ಶರಣಮ್ಮ ನಂದಪ್ಪ ಕತ್ತಿ, ಬಸಮ್ಮ ಹಿರೇಮನಿ, ನೀಲಮ್ಮ ಹೊರಪೇಟೆ, ಗದ್ದೆಮ್ಮ ಹಂಚಿನಾಳ, ಸಾಹೇರಾಬಾನು ಸೇರಿದಂತೆ ನಾಮನಿರ್ದೇಶನ ಸದಸ್ಯರಾದ ನಾಗರಾಜ ದಫೇದಾರ, ಇಸ್ಮಾಯಿಲ್, ರಘುವೀರ, ಎಪಿಎಂಸಿ ನಿರ್ದೇಶಕ ರಸೂಲ್,  ರಾಮಣ್ಣ ಹಿರೇಮನಿ ಸಭೆ ಸೇರಿ ಮೇಲಿನಂತೆ ನಿರ್ಧರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.