ರಾಯಚೂರು

ಎಂಇಎಸ್ 'ಮಹಾ' ಪುಂಡಾಟಿಕೆ

Published On :

ಕ.ಪ್ರ. ವಾರ್ತೆ     ರಾಯಚೂರು     ಜು. 28
ಬೆಳಗಾವಿ ಜಿಲ್ಲೆಯ ಯಳ್ಳೂರಿನಲ್ಲಿ ಮಹಾರಾಷ್ಟ್ರ ರಾಜ್ಯ ಎಂಬ ನಾಮಫಲಕ ಸ್ಥಾಪಿಸಿದ್ದಲ್ಲದೇ ಪೊಲೀಸರು, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ನಗರಸಭೆ ಕಚೇರಿ ಮುಂದೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಬೆಳಗಾವಿ ಶಾಸಕ ಸಂಭಾಜಿರಾವ್ ಪಾಟೀಲ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ಕೂಡಲೇ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಸಾಕ್ಷಿ: ಸಂಭಾಜಿ ಪಾಟೀಲ್ ಕರ್ನಾಟಕ ರಾಜ್ಯದಲ್ಲಿರುವ ಪ್ರದೇಶದ ಶಾಸಕನಾಗಿ ಇಲ್ಲಿನ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದು ಮಹಾರಾಷ್ಟ್ರ ಗೂಂಡಾಗಳ ಪರವಾಗಿ ಶಾಂತಿಗೆ ಭಂಗ ತರುತ್ತಿರುವುದನ್ನು ಸರ್ಕಾರ ನಿಯಂತ್ರಿಸಬೇಕು. ಕನ್ನಡ ನೆಲದಲ್ಲಿದ್ದು, ಅನ್ಯರಿಗೆ ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದನ್ನು ತಡೆಯಲು ಮುಂದಾಗುವಂತೆ ಆಗ್ರಹಿಸಿದರು.
ಶಾಸಕರ ಬೆಂಬಲದಿಂದಾಗಿ ಬೆಳಗಾವಿ ಮತ್ತು ಆ ತಾಲೂಕಿನ ಗಡಿಭಾಗದಲ್ಲಿ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಹೆಚ್ಚಿದೆ. ಹಗಲಲ್ಲಿಯೇ ಮಾರಕಾಸ್ತ್ರಗಳನ್ನು ಹಿಡಿದು ಹಲ್ಲೆಗೆ ಮುಂದಾಗುತ್ತಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಗೂಂಡಾ ವರ್ತನೆ: ಯಳ್ಳೂರು ಗ್ರಾಮವು ಮಹಾರಾಷ್ಟ್ರದ ಭಾಗ ಎಂದು ಸಾರುವ ನಾಮಫಲಕ ಸ್ಥಾಪಿಸಿದಲ್ಲದೇ ಕೋರ್ಟ್ ಆದೇಶದಂತೆ ತೆರವಿಗೆ ಮುಂದಾದ ಪೊಲೀಸರು ಹಾಗೂ ವರದಿಗಾರಿಕೆಗೆ ತೆರಳಿದ ಮಾಧ್ಯಮದವರ ಮೇಲೆಯೇ ಹಲ್ಲೆ ಮಾಡುವ ಮರಾಠಿ ಸಂಘಟನೆಗಳ ಕಾರ್ಯಕರ್ತರ ಗೂಂಡಾ ವರ್ತನೆಯನ್ನು ಹೋರಾಟಗಾರರು ಖಂಡಿಸಿದರು.
ಕೂಡಲೇ ಶಾಂತಿಗೆ ಭಂಗ ಉಂಟುಮಾಡುತ್ತಿರುವ ಹಾಗೂ ಕೋರ್ಟ್ ಆದೇಶ ಉಲ್ಲಂಘಿಸಿದ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ಸಾರಿಗೆ ಇಲಾಖೆಗೆ ಆದ ನಷ್ಟವನ್ನು ಮಹಾರಾಷ್ಟ್ರ ಸರ್ಕಾರದಿಂದ ಭರಿಸುವಂತೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ಬಿ. ಗಂಗಾಧರ ಸ್ವಾಮಿ, ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿ, ಮುಖಂಡರಾದ ಚಂದ್ರು ಯಕ್ಲಾಸಪುರ, ಬಿ. ರಾಜಶೇಖರ ಇಡಪನೂರು, ಎಚ್. ಅಶೋಕ ಶೆಟ್ಟಿ, ಅಶ್ವಿನಿ ಕಾಂತ, ಸಂತೋಷ ಮಂದಾಲಿ, ಪಿ. ವೀರೇಶ ರೆಡ್ಡಿ, ಸಿದ್ದರಾಮ ಸಿಂಧೆ, ಶಿವಲಿಂಗಪ್ಪ, ತುರಾಬ್ ಅಲಿ ಸೇರಿ ಅನೇಕರಿದ್ದರು.


ಕನ್ನಡಿಗರಿಗೆ ಸೂಕ್ತ ಭದ್ರತೆ ಒದಗಿಸಿ
ಶಾಸಕ ಸಂಭಾಜಿ ಪಾಟೀಲ್ ಶಾಸಕತ್ವ ರದ್ದುಗೊಳಿಸಬೇಕು. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಕಡಿತಗೊಳಿಸಬೇಕು. ಬೆಳಗಾವಿ ಜಿಲ್ಲಾದ್ಯಂತ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿ, ಕನ್ನಡಿಗರಿಗೆ ಸೂಕ್ತ ಭದ್ರತೆ ಒದಗಿಸಬೇಕು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.