ರಾಯಚೂರು

ಪೋಷಣಾ ಭತ್ಯೆ ಹೆಚ್ಚಳಕ್ಕೆ ಒತ್ತಾಯ

Published On :

ಕ.ಪ್ರ. ವಾರ್ತೆ    ರಾಯಚೂರು    ಜು. 23
ರಾಜ್ಯದಲ್ಲಿರುವ ಎಲ್ಲ ಅಂಗವಿಕಲರಿಗೆ ಕನಿಷ್ಟ ಮಾಸಿಕ ಪೋಷಣಾ ಭತ್ಯೆ ಹಾಗೂ ಏಕರೂಪದ ಗುರುತಿನ ಚೀಟಿ ವಿತರಣೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿದ್ದು ಅದರಿಂದಾಗಿ ಅಂಗವಿಕಲರು ಜೀವನ ನಿರ್ವಹಿಸುವುದು ಕಷ್ಟವಾಗಿದೆ. ಕಾರಣ ಕನಿಷ್ಟ ಮಾಸಿಕ ಪೋಷಣಾ ಭತ್ಯೆ ನೀಡಬೇಕೆಂದು ಆಗ್ರಹಿಸಿದರು.
ಕಳೆದೊಂದು ದಶಕಗಳಿಂದ ಸತತವಾಗಿ ಬೆಲೆ ಏರಿಕೆಯಾಗುತ್ತಿದೆ. ಆದರೆ ಅಂಗವಿಕಲರಿಗೆ ಸರ್ಕಾರ ಪ್ರತಿ ತಿಂಗಳು 500 ಮಾತ್ರ ಪೋಷಣಾ ಭತ್ಯೆ ರೂಪದಲ್ಲಿ ನೀಡುತ್ತಿದೆ. ಇಷ್ಟೊಂದು ಕಡಿಮೆ ಮೊತ್ತದಲ್ಲಿ ಜೀವನ ನಿರ್ವಹಣೆ ಅಸಾಧ್ಯ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ 3 ಸಾವಿರ ಮಾಸಿಕ ಪೋಷಣಾ ಭತ್ಯೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಸಂದರ್ಭ ಪ್ರಚಾರ ಮಾಡಿ ಭರವಸೆ ನೀಡಿದ್ದರು. ಭರವಸೆ ಹುಸಿಗೊಂಡಿದೆ ಎಂದು ಟೀಕಿಸಿದರು.
ಗುರುತಿನ ಚೀಟಿ- ತೊಂದರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಾದರೂ ಅಂಗವಿಕಲರಿಗೆ ಸಂಬಂಧಿಸಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಅಂಗವಿಕಲರು ಗುರುತಿನ ಚೀಟಿ ಪಡೆದರೂ ಬಸ್‌ಪಾಸ್, ರೈಲು ಪಾಸ್, ಆರೋಗ್ಯ, ಉದ್ಯೋಗ, ಶಿಕ್ಷಣಕ್ಕಾಗಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಬೇರೆ ಬೇರೆ ಗುರುತಿನ ಚೀಟಿ ವ್ಯವಸ್ಥೆ ಜಾರಿ ಮಾಡಿದ್ದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಅಂಗವಿಕಲರು ವಿವಿಧ ಕಚೇರಿಗಳಿಗೆ ಗುರುತಿನ ಚೀಟಿ ಒದಗಿಸುವಂತೆ ಅಲೆಯುವಂತಾಗಿದೆ. ಕೂಡಲೇ ಈಗಿರುವ ಎಲ್ಲ ಗೊಂದಲ ಸರಿಪಡಿಸಿ, ಏಕರೂಪದ ಗುರುತಿನ ಚೀಟಿ ಪದ್ಧತಿ ಜಾರಿಗೆ ತರಬೇಕು. ಶೇ. 40ರಿಂದ 74ರಷ್ಟು ಅಂಗವೈಕಲ್ಯ ಹೊಂದಿದವರಿಗೆ ಕನಿಷ್ಠ 3 ಸಾವಿರ ಪೋಷಣಾ ಭತ್ಯೆ ನೀಡಬೇಕೆಂದು ಆಗ್ರಹಿಸಿದರು.
ಶೇ.75ಕ್ಕಿಂತ ಹೆಚ್ಚಿನ ಪ್ರಮಾಣದ ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಕನಿಷ್ಠ 5 ಸಾವಿರ ಮಾಸಿಕ ಪೋಷಣಾ ಭತ್ಯೆ ನೀಡುವಂತೆ ಆಗ್ರಹಿಸಿದ ಹೋರಾಟಗಾರರು, ಸರ್ಕಾರಗಳಿಂದ ದೊರೆಯುವ ಎಲ್ಲ ರೀತಿಯ ಸೌಲಭ್ಯಗಳ ಬಳಕೆಗೆ ಏಕರೂಪದ ಗುರುತಿನ ಚೀಟಿ ಪದ್ಧತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಒಕ್ಕೂಟದ ಮುಖಂಡರಾದ ಕರಿಯಪ್ಪ ಅಚ್ಚೊಳ್ಳಿ, ವಿಜಯ ಲಕ್ಷ್ಮೀ ಮುದುಗಲ್, ಆದೆಪ್ಪ ದೇವದುರ್ಗ, ಎಂ.ಡಿ. ಮಹ್ಮದ್, ವೀರೇಶ, ಬಸವರಾಜ ಕಲ್ಮಾಲ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.