ಕಠಿಣ ಶಿಕ್ಷೆ ವಿಧಿಸಿ
ರಾಯಚೂರು: ರಾಜ್ಯದ ವಿವಿಧೆಡೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ರಾಜ್ಯ ಸರ್ಕಾರ ಕೂಡಲೇ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಗೃಹ ಸಚಿವ ಜಾರ್ಜ್ ಕೂಡಲೇ ರಾಜಿನಾಮೆ ನೀಡಬೇಕು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬಿಜೆಪಿ ಮತ್ತು ಮಾದಿಗ ದಂಡೋರಾ ಮಾದಿಗ ಮೀಸಲು ಹೋರಾಟ ಸಮಿತಿ ಮಹಿಳಾ ಘಟಕದ ಕಾರ್ಯಕರ್ತರು ಪ್ರತ್ಯೇಕವಾಗಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎರಡೂ ಸಂಘಟನೆಗಳ ಕಾರ್ಯಕರ್ತರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಹೋರಾಟ: ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, 2013ರಲ್ಲಿ ರಾಜ್ಯದಲ್ಲಿ ಒಟ್ಟು 1030 ಅತ್ಯಾಚಾರ ಪ್ರಕರಣ ನಡೆದಿವೆ. 1836 ಅಪಹರಣ ಪ್ರಕರಣಗಳು ದಾಖಲಾಗಿದ್ದು, 2014ರಲ್ಲಿ ಇದುವರೆಗೆ 525 ಅತ್ಯಾಚಾರ ಪ್ರಕರಣಗಳು, 2357 ಲೈಂಗಿಕ ದೌರ್ಜನ್ಯದ ಪ್ರಕರಣಗಳು 1522 ವರದಕ್ಷಿಣೆ ಕೇಸುಗಳು ದಾಖಲಾಗಿವೆ. ಇದು ರಾಜ್ಯದಲ್ಲಿ ಕಾನೂನಿನ ವಾಸ್ತವ ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು. ಎಡಿಜಿಪಿ ರವೀಂದ್ರನಾಥ್ ಪ್ರಕರಣ, ಶಾಸಕ ವಿಜಯಾನಂದ ಕಾಶಪ್ಪನವರ್ ಕೇಸುಗಳಲ್ಲಿ ಗೃಹ ಸಚಿವರು ವರ್ತಿಸಿದ ರೀತಿ ಅವರ ಅಸಹಾಯಕತೆಯನ್ನು ಹೊರಹಾಕಿದೆ. ಸಚಿವರ ಕ್ಷೇತ್ರದಲ್ಲೇ ಅನೇಕ ಅಪರಾಧ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿದ್ದು, ಅದರಿಂದಲೇ ಅವರು ಅಸಮರ್ಥರು ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು.
ರಾಜಿನಾಮೆ ನೀಡಲಿ
ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣರಾಗಿರುವ ಗೃಹ ಸಚಿವ ಜಾರ್ಜ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಅವರು ರಾಜಿನಾಮೆ ನೀಡದಿದ್ದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಸಂಪುಟದಿಂದ ಗೃಹ ಸಚಿವರನ್ನು ಕೈಬಿಡುವಂತೆ ಒತ್ತಾಯಿಸಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಅಶೋಕ ಗಸ್ತಿ, ನರಸಪ್ಪ ಯಕ್ಲಾಸಪುರ, ಬಂಡೇಶ್ ವಲ್ಕಂದಿನ್ನಿ, ರಮಾನಂದ ಯಾದವ್, ಬಿ.ಎಸ್. ಸುರಗೀಮಠ, ನರಸಿಂಗರಾವ್ ಕುಲಕರ್ಣಿ, ರಾಮಚಂದ್ರ ಕಡಗೋಳ, ರಮೇಶ್ ಗುರಮಿ ಟ್ಕಲ್, ಶರಣಮ್ಮ ಕಾಮರೆಡ್ಡಿ ಅನೇಕರಿದ್ದರು.
ಗಲ್ಲಿಗೇರಿಸಿ
ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ ಹಾಗೂ ಅಪರಾಧಿಕಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯರಾಣಿ ಸಿರವಾರ ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರದಂಥ ಕೇಸುಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪೊಲೀಸ್ ಇಲಾಖೆ ಕರ್ತವ್ಯ ಲೋಪ, ಕಾನೂನಿನ ಸಡಿಲತೆ ಮತ್ತು ರಾಜಕೀಯ ನಾಯಕರ ಕುಮ್ಮಕ್ಕು ಅತ್ಯಾಚಾರ ಪ್ರಕರಣಗಳ ಹೆಚ್ಚಳಕ್ಕೆ ದಾರಿ ಮಾಡಿವೆ ಎಂದು ಆರೋಪಿಸಿದರು. ಮಹಿಳೆಯರ ರಕ್ಷಣೆಗೆ ವಿಶೇಷ ಕಾನೂನು ರೂಪಿಸಬೇಕು. ಅತ್ಯಾಚಾರ ಆರೋಪಿಗಳಿಗೆ ತೀವ್ರ ಕಠಿಣ ಶಿಕ್ಷೆಯಾಗಬೇಕು. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆತಂಕದ ಸ್ಥಿತಿಯಿದ್ದು, ಸರ್ಕಾರ ಮಹಿಳಾ ಭದ್ರತೆಗೆ ಒತ್ತು ನೀಡಬೇಕು. ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅತ್ಯಾಚಾರಕ್ಕೊಳಗಾಗಿ ನೊಂದ ಮಹಿಳೆಯರಿಗೆ ಸರ್ಕಾರ 5 ಲಕ್ಷ ಜೀವನಾಂಶ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಹನುಮಂತಿ ಮತ್ತಿತರೆ ಕಾರ್ಯಕರ್ತರಿದ್ದರು.
ಎಬಿವಿಪಿ ಪ್ರತಿಭಟನೆ
ರಾಜ್ಯದಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯ ಪ್ರಕರಣ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯ ಸಾಬೀತುಪಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಗ್ರಾಮೀಣ ಭಾಗ, ಪಟ್ಟಣ, ನಗರ ಪ್ರದೇಶಗಳಲ್ಲಿ ನಿತ್ಯವೂ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದರೂ ಸರ್ಕಾರ ಮಾತ್ರ ಎಚ್ಚೆತ್ತಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಅರಾಜಕತೆ
ಅತ್ಯಾಚಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಪ್ರತಿಭಟನಾ ನಿರತರ ಮೇಲೆಯೇ ಪೊಲೀಸರಿಂದ ಲಾಠಿ ಪ್ರಹಾರ ಮಾಡಿಸುವ ಕಾರ್ಯ ಸರ್ಕಾರ ಮಾಡುತ್ತಿದೆ. ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸದೇ ಕಾಲಹರಣ ಮಾಡುತ್ತಿದ್ದು, ಆ ಮೂಲಕ ರಾಜ್ಯವನ್ನು ಅರಾಜಕತೆಯತ್ತ ಕೊಂಡೊಯ್ದಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಅತ್ಯಾಚಾರ ನಡೆದಲ್ಲಿ ಪೊಲೀಸರು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರಿಗೆ ಆತ್ಮಸ್ಥೆರ್ಯ ತುಂಬಬೇಕೆಂದು ಆಗ್ರಹಿಸಿದರು.
ಎಐಎಂಎಸ್ಎಸ್ನಿಂದ ಪ್ರತಿಭಟನೆ
ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯ ಖಂಡಿಸಿ ನಗರದಲ್ಲಿ ಸೋಮವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಎಐಡಿಎಸ್, ಎಐಡಿವೈಒ ಮತ್ತಿತರೆ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ಮಾನವ ಸರಪಳಿ ನಿರ್ಮಿಸಿ ನಂತರ ಮೆರವಣಿಗೆಯುದ್ದಕ್ಕೂ ಮಾರ್ಗ ಮಧ್ಯೆ ಅಲ್ಲಲ್ಲಿ ಅಂಟಿಸಿದ್ದ ಅಶ್ಲೀಲ ಸಿನೆಮಾ ಪೋಸ್ಟರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಸಿಎಂಗೆ ದೂರು ಸಲ್ಲಿಸಿದರು. ಸಮಾಜದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳಿಂದಾಗಿಯೇ ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರದಂಥ ಪ್ರಕರಣಗಳು ಹೆಚ್ಚಲು ಕಾರಣ ಎಂದ ಕಾರ್ಯಕರ್ತರು, ಅಂತರ್ಜಾಲ, ದೂರದರ್ಶನ, ಸಿನೆಮಾ ಮತ್ತಿತರೆ ಮಾಧ್ಯಮಗಳ ಮೂಲಕ ಅಶ್ಲೀಲ ವಿಚಾರ ಹರಡುತ್ತಿರುವುದು ಸಮಸ್ಯೆಯ ತೀವ್ರತೆ ಹೆಚ್ಚಳಕ್ಕೆ ದಾರಿ ಮಾಡಿದೆ ಎಂದರು. ಯುವಕರಲ್ಲಿ ಉದಾತ್ತ ಮೌಲ್ಯಗಳನ್ನು , ಸಂಸ್ಕೃತಿ ಹಾಗೂ ನೈತಿಕತೆಯನ್ನು ಬೆಳೆಸಲು ಪೂರಕ ಶಿಕ್ಷಣ ಜಾರಿಗೆ ತರಬೇಕು. ವಿದ್ಯಾರ್ಥಿ ಯುವಜನರಲ್ಲಿ ಉನ್ನತ ನೀತಿಗಳನ್ನು ತುಂಬುವ ಕಾರ್ಯ ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಚೇತನಾ ಬನಾರೆ, ಚನ್ನಬಸವ ಜಾನೇಕಲ್, ಸರೋಜಾ ಗೋನವಾರ್, ಸುನೀತಾ, ಶಾಮಲಾ, ಅಹ್ಮದಿ, ಪ್ರಸಾದ್, ರಾಜು ಸೇರಿದಂತೆ ಅನೇಕರಿದ್ದರು.
ಸಮಿತಿ ರಚಿಸಿ
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸದ್ಯದ ಕಾನೂನುಗಳಿಗೆ ತಿದ್ದುಪಡಿ ತರಬೇಕು. ಮಹಿಳೆಯರ ರಕ್ಷಣೆಗೆ ಹಾಗೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಪ್ರಬಲ ಕಾನೂನು ರೂಪಿಸಬೇಕು. ಎಲ್ಲ ಶಾಲಾ-ಕಾಲೇಜು ಹಾಗೂ ವಿವಿ ಕ್ಯಾಂಪಸ್ಗಳಲ್ಲಿ ಮಹಿಳಾ ಸುರಕ್ಷಾ ಸಮಿತಿ ರಚಿಸಲು ಆದೇಶಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಿದ್ದಣ್ಣ, ವಿಜಯ ಸೌದಿಕರ್, ಭೀಮಾಶಂಕರ್ ಪಾಟೀಲ್, ಬಸನಗೌಡ, ವಿದ್ಯಾರ್ಥಿ ಮುಖಂಡರಾದ ಶಿವಕುಮಾರ, ಗೋಪಿ, ಅರುಣಕುಮಾರ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

