ಎಇಇ ಅಮಾನತು
ಲಿಂಗಸ್ಗೂರು: ರಾಜ್ಯ ಸರ್ಕಾರ ಲೋಕಾಯುಕ್ತರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಲಿಂಗಸ್ಗೂರು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹಾಂತಪ್ಪ ಕಣ್ಣೂರ್ ಅವರನ್ನು ಅಮಾನತು ಮಾಡಲಾಗಿದೆ. ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿ ಮಹಾಂತಪ್ಪ ಕಣ್ಣೂರ್ ಅವರ ಇಳಕಲ್ನ ನಿವಾಸದ ಮೇಲೆ 2004, ಏ.25ರಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸ್ಥಿರ, ಚರಾಸ್ತಿ ಮೌಲ್ಯ ಸೇರಿ 1.63 ಕೋಟಿ ಹಾಗೂ 1.27 ಲಕ್ಷ ಮೌಲ್ಯದ ಅಸಮತೋಲನ ಆಸ್ತಿ, ಎರಡು ಮಹಡಿಯ ವಾಣಿಜ್ಯ ಸಂಕೀರ್ಣ, ಎರಡು ಮಹಡಿಯ ಮನೆ, ಟಾಟಾ ಸುಮೋ ವಾಹನ, 130 ಗ್ರಾಂ ಚಿನ್ನ, 6 ಎಕರೆ ಎನ್ಎ ಮಾಡಿದ ಭೂಮಿ ಹೊಂದಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೆ ಅದೇ ದಿನ ಲಿಂಗಸ್ಗೂರಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಸತಿಗೃಹ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಸಿಪಿಐ ಜಗದೀಶ ಹಂಚಿನಾಳ ಹಾಗೂ ಅಧಿಕಾರಿಗಳ ತಂಡ ದಾಳಿ ನಡೆಸಿ 10 ಸಾವಿರ ನಗದು ವಶಪಡಿಸಿಕೊಂಡಿದ್ದರು. ಲೋಕಾಯುಕ್ತರು ನೀಡಿದ ದೂರಿನನ್ವಯ ಲೋಕೋಪಯೋಗಿ ಇಲಾಖೆ ಅಧೀನ ಕಾರ್ಯದರ್ಶಿಗಳು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹಾಂತಪ್ಪ ಕಣ್ಣೂರ್ ಅವರನ್ನು ಅಮಾನತು ಮಾಡಿದ್ದಾರೆ.
'ಮುಗ್ಧ ಜನರ ವಂಚಿಸಲು ಬಾಬಾಗಳು ಉದ್ಭವ'
ಸಿಂಧನೂರು: ಬಹು ಸಂಸ್ಕೃತಿಯ ಈ ದೇಶದಲ್ಲಿ ಸಾವಿರಾರು ಬಾಬಾಗಳು ಹುಟ್ಟಿಕೊಂಡಿದ್ದಾರೆ. ತಮ್ಮ ಹೊಟ್ಟೆ ಹೊರೆಯಲು ಕೆಲವರು ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸುವ ಮೂಲಕ ಹಣ ಕೀಳುತ್ತಿದ್ದರೆ ಮತ್ತೆ ಕೆಲವರು ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ ಎಂದು ವಿಚಾರವಾದಿ ಹಾಗೂ ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ ಕರೆ ನೀಡಿದರು. ನಗರದ ಸತ್ಯ ಗಾರ್ಡನ್ನಲ್ಲಿ ಮನುಜಮತ ಬಳಗ ಆಯೋಜಿಸಿದ್ದ ಪವಾಡ ಬಯಲು ಕಾರ್ಯಕ್ರಮದಲ್ಲಿ ಪ್ರಾಯೋಗಿಕ ಪವಾಡ ನಡೆಸುವ ಮೂಲಕ ಜಾಗೃತಿ ಮೂಡಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ ಗಂಗಪ್ಪ, ಮೌಢ್ಯತೆಗೆ ಒಳಗಾಗಿ ಆಚರಿಸುವ ಆಚರಣೆ, ಸಂಪ್ರದಾಯಗಳು ಸಮಾಜದ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ ಎಂದು ಎಚ್ಚರಿಕೆ ನೀಡಿದರು. ಮಕ್ಕಳ ತಜ್ಞ ಡಾ. ಕೆ. ಶಿವರಾಜ, ಚಿಂತಕ ಪಿ. ವೀರಭದ್ರಪ್ಪ ಕುರುಕುಂದಿ, ವೆಂಕನಗೌಡ ಗದ್ರಟಗಿ, ಗಂಗಾವತಿ ಕಾಲೇಜು ಸಹ ಪ್ರಾಧ್ಯಾಪಕ ದೇವೆಂದ್ರಪ್ಪ, ಬಿಇಒ ವಿರೂಪಾಕ್ಷಪ್ಪ, ಪಿಎಸ್ಐ ಬಾಳನಗೌಡ, ಶಕುಂತಲಾ ನಾಗರೆಡ್ಡಿ ಉಪಸ್ಥಿತರಿದ್ದರು. ಮನುಜಮತ ಬಳಗ ಅಧ್ಯಕ್ಷ ಡಿ.ಎಚ್. ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ವೈ. ನರೇಂದ್ರನಾಥ ಮಾತನಾಡಿದರು. ತಿರುಪತಿ ವಡ್ಕಿ ಸ್ವಾಗತಿಸಿದರು. ಬಸವರಾಜ ಬಾದರ್ಲಿ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

