ಸಂಗಮೇಶ್ವರ ಜಾತ್ರಾ ಮಹೋತ್ಸವ
ಮುದಗಲ್: ಸಮೀಪದ ಕನ್ನಾಪುರಹಟ್ಟಿದ ಕೂಡಲ ಸಂಗಮೇಶ್ವರ ಜಾತ್ರಾ ಮಹೋತ್ಸವ ಶ್ರಾವಣ ಮೊದಲ ಸೋಮವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಸಂಗಮೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮಾಡಲಾಯಿತು. ಗ್ರಾಮದ ಮಾರುತೇಶ್ವರ ದೇವಸ್ಥಾನದಿಂದ ಭಜನೆ, ಡೊಳ್ಳು, ವಾದ್ಯ ಮೇಳದೊಂದಿಗೆ ಸಂಗಮೇಶ್ವರ ದೇವಸ್ಥಾನದವರೆಗೆ ಕಳಶ ಮೆರವಣಿಗೆ, ದೇವಸ್ಥಾನಕ್ಕೆ ಕಳಶರೋಹಣ ನಡೆಸಲಾಯಿತು. ನಂತರ ಧಾರ್ಮಿಕ ಪೂಜೆ ಹಾಗೂ ಜವಳ, ಹರಕೆ ಸಲ್ಲಿಸುವ ಕಾರ್ಯ, ಅನ್ನಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದ ನೇತೃತ್ವ ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ ವಹಿಸಿದ್ದರು. ಅಮರಗುಂಡ ಸ್ವಾಮೀಜಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಶರಣಗೌಡ ಬಯ್ಯಾಪುರ, ಡಾ. ಗುರುರಾಜ ದೇಶಪಾಂಡೆ, ಅಶೋಕಗೌಡ, ಮಹಾಂತೇಶ ಪಾಟೀಲ್, ಶಿವಶಂಕರಗೌಡ ಉಪ್ಪಾರನಂದಿಹಾಳ, ಸುರೇಶಗೌಡ ಪಾಟೀಲ್, ಚಂದ್ರಣ್ಣ, ಆದಪ್ಪ ಜಾಲಿಹಾಳ, ಶಂಕ್ರಯ್ಯ, ಮಲ್ಲಪ್ಪ, ಹನುಮಂತ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.
ಮರ ಬಿದ್ದು ವಿದ್ಯಾರ್ಥಿನಿಗೆ ಗಾಯ: ಸಹಾಯಕ್ಕೆ ಮನವಿ
ಜೇವರ್ಗಿ: ತಾಲೂಕಿನ ಹಿಪ್ಪರಗಾ (ಎಸ್.ಎನ್.) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿ ಮೇಲೆ ಮರ ಉರುಳಿ ಗಂಭೀರವಾಗಿ ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು 5ನೇ ತರಗತಿಯ ಕಲಾವತಿ ಮಲ್ಲಪ್ಪ ಉಮ್ಮರಗಿ ಎಂದು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಬಾಲಕಿಯನ್ನು ಮರಳಿ ಗ್ರಾಮಕ್ಕೆ ಕರೆತರಲಾಗಿದೆ. ಆಕಸ್ಮಿಕವಾಗಿ ಜರುಗಿದ ಘಟನೆಗೆ ಯಾರು ಹೊಣೆಗಾರರಲ್ಲ. ಆದರೂ ಮಾನವೀಯ ದೃಷ್ಟಿಯಿಂದ ಶಿಕ್ಷಣ ಇಲಾಖೆ ಬಾಲಕಿಯ ಚಿಕಿತ್ಸೆಗೆ ವೆಚ್ಚ ಭರಿಸಬೇಕಾಗಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಗಾಯಗೊಂಡ ಬಾಲಕಿಗೆ ಪೂರ್ಣ ಪ್ರಮಾಣದ ಚಿಕಿತ್ಸೆಗಾಗಿ ಸ್ಪಂದಿಸುವುದು ಅಗತ್ಯವಾಗಿದೆ. ಬಾಲಕಿ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಬಾಲಕಿ ತಂದೆ ಮಲ್ಲಪ್ಪ ಉಮ್ಮರಗಿ ತಿಳಿಸಿದ್ದಾರೆ.
ಹೆದ್ದಾರಿ ತಡೆ ನಾಳೆ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಭೈರಾಮಡಗಿ ಗ್ರಾಮಕ್ಕೆ ಬರುತ್ತಿರುವ ಅಸಮರ್ಪಕ ಬಸ್ ಸೇವೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ಆ.1ರಂದು ಗೊಬ್ಬುರ ಬಿ. ರಾಜ್ಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಂಡಿದ್ದಾರೆ. ಗ್ರಾಮಕ್ಕೆ ಬರುವ ಬಸ್ ಈ ಮುಂಚೆ ಗ್ರಾಮದಿಂದ ಸ್ಟೇಷನ್ ಗಾಣಗಾಪುರಕ್ಕೆ ಮಾತ್ರ ಹೋಗಿ ಬರುತ್ತಿತ್ತು. ಆದರೆ ಈಗ ಬಸ್ಸನ್ನು ಆಳಂದ ತಾಲೂಕಿನ ನಿಂಬರ್ಗಾವರೆಗೂ ವಿಸ್ತರಿಸಿರುವುದು ತೊಂದರೆಗೆ ಕಾರಣವಾಗಿದೆ. ಇದರಿಂದ ಒಂದೂವರೆ ಗಂಟೆ ಸಮಯ ಹಿಡಿಯುತ್ತಿದೆ. ಹೀಗಾಗಿ ಬಸ್ ಸೇವೆ ಇದ್ದೂ ಇಲ್ಲದಂತಾಗಿದೆ.
ಈ ಬಗ್ಗೆ ಮೇಲಧಿಕಾರಿಗಳು ಗಮನ ಹರಿಸಿ ಭೈರಾಮಡಗಿ ಬಸ್ ಮೊದಲಿನ ಹಾಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಚ್ಚರಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೂ ಗ್ರಾಮಸ್ಥರು ದೂರು ನೀಡಿದ್ದಾರೆ.
ದಸಂಸಗೆ ನೇಮಕ
ರಾಯಚೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪೌರ ಕಾರ್ಮಿಕ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಾಜು ಬೊಮ್ಮನಾಳ್ ಹಾಗೂ ಕಾರ್ಮಿಕ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ತಾಯಪ್ಪ ವಕೀಲರನ್ನು ನೇಮಕ ಮಾಡಿ ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಅವರು ಕೂಡಲೇ ಸಂಘಟನೆ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಘಟನೆ ಬಲವರ್ಧನೆಗೆ ಏಳಿಗೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ.
ವಿವಿಧೆಡೆ ಜಾತ್ರೆ: ಬಸ್ ಸೌಲಭ್ಯ
ರಾಯಚೂರು: ತಾಲೂಕಿನ ಕಲ್ಮಲಾ ಮತ್ತು ಆಂಧ್ರದ ಉರುಕುಂದಿಯಲ್ಲಿ ಶ್ರಾವಣ ಮಾಸದಲ್ಲಿ ನಡೆಯಲಿರುವ ಜಾತ್ರೆಗಳಿಗೆ ತೆರಳಲು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ಘಟಕದಿಂದ ಭಕ್ತರಿಗೆ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಶ್ರಾವಣ ಮಾಸದ ಪ್ರಯುಕ್ತ, ಪ್ರತಿ ವರ್ಷದಂತೆ ಈ ಬಾರಿಯೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಜು.31ರಂದು ಕಲ್ಮಲಾ ಜಾತ್ರೆ ಮತ್ತು ಉರುಕುಂದಿ ಜಾತ್ರೆ ಹಿನ್ನೆಲೆ ನಗರದಿಂದ ವಿಶೇಷ ಬಸ್ಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರಾವಣ ಮಾಸದಲ್ಲಿ, ಪ್ರತಿ ಸೋಮವಾರ ಮತ್ತು ಗುರುವಾರ ಹೆಚ್ಚಿನ ಪ್ರಯಾಣಿಕರ ಒತ್ತಡ ಕಂಡುಬಂದಲ್ಲಿ, ವಿಶೇಷ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಕಾರಣ ಸದರಿ ಕಲ್ಮಲಾ ಮತ್ತು ಉರುಕುಂದಿಗೆ ಹೋಗಿ ಬರುವ ಪ್ರಯಾಣಿಕರು ಸದರಿ ಬಸ್ ಸೌಕರ್ಯ ಪಡೆಯಲು ಸಂಸ್ಥೆ ಮನವಿ ಮಾಡಿದೆ.
ಮಹಾಸಭಾ ಪ್ರಥಮ ಸಮ್ಮೇಳನ ಇಂದು
ರಾಯಚೂರು: ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿಯಿಂದ ಆ.31ರಂದು ನಗರದಲ್ಲಿ ಛಲವಾದಿ ಮಹಾಸಭಾದ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಜಗನ್ನಾಥ ಸುಂಕಾರಿ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಛಲವಾದಿ ಸಮಾಜದವರನ್ನು ಸಂಘಟಿಸುವ ಉದ್ದೇಶದಿಂದ ಪ್ರಥಮ ಸಮ್ಮೇಳನವನ್ನು ಆಯೋಜಿಸಿದ್ದು, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆಂದು ತಿಳಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಮ್ಮೇಳನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜನಾಂಗದವರು ಪಾಲ್ಗೊಳ್ಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಸಮ್ಮೇಳನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಿದ್ದಾರೆಂದರು. ಸಮ್ಮೇಳನದ ಅಧ್ಯಕ್ಷತೆಯನ್ನು ನಿವೃತ್ತ ಐಎಎಸ್ ಅಧಿಕಾರಿ, ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಕೆ. ಶಿವರಾಂ ವಹಿಸಲಿದ್ದಾರೆ. ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವ ಡಾ. ಮಹದೇವಪ್ಪ, ಮಾಜಿ ಸಚಿವೆ ಮೋಟಮ್ಮ, ಎಂಎಲ್ಸಿ ವೀರಯ್ಯ, ಪ್ರಮುಖರಾದ ನೆಹರೂ ಓಲೇಕಾರ್ ಸೇರಿ ಸಮಾಜದ ಪ್ರಮುಖರು, ಸಾಹಿತಿಗಳು, ಕಲಾವಿದರು, ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆಂದರು. ಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ರವೀಂದ್ರನಾಥ ಪಟ್ಟಿ, ಆರ್. ರವಿಕುಮಾರ್, ಎಂ. ಶಂಕರ್, ನಗರಸಭೆ ಸದಸ್ಯ ಮಹಾಲಿಂಗ, ಸತ್ಯನಾರಾಯಣ ಸೇರಿದಂತೆ ಅನೇಕರಿದ್ದರು.
ಸಂಭ್ರಮದ ರಂಜಾನ್
ಮುದಗಲ್: ಪಟ್ಟಣದಲ್ಲಿ ಮುಸ್ಲಿಮರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ರಂಜಾನ್ ದಿನವಾದ ಮಂಗಳವಾರ ಬಾಗಲಕೋಟೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲಾನ್ ಜಮೀರ್ ಖಾಜಿ ಪ್ರಾರ್ಥನೆ ಮಾಡಿದರು. ನಂತರ ಹಬ್ಬದ ಮಹತ್ವದ ಕುರಿತು ಹೇಳಿದರು. ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮುಖಂಡರಾದ ಪಪಂ ಅಧ್ಯಕ್ಷ ರಜ್ಜವಲಿ ಟಿಂಗ್ರಿ, ಜವೂರ ಸಾಬ್, ಮೈಬೂಬ ಪ್ರೂಟ್, ಮೂಬೀನ್ ವಕೀಲರು, ಸೈಯದ್ ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರಖಾನ್, ಅಮೀರ್ ಬೇಗ್ ಉಸ್ತಾದ್, ಷರೀಫ್ ವಕೀಲ್, ಸೈಯ್ಯದ್ ಸಾಬ್, ಎಂ.ಡಿ. ರಜಾಕ್, ಎಸ್.ಅರ್. ರಸೂಲ್, ಪಪಂ ಸದಸ್ಯರಾದ ಬಂದೇನವಾಜ್, ಸಾದಿಕ್ ಅಲಿ, ಮಾಸೂಮ್ ಷರೀಫ್, ಚಂದಾವಲಿ, ರಫಿ ಎಂ.ಡಿ., ಮೈಬೂಬ, ಅನಿಷಪಾಷಾ ಇದ್ದರು. ನಂತರ ಹಿಂದೂ ಮುಖಂಡರಾದ ಶಾಸಕ ಮಾನಪ್ಪ ವಜ್ಜಲ್, ಆರ್ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಪಿಸಿಸಿ ಸದಸ್ಯ ಶರಣಗೌಡ ಬಯ್ಯಾಪುರ, ಡಾ.ಅಯ್ಯಪ್ಪ ಬನ್ನಿಗೋಳ, ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಹಿರೇಮನಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತ ನಾಗಲಾಪುರ, ಸದಸ್ಯರಾದ ವೀರೇಶ ವಡ್ಡರ, ಶಿವರಾಜ ತಳವಾರ, ಜೆಡಿಎಸ್ ತಾಲೂಕು ಅಧ್ಯಕ್ಷ ವೀರಲಗೌಡ ಲೆಕ್ಕಿಹಾಳ, ಸುರೇಶಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಯಂಕನಗೌಡ ಆದಾಪುರ ಸೇರಿದಂತೆ ಮುಸ್ಲಿಂಮರಿಗೆ ರಂಜಾನ್ ಶುಭಾಶಯ ತಿಳಿಸಿದರು.
ಅಧಿಕಾರಿಗಳ ವಿಳಂಬ ಧೋರಣೆ: ಆರೋಪ
ಸಿಂಧನೂರು: ಸ್ಥಳೀಯ ಕಂದಾಯ ಇಲಾಖೆಯ ಸರ್ವೆ ವಿಭಾಗದ ಅಧಿಕಾರಿಗಳ ವಿಳಂಬ ಧೋರಣೆಯಿಂದ ರೈತರು ತಮ್ಮ ಜಮೀನು ಸರ್ವೆ ಮಾಡಿಸಿಕೊಳ್ಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದು, ಸರ್ವೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಆಗ್ರಹಿಸಿದ್ದಾರೆ. ಈ ಕುರಿತು ಬುಧವಾರ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ರೈತರು ವಿವಿಧ ಕಾರಣಕ್ಕೆ ತಮ್ಮ ಜಮೀನುಗಳನ್ನು ಸರ್ವೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿ ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸಿದ್ದಾರೆ. ಅಲ್ಲದೇ ಅನಿವಾರ್ಯತೆಯಿಂದಾಗಿ ಅಧಿಕಾರಿಗಳು ಕೇಳಿದಷ್ಟು ಹಣವನ್ನು ಕೈಗಿಡುತ್ತಿದ್ದಾರೆ. ಆದರೆ ಒಂದು ವರ್ಷ ಗತಿಸಿದರೂ ಅಧಿಕಾರಿಗಳು ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸಿ ಸರ್ವೆ ಮಾಡಲು ರೈತರ ಹೊಲಗಳಿಗೆ ಬರುತ್ತಿಲ್ಲ. ತಾಲೂಕಿನಲ್ಲಿ ಇಂತಹ ಸುಮಾರು 8 ಸಾವಿರ ಪ್ರಕರಣಗಳು ಹಾಗೇ ಉಳಿದುಕೊಂಡಿವೆ. ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ಕೊಟ್ಟು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಸರ್ವೆ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಇಳಿದಿದ್ದು ಅರ್ಜಿ ಸಲ್ಲಿಸಿದ ನಂತರ ರೈತರಿಂದ 15 ಸಾವಿರವರೆಗೆ ಲಂಚ ಪಡೆಯುತ್ತಿದ್ದಾರೆ. ಕಾರಣ ಕೂಡಲೇ ಸರ್ವೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಮೂಲೆಗೆ ಸೇರಿರುವ ರೈತರ ಅರ್ಜಿಗಳನ್ನು ಪರಿಗಣಿಸಿ ಕೂಡಲೇ ಸರ್ವೆ ಕಾರ್ಯ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬಾವಿಗೆ ಬಿದ್ದು ಬಾಲಕ ಸಾವು
ರಾಯಚೂರು: ತಾಲೂಕಿನ ಅಪ್ಪನದೊಡ್ಡಿ ಗ್ರಾಮದಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಮೃತನನ್ನು ಗುರುಪಾದ(8) ಎಂದು ಗುರುತಿಸಲಾಗಿದೆ. ಈತ ತನ್ನ ಪಾಲಕರೊಂದಿಗೆ ಹೊಲದಲ್ಲಿದ್ದಾಗ ನೀರು ಕುಡಿಯಲು ಬಾವಿಗೆ ತೆರಳಿದ್ದು ಆಯತಪ್ಪಿ ನೀರಿಗೆ ಬಿದ್ದಿದ್ದು ಮೇಲೆ ಬರಲಾಗದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿಗೆ ಅಪಾರ ಹಾನಿ
ರಾಯಚೂರು: ತಾಲೂಕಿನ ವಡ್ಡೆಪಲ್ಲಿ ಗ್ರಾಮದಲ್ಲಿ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.ಗ್ರಾಮದ ಮಲ್ಲೇಶಿ ಎಂಬುವವರಿಗೆ ಸೇರಿದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅದರಲ್ಲಿದ್ದ ಸಾಮಾನು ಸೇರಿ 92 ಮೊತ್ತದ ಆಸ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

